ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಪತ್ರಿಕಾ ಕ್ಷೇತ್ರಕ್ಕೆ ಹೊಸ ಸ್ವರೂಪ ಮತ್ತು ಮಾದರಿಯನ್ನು ನೀಡಿದೆ ಎಂದು ಸಂಸದ ನಳಿನ್‌ಕುಮಾರ್ ಕಟೀಲ್ ಹೇಳಿದ್ದಾರೆ. ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನ.21 ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 4ನೇ ಜಿಲ್ಲಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮ ವಾಸ್ತವ್ಯದ ಮೂಲಕ ಹಳ್ಳಿಯ ಜನರ ಸಮಸ್ಯೆಯ ಬಗ್ಗೆ ಬೆಳಕು ಚೆಲ್ಲುವ ಕೆಲಸ ಸೇರಿ ಹಲವು ಕಾರ್ಯಕ್ರಮಗಳ ಮೂಲಕ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸಮಾಜಮುಖಿಯಾಗಿ ಕೆಲಸ ಮಾಡುತಿದೆ. ಜೊತೆಗೆ ಸತ್ಯ ಮತ್ತು ವಸ್ತು ನಿಷ್ಟ ಸುದ್ದಿಗಳನ್ನು ನೀಡುವ ಜವಾಬ್ದಾರಿ ಪತ್ರಕರ್ತರಿಗೆ ಇದೆ ಎಂದು ಅವರು ಹೇಳಿದರು. ರಾಜ್ಯದ, ದೇಶದ ಪತ್ರಿಕಾ ರಂಗಕ್ಕೆ ದಕ್ಷಿಣ ಕನ್ನಡ ಜಿಲ್ಲೆ ದೊಡ್ಡ ಕೊಡುಗೆ ನೀಡಿದೆ ಎಂದು ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ಶಾಸಕರಾದ ವೇದವ್ಯಾಸ ಕಾಮತ್ ಸಮ್ಮೇಳನದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.
ಹಸಿರು -ಉಸಿರು ಕಾರ್ಯಕ್ರಮಕ್ಕೆ ಶಾಸಕರಾದ ಡಾ.ವೈ.ಭರತ್ ಶೆಟ್ಟಿ ಚಾಲನೆ ನೀಡಿದರು.ಛಾಯಾಚಿತ್ರ ಪ್ರದರ್ಶನವನ್ನು ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್ ಉದ್ಘಾಟಿಸಿದರು.
ಆಧುನಿಕ ಯುಗದಲ್ಲಿ ತನ್ನ ವೃತ್ತಿ ಬದ್ಧತೆ ಮತ್ತು ನೈತಿಕ ಮೌಲ್ಯಗಳನ್ನು ಉಳಿಸಿಕೊಳ್ಳುವುದು ಪತ್ರಕರ್ತನ ಮುಂದಿರುವ ದೊಡ್ಡ ಸವಾಲು ಎಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದ್ದಾರೆ. ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನ.21 ರಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 4ನೇ ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಂದು ವೃತ್ತಿ ಬದ್ಧತೆ ಇರುವ ಪತ್ರಕರ್ತರ ಸಂಖ್ಯೆ ಕಡಿಮೆಯಾಗುತ್ತಿರುವುದು ಆತಂಕಕಾರಿ ಎಂದ ಅವರು ಇಂದು ನಕಲಿ ಪತ್ರಕರ್ತರ ಮತ್ತು ಬ್ಲಾಕ್ ಮೇಲ್ ಪತ್ರಕರ್ತರ ಹಾವಳಿಯನ್ನು ತಪ್ಪಿಸುವ ಕೆಲಸ ಪತ್ರಕರ್ತರ ಸಂಘಗಳು ಮಾಡಬೇಕಾಗಿದೆ ಎಂದರು.
ಪತ್ರಕರ್ತರ ಮೇಲೆ ಸಮಾಜ ದೊಡ್ಡ ಭರವಸೆ ಇರಿಸಿದೆ. ಆ ಭತವಸೆಯನ್ನು ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲೆ ಇದೆ ಎಂದ ಅವರು ಹೇಳಿದರು.
ಪತ್ರಕರ್ತರ ಬೆಳವಣಿಗೆಗೆ ಮುದ್ರಣ ಮಾಧ್ಯಮ ಅತ್ಯಂತ ಸೂಕ್ತ ವೇದಿಕೆ. ಮುದ್ರಣ ಮಾಧ್ಯಮದ ಸುದ್ದಿಮನೆಯ ಗರಡಿಯಲ್ಲಿ ಬೆಳೆದ ಪತ್ರಕರ್ತರು ಬಳಿಕ ಯಾವುದೇ ಮಾಧ್ಯಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲರು ಎಂದರು. ಭಾಷೆಯ ಬಳಕೆ, ಸುದ್ದಿ ಪ್ರಸ್ತುತಪಡಿಸುವ ರೀತಿ ಅತೀ ಅಗತ್ಯ ಎಂದರು.
ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಸಮ್ಮೇಳನದ ಕಿಟ್ ಬಿಡುಗಡೆ ಮಾಡಿದರು. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್,ಬ್ಯಾಂಕ್ ಆಫ್ ಬರೋಡಾದ ಮಹಾ ಪ್ರಬಂಧಕರು ಮತ್ತು ವಲಯ ಮುಖಸ್ಥರಾದ ಗಾಯತ್ರಿ, ದ.ಕ.ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ, ಅನಘ ರಿಫೈನರೀಸ್ ಮಂಗಳೂರು ಇದರ ಆಡಳಿತ ನಿರ್ದೇಶಕ ಸಾಂಬಶಿವರಾವ್, ಕ್ರೆಡಾಯಿ ಮಂಗಳೂರು ಅಧ್ಯಕ್ಷ ವಿನೋದ್ ಎ.ಆರ್.ಪಿಂಟೊ, ಅತಿಥಿಗಳಾಗಿದ್ದರು. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ರಾಜ್ಯ ಕಾರ್ಯ ಕಾರಿ ಸಮಿತಿ ಸದಸ್ಯರಾದ ಜಗನ್ನಾಥ ಶೆಟ್ಟಿ ಬಾಳ, ಇಬ್ರಾಹಿಂ ಅಡ್ಕಸ್ಥಳ, ಹಿರಿಯ ಪತ್ರಕರ್ತರಾದ ಮನೋಹರ ಪ್ರಸಾದ್, ಆನಂದ ಶೆಟ್ಟಿ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಆಶಯ ಭಾಷಣ ಮಾಡಿದರು.
ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಸ್ವಾಗತಿಸಿದರು, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಸತೀಶ್ ಇರಾ ಪ್ರಾರ್ಥನೆ ಹಾಡಿದರು, ಮಹಮ್ಮದ್ ಆರಿಫ್ ಪಡುಬಿದ್ರೆ ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಿದರು. ಪತ್ರಕರ್ತ ದಿನೇಶ್ ಇರಾ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English