ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರ ನೇತೃತ್ವದಲ್ಲಿ ಅಕ್ಟೋಬರ್ 28 ಮತ್ತು 29ರಂದು ಉಡುಪಿಯಲ್ಲಿ ನಡೆಯಲಿರುವ ವಿಶ್ವ ಬಂಟರ ಸಮ್ಮೇಳನ -2023 ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಬುಧವಾರ ಸಂಜೆ ನಗರದ ಗೋಲ್ಡ್ ಫಿಂಚ್ ಖಾಸಗಿ ಹೋಟೆಲ್ ನಲ್ಲಿ ಜರುಗಿತು. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.
ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, “ಐಕಳ ಹರೀಶ್ ಶೆಟ್ಟಿಯವರು ಬಂಟ ಸಮಾಜದ ಅತ್ಯಧ್ಭುತ ನಾಯಕ. ಅವರಲ್ಲಿನ ಸಂಘಟನಾ ಶಕ್ತಿ ಇತರರಿಗೆ ಮಾದರಿ. ಇಂದು ವಿಶ್ವ ಬಂಟರ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದ್ದೇವೆ. ಇದು ಬಂಟ ಸಮಾಜದ ಮನೆಮನೆಗೆ ತಲುಪಲಿ ಆ ಮೂಲಕ ಒಂದೇ ವೇದಿಕೆಯಡಿಯಲ್ಲಿ ಸಮಾಜದ ಎಲ್ಲರೂ ಪಾಲ್ಗೊಳ್ಳುವಂತಾಗಲಿ ಸಮ್ಮೇಳನದಿಂದ ಸಮಾಜಕ್ಕೆ ಪ್ರಯೋಜನವಾಗಲಿ” ಎಂದು ಶುಭ ಹಾರೈಸಿದರು.
ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ, “ಕಾರ್ಯಕ್ರಮ ಖಂಡಿತಾ ಯಶಸ್ವಿಯಾಗುತ್ತದೆ. ಆದರೆ ದೊಡ್ಡ ಸಂಖ್ಯೆಯಲ್ಲಿ ನಮ್ಮ ಸಮುದಾಯದ ಜನರನ್ನು ಸೇರಿಸುವ ಮೂಲಕ ನಮ್ಮ ಶಕ್ತಿಯನ್ನು ಈ ಮೂಲಕ ತೋರಿಸಿಕೊಡಬೇಕು” ಎಂದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, “ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮೂಲಕ ಸಮಾಜದ ಜನರ ಹಿತದೃಷ್ಟಿಗಾಗಿ ಸಂಘಟನೆ ಮೂಲಕ ಹತ್ತಾರು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದೇವೆ. ಸಮುದಾಯದ ಎಲ್ಲರನ್ನೂ ಒಂದೇ ವೇದಿಕೆಯಲ್ಲಿ ತರುವ ಉದ್ದೇಶದಿಂದ ವಿಶ್ವ ಬಂಟರ ಸಮ್ಮೇಳನ ಆಯೋಜನೆ ಮಾಡಿದ್ದೇವೆ. ಎಲ್ಲರೂ ಒಗ್ಗಟ್ಟಾಗಿ ಎರಡು ದಿನಗಳ ಕಾಲ ಕಾರ್ಯಕ್ರಮದ ಯಶಸ್ಸಿಗಾಗಿ ಕೆಲಸ ಮಾಡಬೇಕು” ಎಂದರು.
ಬಳಿಕ ಮಾತಾಡಿದ ಬಂಟ್ಸ್ ವೆಲ್ ಫೇರ್ ಟ್ರಸ್ಟ್ ನ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಅವರು, “ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಹೊಸ ದಿಕ್ಕು ತೋರಿಸಿದವರು ಐಕಳ ಹರೀಶ್ ಶೆಟ್ಟಿಯವರು. ಅವರಿಂದ ಇಂದು ಬಂಟರ ಸಂಘಗಳು ಒಗ್ಗಟ್ಟಾಗಿ ಕೆಲಸ ಮಾಡಲಾರಂಭಿಸಿವೆ. ಬಲಿಷ್ಟ ಸಮಾಜದ ನಿರ್ಮಾಣಕ್ಕೆ ಬಂಟರ ಸಮ್ಮೇಳನದ ಯಶಸ್ಸಿಗೆ ನಾವೆಲ್ಲರೂ ಒಟ್ಟಾಗಿ ದುಡಿಯೋಣ” ಎಂದು ಶುಭ ಹಾರೈಸಿದರು.
ಬಳಿಕ ಮಾತು ಮುಂದುವರಿಸಿದ ಮಾಜಿ ಸಚಿವ ಬಿ. ರಮಾನಾಥ್ ರೈ ಅವರು, “ಒಂದು ಐತಿಹಾಸಿಕ ಕಾರ್ಯಕ್ರಮಕ್ಕೆ ನಾವೆಲ್ಲರೂ ದಿನಗಣನೆ ಮಾಡುತ್ತಿದ್ದೇವೆ. ಉಡುಪಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮ ಮತ್ತೊಂದು ಇತಿಹಾಸ ನಿರ್ಮಿಸಲಿದೆ. ನಮ್ಮ ಸಂಘಟನಾ ಶಕ್ತಿ ಈ ಮೂಲಕ ತೋರಿಸಿಕೊಳ್ಳಬೇಕಿದೆ. ಕಾರ್ಯಕ್ರಮದ ಯಶಸ್ಸಿಗೆ ನಾವೆಲ್ಲರೂ ಶ್ರಮಪಡೋಣ” ಎಂದರು.
ವೇದಿಕೆಯಲ್ಲಿ ಬಂಟರ ಮಾತೃ ಸಂಘದ ಉಪಾಧ್ಯಕ್ಷ ಕಾವು ಹೇಮನಾಥ್ ಶೆಟ್ಟಿ, ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಜೊತೆ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ರಂಗೋಲಿ, ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಸುಧಾಕರ ಎಸ್. ಪೂಂಜಾ, ಎ.ಜಗನ್ನಾಥ ಚೌಟ, ಲೋಕೇಶ್ ಶೆಟ್ಟಿ ಕೊಳ, ಸುರೇಶ್ ರೈ ಮಕರಜ್ಯೋತಿ ಮತ್ತಿತರರು ಉಪಸ್ಥಿತರಿದ್ದರು.
ಕರ್ನಿರೆ ವಿಶ್ವನಾಥ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿ, ಪ್ರಖ್ಯಾತ್ ಶೆಟ್ಟಿ ಪ್ರಾರ್ಥಿಸಿದರು.
Click this button or press Ctrl+G to toggle between Kannada and English