ಬೆಳ್ತಂಗಡಿ : ಬೆಳ್ತಂಗಡಿಯ ಉಜಿರೆ-ಬೆಳಾಲು ರಸ್ತೆಯ ಕಿರಿಯಾಡಿ ಕ್ರಾಸ್ ಬಳಿ ವಿದ್ಯುತ್ ಟವರ್ ಉರುಳಿ ಬಿದ್ದು ಅಧಿಕಾರಿಗಳ ಕಾರು ಮತ್ತು ದ್ವಿಚಕ್ರ ವಾಹನಕ್ಕೆ ಹಾನಿಯಾಗಿದೆ. ಅದೃಷ್ಟವಶತ್ ಯಾವುದೇ ಪ್ರಾಣಹಾನಿಯಾಗಿಲ್ಲ.
ಭಾನುವಾರ ಸಂಜೆ ಸುರಿದ ಮಳೆಗೆ ಕಿರಿಯಾಡಿ ಬಳಿ ಬೆಳ್ತಂಗಡಿ-ಧರ್ಮಸ್ಥಳ 33 ಕೆ.ವಿ ವಿದ್ಯುತ್ ಸಂಪರ್ಕದ ಮುಖ್ಯ ಲೈನ್ ವಿದ್ಯುತ್ ಟವರ್ ನೆಲದತ್ತವಾಲುತ್ತಿರುವುದನ್ನು ಗಮನಿಸಿದ ಮೆಸ್ಕಾಂ ಪವರ್ ಮ್ಯಾನ್ ಕೂಡಲೇ ಉಜಿರೆ ಉಪವಿಭಾಗಕ್ಕೆ ಮಾಹಿತಿ ನೀಡಿದರು.
ಕೂಡಲೇ ಮೆಸ್ಕಾಂ ಅಧಿಕಾರಿಗಳು ದೊಂಡೋಲೆಯ ಪವರ್ ಪ್ರಾಜೆಕ್ಟ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಸ್ಥಳಕ್ಕೆ ತೆರಳಿದ್ದರು. ಪವರ್ ಪ್ರೊಜೆಕ್ಟ್ ನ ಅಧಿಕಾರಿಗಳು ಒಂದು ಕಾರು ಮತ್ತು ಬೈಕ್ ನಲ್ಲಿ ಬಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರು. ವಾಲಿಕೊಂಡು ಬರುತ್ತಿದ್ದ ಟವರ್ ಕಾರು ಹಾಗೂ ಬೈಕ್ ನ ಮೇಲೆಯೇ ಬಿದ್ದಿತ್ತೆನ್ನಲಾಗಿದೆ. ಕಾರಿನಲ್ಲಿ ಪವರ್ ಪ್ರಾಜೆಕ್ಟ್ ನ ಗಣೇಶ್ ಎಂಬವರಿದ್ದು, ಸಣ್ಣ ಪುಟ್ಟ ಗಾಯಕ್ಕೊಳಗಾಗಿ ಅಪಾಯದಿಂದ ಪಾರಾಗಿದ್ದಾರೆ.
ಮೆಸ್ಕಾಂನ ತುರ್ತು ಸ್ಪಂದನೆ ಕಾರಣ ಹೆಚ್ಚಿನ ಅಪಾಯ ಉಂಟಾಗುವುದು ತಪ್ಪಿದೆ. ಟವರ್ ಕುಸಿತದ ಕಾರಣ ಧರ್ಮಸ್ಥಳ ಭಾಗದ ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ.
Click this button or press Ctrl+G to toggle between Kannada and English