ಮಂಗಳೂರು : ಕುಕ್ಕೆ ಸುಬ್ರಹ್ಮಣ್ಯಕ್ಕೆ ನಾಲ್ಕು ವರ್ಷಗಳ ಹಿಂದೆ ದೇವಸ್ಥಾನದ ಬಳಕೆಗೆಂದು ಖರೀದಿಸಿದ್ದ ಇನ್ನೋವಾ ಕ್ರಿಸ್ಟಾ ಕಾರನ್ನು ಬೆಂಗಳೂರಿನ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ದೇವಳದ ಖರ್ಚಿನಲ್ಲೇ ಬೆಂಗಳೂರಿನಲ್ಲಿ ಉಪಯೋಗಿಸುತ್ತಿರುವುದು ಬೆಳಕಿಗೆ ಬಂದಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ 2019ರಲ್ಲಿ ಹೊಸ ಇನ್ನೋವಾ ಕಾರನ್ನು ಖರೀದಿಸಲಾಗಿತ್ತು. ಆರಂಭದಲ್ಲಿ ದೇವಸ್ಥಾನದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರೇ ಈ ಕಾರನ್ನು ಬಳಕೆ ಮಾಡುತ್ತಿದ್ದರು. ಎರಡೇ ತಿಂಗಳಲ್ಲಿ ಈ ಕಾರು ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು ಬೆಂಗಳೂರಿನ ಇಲಾಖಾ ಆಯುಕ್ತರ ಕಚೇರಿಗೆ ಕಳುಹಿಸಿಕೊಡಲು ಸೂಚನೆ ಬಂದಿತ್ತು. ಕೂಡಲೇ ಕಳಿಸಿಕೊಡದಿದ್ದರೆ ಕ್ರಮ ಜರುಗಿಸುತ್ತೇವೆ ಎಂದು 2019ರ ಡಿಸೆಂಬರ್ 12ರಂದು ಇಲಾಖೆ ಆಯುಕ್ತರು ಬೆದರಿಸಿದ್ದರು. ಇದಕ್ಕೆ ಹೆದರಿದ ಸುಬ್ರಹ್ಮಣ್ಯ ದೇವಸ್ಥಾನದ ಅಧಿಕಾರಿಗಳು ಮರುದಿನವೇ ಆ ವಾಹನವನ್ನು ಬೆಂಗಳೂರಿಗೆ ಕಳಿಸಿಕೊಟ್ಟಿದ್ದರು.
ದೇವಸ್ಥಾನಕ್ಕೆಂದು ಖರೀದಿಸಿದ ಈ ಕಾರಿಗೆ ನಾಲ್ಕು ವರ್ಷಗಳಿಂದ ಬೆಂಗಳೂರಿನಲ್ಲಿ ಪ್ರತಿವರ್ಷ ಇನ್ಶೂರೆನ್ಸ್, ವಾಹನ ನಿಯಮಗಳ ಉಲ್ಲಂಘನೆಗೆ ನೀಡಲಾಗುವ ದಂಡದ ಮೊತ್ತ ದೇವಸ್ಥಾನದಿಂದಲೇ ತೆರಲಾಗುತ್ತಿದೆ. ಹಲವು ಬಾರಿ ದಂಡದ ಮೊತ್ತವನ್ನು ದೇಗುಲದ ಖಾತೆಯಿಂದಲೇ ಸಂದಾಯ ಮಾಡಲಾಗಿದೆ. ಎರಡು ತಿಂಗಳಿಗೊಮ್ಮೆ 50 ಸಾವಿರ ರೂಪಾಯಿ ಮೊತ್ತವನ್ನು ಕಾರಿನ ನಿರ್ವಹಣೆ ಹಾಗೂ ಇತರ ಖರ್ಚು ಎಂದು ದೇವಸ್ಥಾನದಿಂದಲೇ ಭರಿಸಲಾಗುತ್ತಿದೆ.
ಕಾರನ್ನು ಬೆಂಗಳೂರು ಇಲಾಖೆ ಕಚೇರಿಯಲ್ಲಿ ಬಳಕೆ ಮಾಡಿ, ಅದರ ನಿರ್ವಹಣಾ ಮೊತ್ತವನ್ನು ದೇವಸ್ಥಾನದ ಖಾತೆಯಿಂದ ಭರಿಸುತ್ತಿರುವುದಕ್ಕೆ ಲೆಕ್ಕ ಪರಿಶೋಧನೆ ವೇಳೆ ಆಕ್ಷೇಪ ವ್ಯಕ್ತವಾಗಿದೆ. ಇದರಿಂದಾಗಿ ಇತ್ತೀಚೆಗೆ ಎರಡು ತಿಂಗಳಿಗೊಮ್ಮೆ ಸಲ್ಲಿಕೆಯಾಗುತ್ತಿದ್ದ ನಿರ್ವಹಣಾ ಮೊತ್ತಕ್ಕೆ ತಡೆ ಬಿದ್ದಿದೆ. ಇನ್ಶೂರೆನ್ಸ್, ದಂಡ ಸೇರಿ ಇತರೇ ಖರ್ಚನ್ನು ದೇವಳದಿಂದಲೇ ಸಂದಾಯ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಆ ಕಾರನ್ನು ಮರಳಿ ಸುಬ್ರಹ್ಮಣ್ಯಕ್ಕೇ ಕಳಿಸುವಂತೆ ಪತ್ರ ಬರೆದಿದ್ದೇವೆ ಎಂದು ದೇವಸ್ಥಾನದ ಸಿಇಓ ಲಿಂಗಯ್ಯ ತಿಳಿಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ದುಡ್ಡಿನಲ್ಲಿ ಬೆಂಗಳೂರಿನ ಅಧಿಕಾರಿಗಳು ನಾಲ್ಕು ವರ್ಷಗಳಿಂದ ಉಪಯೋಗಿಸುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
Click this button or press Ctrl+G to toggle between Kannada and English