ಬಜರಂಗದಳ ಕಾರ್ಯಕರ್ತರ ಗಡಿಪಾರು, ಪುತ್ತೂರಿನಲ್ಲಿ ಬೃಹತ್ ಪ್ರತಿಭಟನೆ

6:42 PM, Monday, November 20th, 2023
Share
1 Star2 Stars3 Stars4 Stars5 Stars
(No Ratings Yet)
Loading...

ಪುತ್ತೂರು : ಬಜರಂಗದಳ ಕಾರ್ಯಕರ್ತರ ಮೇಲೆ ಗಡಿಪಾರು ನೋಟೀಸ್ ಜಾರಿ ಮಾಡಿರುವುದನ್ನುವಿರೋಧಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳದ ವತಿಯಿಂದ ಬಿಜೆಪಿ ಹಾಗೂ ಪರಿವಾರ ಸಂಘಟನೆಗಳ ಸಹಕಾರದೊಂದಿಗೆ ಬೃಹತ್ ಪ್ರತಿಭಟನೆಯನ್ನು ಸೋಮವಾರ ಮಿನಿ ವಿಧಾನಸೌಧದ ಎದುರಿನ ಜೈ ಜವಾನ್ ಸ್ಮಾರಕದ ಬಳಿ ನಡೆಯಿತು.

ಪ್ರತಿಭಟನೆಯನ್ನುದ್ದೇಶಿಸಿ ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಂಯೋಜಕ ಸುನೀಲ್ ಕೆ.ಆರ್. ಮಾತನಾಡಿ, ಬಹುಸಂಖ್ಯಾತ ಹಿಂದೂಗಳು ಇರುವ ಭಾರತದಲ್ಲಿ ಸ್ವಾಭಿಮಾನದ ಬದುಕಿಗಾಗಿ ನಿರಂತರ ಜಾಗೃತಿ, ಸಂಘಟಿತ ಕೆಲಸಗಳನ್ನು ಮಾಡುತ್ತಿರುವುದು ನಮ್ಮ ಸಂಘಟನೆ. ದೇಶದ ಪರವಾಗಿ ಕೆಲಸ ಮಾಡುತ್ತಿರುವ, ದೇಶದ ಸಾಂಸ್ಕೃತಿಕತೆಯ ಪ್ರತೀಕವಾದ ಗೋವಿನ ರಕ್ಷಣೆ, ಹಿಂದೂ ಹೆಣ್ಣು ಮಕ್ಕಳ ರಕ್ಷೆಯಲ್ಲಿ ತೊಡಗಿಕೊಂಡಿರುವ ಬಜರಂಗದಳ ಕಾರ್ಯಕರ್ತರನ್ನು ಗಡಿಪಾರಿಗೆ ಆದೇಶಿಸಿರುವುದು ಖಂಡನೀಯ ಎಂದರು.

ಜಿಹಾದಿ, ಭಯೋತ್ಪಾದಕರಂತಹ ರಾಷ್ಟ್ರದ್ರೋಹದ ಕೆಲಸ ಮಾಡುವವರನ್ನು ಗಡಿಪಾರು ಮಾಡಿ. ಅದನ್ನು ಬಿಟ್ಟು ದೇಶ ರಕ್ಷಣೆಯಲ್ಲಿ ತೊಡಗಿಕೊಂಡಿರುವ, ಜಿಹಾದಿಗಳಿಂದ ಹಿಂದೂ ಸಹೋದರಿಯನ್ನು ರಕ್ಷಿಸಿದವರ ಮೇಲೆ ಕೇಸು ದಾಖಲಿಸುವುದಲ್ಲ. ನಾಲ್ಕು ಗೋಡೆಗಳ ಮಧ್ಯೆ ಕಾರ್ಯನಿರ್ವಹಿಸುವ ಸಹಾಯಕ ಆಯುಕ್ತರು ಹೊರಗೆ ಬಂದು ನೋಡಿ ಸಂಘಟನೆಯ ಕಾರ್ಯಕರ್ತರ ಸೇವಾ ಕೆಲಸಗಳನ್ನು ಗಮನಿಸಲಿ. ಬಜರಂಗದಳ ಕಾರ್ಯಕರ್ತರನ್ನು ಈ ರೀತಿಯ ಶಿಕ್ಷೆಗೆ ಗುರಿಪಡಿಸಿದರೆ ಯಾವುದೇ ಹೋರಾಟಕ್ಕೆ ನಾವು ಸಿದ್ಧ. ತಕ್ಷಣ ಗಡಿಪಾರು ವಿಚಾರದ ಕುರಿತು ಮತ್ತೊಮ್ಮೆ ಚರ್ಚೆ ನಡೆಸಿ ಗಡಿಪಾರು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ದೇಶ, ಧರ್ಮ, ಗೋವು, ಸಹೋದರಿಯರ ರಕ್ಷಣೆಗಾಗಿ ನಾವು ರೌಡಿಗಳೇ. ಪುತ್ತೂರಿನಲ್ಲಿ ಬ್ಯಾನರ್ ಪ್ರಕರಣದಲ್ಲಿ ಎಫ್‌ಐಆರ್ ಆದ ಪೊಲೀಸರನ್ನು ಗಡೀಪಾರು ಮಾಡಬೇಕಿತ್ತು. ಓಟಿನ ಆಸೆಗಾಗಿ ತುಷ್ಟೀಕರಣ ನೀತಿಯನ್ನು ಸರಕಾರ ನಡೆಸುವುದು ಬೇಡ. ಗಡಿಪಾರು ಯಾರನ್ನು ಮಾಡಬೇಕು ಎಂಬ ಪಟ್ಟಿಯನ್ನು ನಾವು ನೀಡುತ್ತೇವೆ. ಅವರನ್ನು ಗಡಿಪಾರು ಮಾಡಿ ಎಂದು ಆಗ್ರಹಿಸಿದರು.

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ಐದು ವರ್ಷದ ಹಿಂದೆ ಇದ್ದ ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರ ಈಗ ಅಧಿಕಾರಕ್ಕೆ ಬಂದು ಪುನರಪಿ ಅದನ್ನೇ ಮಾಡುತ್ತಿದೆ. ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿ ಗಡಿಪಾರಿನಂತಹ ಶಿಕ್ಷೆ ವಿಧಿಸಿ ಹಿಂದೂಗಳ ಮನಸ್ಥೈರ್ಯವನ್ನು ಕುಸಿಯುವಂತಹ ಕೆಲಸ ಮಾಡುತ್ತಿದೆ. ಈ ಕುರಿತು ಸಂಸದರ ಬಳಿ ಮಾತನಾಡಿ, ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿ ನ್ಯಾಯ ಒದಗಿಸುವ ಕೆಲಸ ಮಾಡಲಿದ್ದೇವೆ. ಬಿಜೆಪಿ ರಾಜ್ಯ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಗಮನಕ್ಕೂ ತರಲಾಗುವುದು. ಅಧಿಕಾರಿಗಳು ಮರು ಪರಿಶೀಲಿಸಿ ಗಡಿಪಾರಿನ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಬಿಜೆಪಿ ಮುಖಂಡರಾದ ಜೀವಂಧರ್ ಜೈನ್, ಯುವರಾಜ ಪೆರಿಯತ್ತೋಡಿ, ಪುರುಷೋತ್ತಮ ಮುಂಗ್ಲಿಮನೆ, ಹರಿಪ್ರಸಾದ್ ಯಾದವ್, ಹರೀಶ್ ಬಿಜತ್ರೆ, ಸಚಿನ್ ಶೆಣೈ, ಸಂಘಟನೆಗಳ ಮುಖಂಡರಾದ ಶ್ರೀಧರ್ ತೆಂಕಿಲ, ಅಜಿತ್ ರೈ ಹೊಸಮನೆ, ದಿನೇಶ್ ಪಂಜಿಗ, ನ್ಯಾಯವಾದಿ ಮಾಧವ ಪೂಜಾರಿ, ದಿನೇಶ್ ಜೈನ್, ಜನಾರ್ದನ ಬೆಟ್ಟ, ಹರೀಶ್ ಕುಮಾರ್ ದೋಳ್ಪಾಡಿ, ಅಜಿತ್ ಕೆಯ್ಯೂರು, ವಿರೂಪಾಕ್ಷ ಮಚ್ಚಿಮಲೆ, ಮೋಹಿನಿ ದಿವಾಕರ್, ಸುಕೀರ್ತಿ ಮತ್ತಿತರರು ಪಾಲ್ಗೊಂಡಿದ್ದರು. ಬಜರಂಗದಳ ಗ್ರಾಮಾಂತರ ಸಂಯೋಜಕ ವಿಶಾಖ್ ರೈ ಸಸಿಹಿತ್ಲು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English