ಮಂಗಳೂರಿನಲ್ಲಿ 68ನೆಯ ಕನ್ನಡ ರಾಜ್ಯೋತ್ಸವ ಆಚರಣೆ

12:03 AM, Thursday, November 2nd, 2023
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಜಿಲ್ಲಾಡಳಿತ ವತಿಯಿಂದ ನೆಹರು ಮೈದಾನದಲ್ಲಿ ಏರ್ಪಡಿಸಿದ್ದ 68 ನೆಯ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದರು.

ಬಳಿಕ ಮಾತನಾಡಿದ ಅವರು ರಾಜ್ಯದಲ್ಲಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವುದರ ಜೊತೆಗೆ ತುಳು, ಕೊಂಕಣಿ ಮತ್ತು ಬ್ಯಾರಿ ಭಾಷೆಗಳ ಸಾಹಿತ್ಯ ಹಾಗೂ ಸಂಸ್ಕೃತಿಗಳಿಗೂ ಸರ್ಕಾರ ಉತ್ತೇಜನ ನೀಡಲಿದೆ ಎಂದು ಹೇಳಿದರು. 

ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆಯಡಿ ದ.ಕ. ಜಿಲ್ಲೆಯಲ್ಲಿ 3.44 ಲಕ್ಷ ಫಲಾನುಭವಿಗಳು ನೋಂದಣಿಯಾಗಿದ್ದಾರೆ. ಅವರಿಗೆ ತಿಂಗಳಿಗೆ ಎರಡು ಸಾವಿರದಂತೆ ನೀಡಲಾಗುತ್ತಿದೆ. ಬಡವರ ಹಸಿವು ನೀಗಿಸುವ ದೃಷ್ಟಿಯಿಂದ ಅನ್ನಭಾಗ್ಯ ಯೋಜ‌ನೆಯಡಿ ಜಿಲ್ಲೆಯಲ್ಲಿ 2.48 ಲಕ್ಷ ಫಲಾನುಭವಿಗಳಿದ್ದು ನಗದು ವರ್ಗಾವಣೆಯಡಿ ಇವರಿಗೆ 17.30 ಕೋಟಿ ರೂ. ಜಮೆಯಾಗಿದೆ. ಶಕ್ತಿ ಯೋಜನೆಯಡಿ ನಾಲ್ಕು ತಿಂಗಳಲ್ಲಿ ದ.ಕ. ಜಿಲ್ಲೆಯಲ್ಲಿ 183 ಲಕ್ಷ ಫಲಾನುಭವಿಗಳು ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸಿದ್ದು ಇದರಿಂದ 6072 ಲಕ್ಷ ಆದಾಯ ಬಂದಿದೆ. ಹೀಗಾಗಿ ರಾಜ್ಯದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದ ಸರ್ಕಾರ ಎಂದು ತೋರಿಸಿಕೊಟ್ಟಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು. 

ಹೃದಯಾಘಾತದಿಂದ ನಿಧನರಾದ ಚಿತ್ರನಟ ಪುನೀತ್ ರಾಜ್ ಕುಮಾರ್ ಸ್ಮರಣೆಗಾಗಿ ಅವರ ಹೆಸರಲ್ಲಿ ಪುನೀತ್ ರಾಜ್ ಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ಮುಂದಿನ ತಿಂಗಳಿನಿಂದ ರಾಜ್ಯಾದ್ಯಂತ ಜಾರಿ ಮಾಡಲಾಗುವುದು ಎಂದು ಹೇಳಿದರು.

ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ಮೂಲಕ ರಾಜ್ಯದಲ್ಲಿ 85 ಜಿಲ್ಲೆ ಮತ್ತು ತಾಲೂಕುಗಳಲ್ಲಿ ಇಸಿಜಿ ಜೊತೆಗೆ ಹಠಾತ್ ಹೃದಯಾಘಾತ ಆಗುವುದನ್ನು ತಡೆಯಲು ಉಚಿತವಾಗಿ ಇಂಜೆಕ್ಷನ್ ನೀಡಲಾಗುವುದು ಎಂದರು. ಅಲ್ಲದೆ ಜಯದೇವ ಸೇರಿದಂತೆ ರಾಜ್ಯದ 16 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುವುದು ಎಂದರು. 

ಇದೇ ವೇಳೆ, ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನು ಒಟ್ಟು 47 ಮಂದಿಗೆ ಹಾಗೂ 17 ಸಂಸ್ಥೆಗಳಿಗೆ ಪ್ರದಾನ ಮಾಡಲಾಯಿತು.

ಸ್ಪೀಕರ್ ಯು ಟಿ ಖಾದರ್, ಸಂಸದ ನಳಿನ್ ಕುಮಾರ್ ಕಟೀಲ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ಶಾಸಕ ವೇದವ್ಯಾಸ್ ಕಾಮತ್, ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಎಸ್ಪಿ ರಿಷ್ಯಂತ್, ಜಿಪಂ ಸಿಇಒ ಡಾ.ಆನಂದ್ ಮತ್ತಿತರರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English