ಪಚ್ಚನಾಡಿ ಮೂಡು ಮನೆಯ ಶ್ರೀಮಂತ ರಾಜ ಗುಳಿಗ ಕ್ಷೇತ್ರ ದಲ್ಲಿ ನಡೆದೇ ಹೋಯಿತು ಪವಾಡ ! – ವಿಡಿಯೋ

10:47 PM, Sunday, November 19th, 2023
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ತುಳುನಾಡು ದೈವ ದೇವರುಗಳ ಆರಾಧನೆಗೆ ಹಿಂದಿನಿಂದಲೂ ಪ್ರಾಧಾನ್ಯತೆಯನ್ನು ಪಡೆದಿದೆ. ತುಳುನಾಡಿನಲ್ಲಿ ಸಾವಿರಕ್ಕಿಂತಲೂ ಹೆಚ್ಚು ದೈವಗಳನ್ನು ಅರಾಧಿಸಲಾಗುತ್ತಿದೆ ಎಂದು ಅಂದಾಜಿಸಲಾಗಿದೆ.

ಮಂಗಳೂರಿನಿಂದ ಸುಮಾರು ಹತ್ತು ಕಿಲೋ ಮೀಟರ್ ದೂರದ ಮೂಡು ಮನೆಗುತ್ತು ಪಚ್ಚನಾಡಿಯಲ್ಲಿ ಅಂತದೊಂದು ಕ್ಷೇತ್ರವಿದೆ. ಇಲ್ಲಿ ಹತ್ತು ವರ್ಷ ಹಿಂದೆ ದೈವವೊಂದು ರಾತ್ರಿವೇಳೆ ಕಾಯರ್ ಮರದಲ್ಲಿ ಮಾಯದ ಶಕ್ತಿಯ ರೂಪದಲ್ಲಿ ಸತೀಶ್ ಪೂಜಾರಿಯವರಿಗೆ ಕಾಣಿಸಿಕೊಂಡು ತನಗೆ ಆಶ್ರಯಯ ನೀಡುವಂತೆ ಸೂಚಿಸಿದಂತೆ ಭಾಸವಾಗುತ್ತದೆ. ಅದರಂತೆ ಪಂಡಿತರ ಪ್ರಶ್ನಾ ಚಿಂತನೆಯ ಮೂಲಕ ಪಚ್ಚನಾಡಿ ಮೂಡು ಮನೆ ಎಂಬಲ್ಲಿ ದೈವದ ಸಾನಿಧ್ಯವೊಂದನ್ನು ಸ್ಥಾಪನೆ ಮಾಡಲಾಗುತ್ತದೆ.

ಹಲವು ವರ್ಷಗಳ ಹಿಂದೆ ಇಲ್ಲಿ ಜೈನರು ವಾಸವಿದ್ದರು ಅವರು ಶ್ರೀಮಂತ ಗುಳಿಗನನ್ನು ನಂಬುತ್ತಿದ್ದರು ಎಂದು ಹೇಳಲಾಗಿತ್ತು. ಬಳಿಕ ಆ ಸ್ಥಳದಲ್ಲಿ ಜತ್ತಿ ಪೂಜಾರಿ ಎಂಬವರು ಗೇಣಿ ಮಾಡಿ ವಾಸವಿದ್ದರು ಜೈನರು ನಂಬುತ್ತಿದ್ದ ಶ್ರೀಮಂತ ಗುಳಿಗನನ್ನು ರಾಜ ಗುಳಿಗ ಎಂದು ಆರಾಧಿಸುತ್ತಿದ್ದರು. ಕಾಲ ಕ್ರಮೇಣ ಒಂದು ಸಂದರ್ಭದಲ್ಲಿ ಜತ್ತಿ ಪೂಜಾರಿಗೂ ಅಲ್ಲೇ ಇದ್ದ ಮಠದ ಬ್ರಾಹ್ಮಣರಿಗೂ, ತಂತ್ರಿಯವರಿಗೂ ಮನಸ್ತಾಪ ಉಂಟಾಗಿ ದೈವಾರಾಧನೆ ನಿಂತುಹೋಯಿತು ಎಂದು ಹೇಳಲಾಗಿದೆ.

ಹತ್ತು ವರ್ಷ ಹಿಂದೆ ನಾಟಕ ಕಲಾವಿದ ಸತೀಶ್ ಬಂದಲೆಯವರು ರಾತ್ರಿವೇಳೆ ನಾಟಕ ಮುಗಿಸಿ ತನ್ನ ವಾಹನದಲ್ಲಿ ಹಿಂದಿರುಗುವ ವೇಳೆ ಮರವೊಂದು ಆಕಸ್ಮಿಕವಾಗಿ ನಡುಗುವುದನ್ನು ಗಮನಿಸಿದರು. ಏನೋ ಆಶ್ಚರ್ಯವಿದೆ ಎಂದು ಮನಸ್ಸಿನಲ್ಲಿ ಭಯ ಉಂಟಾದಾಗ ಅಲ್ಲಿ ಕಂಡ ಆ ಮಾಯದ ಶಕ್ತಿ ಭಯಪಡಬೇಡ ತನಗೆ ಆಶ್ರಯಯ ನೀಡುವಂತೆ ಸೂಚನೆ ನೀಡಿದಂತೆ ಅರಿವಾಗುತ್ತದೆ. ಕಾಯರ್ ಮರದಲ್ಲಿ ಮಾಯದ ರೂಪದಲ್ಲಿ ಬಂದ ಶಕ್ತಿ ಬೇರೆ ಯಾವುದು ಅಲ್ಲ ತನ್ನ ಪೂರ್ವಜರು ನಂಬಿಕೊಂಡು ಬಂದಿದ್ದ ಗುಳಿಗ ದೈವವೇ ಎಂದು ಅವರು ಮನಗಂಡರು. ಪಂಡಿತರ ಪ್ರಶ್ನಾ ಚಿಂತನೆಯಂತೆ ಮುಂದೆ ಅಲ್ಲಿ ಪವಾಡಗಳೇ ನಡೆದುಹೋಗುತ್ತದೆ.

ನಂತರದ ದಿನಗಳಲ್ಲಿ ಸತೀಶ್ ಬಂದಲೆಯವರ ನೇತೃತ್ವದಲ್ಲಿ ಊರಿನ ಜನರೆಲ್ಲರೂ ಸೇರಿ ಅಲ್ಲೇ ಪ್ರಧಾನ ದೈವವಾಗಿ ಶ್ರೀಮಂತ ರಾಜ ಗುಳಿಗನ್ನು ಸ್ಥಾಪನೆ ಮಾಡುತ್ತಾರೆ. ಅದರ ಜೊತೆಗೆ ಪರಿವಾರ ದೇವತೆ ಉಳ್ಳಾಲ್ತಿ ಯಾಗಿ ದುರ್ಗಾ ಪರಮೇಶ್ವರಿ, ನಾಗದೇವರು, ಹಿರಿಯಜ್ಜ, ಕುಪ್ಪೆಟ್ಟು ಪಂಜುರ್ಲಿ, ಕಲ್ಲುರ್ಟಿ -ಪಂಜುರ್ಲಿ ದೈವಗಳನ್ನು ಆರಾಧಿಸಿಕೊಂಡು ಬರುತ್ತಿದ್ದಾರೆ.

ಆಶ್ಚರ್ಯವೆಂಬಂತೆ 2023ರ ಅಕ್ಟೊಬರ್ 29 ರ ಭಾನುವಾರ ಮದ್ಯಾಹ್ನ ಬೊಂಡಾಭಿಷೇಕದ ಬಳಿಕ ನಡೆದ ಪೂಜೆಯ ವೇಳೆ ಮಾಯಾವಿ ಪಕ್ಷಿಯೊಂದು ದೈವಕ್ಕೆ ಹಾಕಿದ ಗುಲಾಬಿ ಹೂವೊಂದನ್ನು ಕೆಳಗೆ ಬೀಳಿಸಿ ಹಾರಿ ಹೋಗುತ್ತದೆ. ಈ ಪವಾಡವನ್ನು ಅಲ್ಲಿದ್ದವರು ಗುಳಿಗ ದೈವವೇ ಪೂಜೆಯ ವೇಳೆ ಕಾಣಿಸಿ ಕೊಂಡಿದೆ ಎಂದು ಹೇಳುತ್ತಾರೆ.

ಇಲ್ಲಿ ಪ್ರತಿ ತಿಂಗಳ ಸಂಕ್ರಮಣದಂದು ಬೆಳಿಗ್ಗೆ ಹರಕೆಯ ಕೋಲ ನಡೆಯುತ್ತದೆ. ಅದೇ ದಿನ ರಾತ್ರಿ ಸಾರ್ವಜನಿಕ ದೀಪಾಲಂಕಾರ ಸೇವೆಯೂ ನಡೆಯುತ್ತದೆ. ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ವಾರ್ಷಿಕ ನೇಮೋತ್ಸವ ಜಾತ್ರೆ ನಡೆಯುತ್ತದೆ.

ಇಲ್ಲಿಯ ದೈವವನ್ನು ಶ್ರದ್ದೆಯಿಂದ ನಂಬಿದರೆ ತನ್ನ ಇಷ್ಟಾರ್ಥಗಳು ನೂರಕ್ಕೆ ನೂರರಷ್ಟು ನಡೆಯುತ್ತದೆ ಎಂಬ ನಂಬಿಕೆಗಳಿವೆ. ದಕ್ಷಿಣಕನ್ನಡ ಮಾತ್ರವೇ ಅಲ್ಲದೆ ಉಡುಪಿ, ಚಿಕ್ಕಮಗಳೂರು, ಮೂಡಿಗೆರೆ ಬೆಂಗಳೂರಿನಿಂದ ಭಕ್ತರು ಬಂದು ಬೊಂಡಾಭಿಷೇಕ, ದೀಪಾಲಂಕಾರ ಸೇವೆಗಳ ಹರಿಕೆಗಳನ್ನು ತೀರಿಸುತ್ತಾರೆ.

ಇಲ್ಲಿ ಪ್ರಾರ್ಥಿಸಿ ಉದ್ಯೋಗ, ಕಂಕಣ ಭಾಗ್ಯ, ಸಂತಾನ ಭಾಗ್ಯ ಈಡೇರಿದ ಹಲವು ಭಕ್ತರು ಸೇವೆಗಳನ್ನು ಸಲ್ಲಿಸಿದ್ದಾರೆ ಎಂದು ಕ್ಷೇತ್ರದ ಸತೀಶ್ ಬಂದಲೆಯವರ ಹೇಳಿದ್ದಾರೆ.

ಲೇಖನ – ಶಿವಪ್ರಸಾದ್. ಟಿ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English