ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಮಂಗಳೂರಿನ ರಾಮಕೃಷ್ಣ ಆಶ್ರಮದ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮಸಂವತ್ಸರ ಆಚರಣೆ ಅಂಗವಾಗಿ ಶುಕ್ರವಾರದಿಂದ ನಗರದ ರಾಮಕೃಷ್ಣ ಮಠದಲ್ಲಿ ಆರಂಭವಾದ ಯುವ ಸಮಾವೇಶವನ್ನು ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಕಲ್ಲಡ್ಕ ಡಾ| ಪ್ರಭಾಕರ ಭಟ್ ಉದ್ಘಾಟಿಸಿದರು. ಭಾರತೀಯ ಸಂಸ್ಕೃತಿ – ಪರಂಪರೆಯ ಬಗ್ಗೆ ಅಗಾಧವಾದವಾದ ಅಭಿಮಾನ, ಅದನ್ನು ಇಡಿ ಜಗತ್ತಿನಾದ್ಯಂತ ಪ್ರಚಾರ ಮಾಡಿ, ದೇಶಭಕ್ತಿಯ ಮಂತ್ರ ಜಪಿಸಿಕೊಂಡು ಜಗತ್ತಿನಲ್ಲೇ ಗುರುತಿಸಿಕೊಂಡ ಸ್ವಾಮಿ ವಿವೇಕಾನಂದರ ಆದರ್ಶ ವಿಚಾರಗಳನ್ನು ತತ್ವಾದರ್ಶಗಳನ್ನು ನಾವು ಪಾಲಿಸಬೇಕಾದ ಅಗತ್ಯತೆ ಇದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಪ್ರಾಚೀನ ಕಾಲದಲ್ಲಿ ನಮ್ಮವರು ಯಾರೂ ಮಾಡಿರದ ಸಾಧನೆಗಳನ್ನು ಮಾಡಿದ್ದರು ಆದರೆ ಕ್ರಮೇಣ ಪಾಶ್ಚಾತ್ಯರನ್ನು ಅನುಕರಿಸಿದ್ದರಿಂದ ಇಂದು ನಮ್ಮ ದೇಶವು ಅಭಿವೃದ್ದಿ ಹೊಂದಿದ ದೇಶದ ಬದಲಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಬೇಕಾಯಿತು. ನಾವು ವಿದೇಶಿ ಸಂಸ್ಕೃತಿಗಳನ್ನು ಮರೆತು ದೇಶೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ವಿವೇಕಾನಂದರು ಹಾಕಿ ಕೊಟ್ಟಿರುವ ಪಥದಲ್ಲಿ ಸಾಗುವ ಮೂಲಕ ನಮ್ಮ ದೇಶವನ್ನು ಉನ್ನತಿಯೆಡೆಗೆ ಕೊಂಡು ಹೋಗೋಣ ಎಂದರು.
ಕರ್ನಾಟಕ ವಿಧಾನ ಸಭೆಯ ಉಪಸಭಾಪತಿ ಎನ್.ಯೋಗೀಶ್ ಭಟ್, ರಾಮಕೃಷ್ಣ ಮಠ ಮಂಗಳೂರಿನ ಸ್ವಾಮಿ ಜಿತಕಾಮನಂದಜಿ, ಜಿಲ್ಲಾಧಿಕಾರಿ ಎನ್.ಪ್ರಕಾಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್, ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English