ಹ್ಯಾಕರ್‌ಗಳ ಮೋಸಕ್ಕೆ ಸಿಲುಕಿ ಸೌದಿ ಅರೇಬಿಯಾದ ಜೈಲಿನಲ್ಲಿದ್ದ ಕಡಬ ನಿವಾಸಿ ಸ್ವದೇಶಕ್ಕೆ ವಾಪಾಸ್

11:25 PM, Sunday, November 19th, 2023
Share
1 Star2 Stars3 Stars4 Stars5 Stars
(No Ratings Yet)
Loading...

ಕಡಬ: ಸೌದಿ ಅರೇಬಿಯಾದ ರಿಯಾದ್‌ನ ಜೈಲಿನಲ್ಲಿ ಕಳೆದ 11 ತಿಂಗಳಿನಿಂದ ಬಂಧಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತ್ತೂರು ಗ್ರಾಮದ ಮೂಜೂರು ನಿವಾಸಿ ಚಂದ್ರಶೇಖರ್‌ ನವೆಂಬರ್ 20ರಂದು ಸ್ವದೇಶಕ್ಕೆ ಆಗಮಿಸಿದ್ದಾರೆ.

ನವೆಂಬರ್ 20ರಂದು ಬೆಳಗ್ಗೆ ರಿಯಾದ್‌ನಿಂದ ಅಲ್ಲಿನ ಪೊಲೀಸರು ಚಂದ್ರಶೇಖರ್‌ ಅವರನ್ನು ವಿಮಾನದಲ್ಲಿ ಮುಂಬಯಿಗೆ ಕಳುಹಿಸಿಕೊಡಲಿದ್ದು, ಅವರು ಮುಂಬಯಿನಿಂದ ಸಂಜೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಲಿದ್ದಾರೆ ಎಂದು ತಿಳಿದುಬಂದಿದೆ.

ಚಂದ್ರಶೇಖರ್‌ 2022ರಲ್ಲಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದು ಅದೇ ಕಂಪೆನಿಯ ಮೂಲಕ ಸೌದಿ ಅರೇಬಿಯಾಕ್ಕೆ ತೆರಳಿದ್ದರು. ಅಲ್ಲಿಅಲ್ಪಾನರ್‌ ಸೆರಾಮಿಕ್ಸ್‌ ಎಂಬ ಕಂಪನಿಯಲ್ಲಿದ್ದರು. 2022ರ ನವೆಂಬರ್‌ನಲ್ಲಿ ಮೊಬೈಲ್‌ ಮತ್ತು ಸಿಮ್‌ ಖರೀದಿಗೆ ರಿಯಾದ್‌ನ ಅಂಗಡಿಗೆ ಭೇಟಿ ನೀಡಿದ್ದರು. ಅರ್ಜಿಯೊಂದಕ್ಕೆ ಎರಡು ಬಾರಿ ಹೆಬ್ಬೆಟ್ಟು (ತಂಬ್‌) ಸಹಿ ನೀಡಿದ್ದರು.

ವಾರದ ಬಳಿಕ ಅವರಿಗೆ ಅರೇಬಿಕ್‌ ಭಾಷೆಯಲ್ಲಿ ಹೊಸ ದೂರವಾಣಿ ಸಂಖ್ಯೆಗೆ ಸಂದೇಶ ಬಂದಿತ್ತು. ಅದನ್ನು ತೆರೆದು ಚಂದ್ರಶೇಖರ್‌ ನೋಡಿದ್ದರು. 2 ದಿನಗಳ ಬಳಿಕ ದೂರವಾಣಿ ಕರೆ ಬಂದು ಸಿಮ್‌ನ ಬಗ್ಗೆ ಮಾಹಿತಿ ಕೇಳಲಾಗಿತ್ತು. ಒಟಿಪಿ ತಿಳಿಸಿದ್ದರು. ವಾರದ ಬಳಿಕ ಅಲ್ಲಿನ ಪೊಲೀಸರು ಬಂದು ಚಂದ್ರಶೇಖರ್‌ ಅವರನ್ನು ಬಂಧಿಸಿದ್ದರು.

ಬ್ಯಾಂಕೊಂದರಲ್ಲಿ ಅವರದೇ ಹೆಸರಿನಲ್ಲಿ ಹ್ಯಾಕರ್‌ಗಳು ಖಾತೆ ತೆರೆದಿದ್ದರು. ಅಲ್ಲಿನ ಮಹಿಳೆಯೊಬ್ಬರ ಖಾತೆಯಿಂದ ಚಂದ್ರಶೇಖರ್‌ ಖಾತೆಗೆ 22 ಸಾವಿರ ರಿಯಲ್‌ ಜಮೆಯಾಗಿ, ಅದರಿಂದ ಕೂಡಲೇ ಬೇರೆ ಯಾವುದೋ ದೇಶಕ್ಕೆ ಆ ಹಣ ವರ್ಗಾವಣೆಯಾಗಿತ್ತು. ಹಣ ಕಳೆದುಕೊಂಡ ಮಹಿಳೆ ಚಂದ್ರಶೇಖರ್‌ ಅವರ ಖಾತೆಗೆ ಹಣ ಜಮೆಯಾಗಿರುವುದನ್ನು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದರು.

ಆ ಹಿನ್ನೆಲೆಯಲ್ಲಿ ಚಂದ್ರಶೇಖರ್‌ ಅವರನ್ನು ಬಂಧಿಸಲಾಗಿತ್ತು. ಬಂಧನವಾಗಿರುವ ಬಗ್ಗೆ ಚಂದ್ರಶೇಖರ್‌ ಅವರ ಗೆಳೆಯರು ಮನೆಯವರಿಗೆ ತಿಳಿಸಿದ್ದರು. ಜೈಲಿನಲ್ಲಿ ಇರುವ ವೇಳೆ ದಿನದಲ್ಲಿ ಕೇವಲ 2 ನಿಮಿಷ ಮಾತ್ರ ದೂರವಾಣಿ ಕರೆ ಮಾಡಲು ಚಂದ್ರಶೇಖರ್‌ ಅವರಿಗೆ ಅವಕಾಶ ನೀಡಲಾಗಿತ್ತು. ಅಲ್ಲಿನ ಸ್ನೇಹಿತರಿಗೂ ಅವರನ್ನು ಭೇಟಿಯಾಗಲು ಅವಕಾಶವಿರಲಿಲ್ಲ.

ಚಂದ್ರಶೇಖರ್‌ ಅವರ ಸ್ನೇಹಿತರು 10 ಲಕ್ಷ ರೂ ಸಂಗ್ರಹಿಸಿ ಅಲ್ಲಿನ ವಕೀಲರಿಗೆ ನೀಡಿದ್ದರು. ಹಣ ಕಳೆದುಕೊಂಡ ಮಹಿಳೆಗೆ ಸುಮಾರು 6 ಲಕ್ಷ ರೂ ಹಣವನ್ನು ಪಾವತಿಸಲಾಗಿತ್ತು. ಆದರೂ ಬಿಡುಗಡೆ ಸಾಧ್ಯವಾಗಿರಲಿಲ್ಲ, ಮಾಧ್ಯಮ ವರದಿಯ ಬಳಿಕ ಅಲ್ಲಿನ ಕಂಪನಿ ಎಚ್ಚೆತ್ತುಕೊಂಡು ನಿರಪರಾಧಿ ಚಂದ್ರಶೇಖರ್‌ ಅವರ ಬಿಡುಗಡೆಗೆ ಕೈಜೋಡಿಸಿತ್ತು. ಚಂದ್ರಶೇಖರ್‌ ಬಿಡುಗಡೆಗೆ ಮಡಿಕೇರಿಯ ಬಿ ಆರ್‌ ಅರುಣ್‌ ಕುಮಾರ್‌ ಹಾಗೂ ಮಂಗಳೂರಿನ ಕಬೀರ್‌ ನಿರಂತರ ಪ್ರಯತ್ನ ಮಾಡಿದ್ದರು.

ಐತ್ತೂರು ಗ್ರಾಮದ ಮೂಜೂರು ನಿವಾಸಿ ದಿ ಕೆಂಚಪ್ಪ ಗೌಡ ಹಾಗೂ ಹೇಮಾವತಿ ದಂಪತಿಯ ಕೊನೆಯ ಪುತ್ರ ಆಗಿರುವ ಚಂದ್ರಶೇಖರ್‌ ಅವರಿಗೆ ಊರಿನಲ್ಲಿ ಮದುವೆ ನಿಶ್ಚಿತಾರ್ಥ ನಿಗದಿ ಅದರ ಸಿದ್ಧತೆಯಲ್ಲಿ ಇರುವಾಗಲೇ ಅವರ ಬಂಧನವಾಗಿತ್ತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English