ಬಂಟ್ವಾಳ : ಪಾಣೆಮಂಗಳೂರಿನ ನೇತ್ರಾವತಿ ಹಳೆಯ ಉಕ್ಕಿನ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು ರವಿವಾರ ರಾತ್ರಿ ದ್ವಿಚಕ್ರ ವಾಹನ ಸವ್ವಾರರೊಬ್ಬರು ಬಂಟ್ವಾಳ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪಾಣೆಮಂಗಳೂರು ಕಡೆಯಿಂದ ನಾಲ್ಕನೇ ಪಿಲ್ಲರ್ ಬಳಿ ಬಿರುಕು ಕಾಣಿಸಿಕೊಂಡಿದೆ. ರಸ್ತೆಯ ಡಾಮರು ಎದ್ದು ಹೋಗಿದ್ದು, ಬಿರುಕು ಗೋಚರಿಸುತ್ತಿದೆ. ಆದರೆ ಇದು ಸೇತುವೆ ಬಿರುಕು ಬಿಟ್ಟಿರುವುದೋ ಅಥವಾ ಮೇಲಿನ ರಸ್ತೆಯ ಭಾಗದಲ್ಲಿ ಮಾತ್ರ ಬಿರುಕು ಕಂಡುಬಂದಿದೆಯೇ ಎಂಬುದು ಖಚಿತಗೊಂಡಿಲ್ಲ. ಈ ಕುರಿತು ಸಂಬಂಧಪಟ್ಟ ತಜ್ಞರು ಪರಿಶೀಲನೆ ನಡೆಸಿ ವರದಿ ನೀಡಬೇಕಿದೆ
ಈ ಹಿಂದೆ ಬಿ.ಸಿ.ರೋಡ್ ಕಡೆಯಿಂದ ಬರುವ ಗೂಡಿನಬಳಿಯ ಭಾಗದಲ್ಲಿ ಸೇತುವೆ ಕುಸಿತ ಕಂಡು ಬಂದಿತ್ತು. ಹಾಗಾಗಿ ನೂತನ ಸೇತುವೆ ಆ ಸಂದರ್ಭದಲ್ಲಿ ನಿರ್ಮಾಣ ಮಾಡಲಾಗಿತ್ತು. ನೂತನ ಸೇತುವೆ ನಿರ್ಮಾಣ ಆಗುವವರೆಗೆ ಈ ಸೇತುವೆ ಯಾವುದೇ ಘನ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿರಲಿಲ್ಲ. ಆ ಬಳಿಕ ಕುಸಿತ ಕಂಡ ಭಾಗದಲ್ಲಿ ಇಲಾಖೆ ರಿಪೇರಿ ಕಾರ್ಯ ಮಾಡಿತ್ತು. ಆ ಬಳಿಕ ಬಸ್ ಸಹಿತ ಅನೇಕ ಘನ ವಾಹನಗಳು ಈ ಸೇತುವೆಯಲ್ಲಿ ಸಂಚಾರ ನಡೆಸುತ್ತಿದ್ದವು.
ಇದೀಗ ಸೇತುವೆಯಲ್ಲಿ ಮತ್ತೆ ಬಿರುಕು ಕಾಣಿಸಿಕೊಂಡಿರುವುದು ಸ್ಥಳೀಯರ ಸಂಚಾರಕ್ಕೆ ಅಡ್ಡಿಯಾಗಿ ಪರಿಣಮಿಸಿದೆ.
Click this button or press Ctrl+G to toggle between Kannada and English