ರಾಜ್ಯದಲ್ಲಿ ತೀವ್ರ ಬರಗಾಲವಿದ್ದರೂ ಕಾಂಗ್ರೆಸ್ ಸರಕಾರ, ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯಲ್ಲಿ ತೊಡಗಿದೆ

9:24 PM, Wednesday, November 22nd, 2023
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಬಿಜೆಪಿ ಸರಕಾರವು ಬೇಸಿಗೆಯಲ್ಲೂ ರೈತರಿಗೆ ತೊಂದರೆ ಆಗಬಾರದೆಂದು ಕನಿಷ್ಠ 7 ಗಂಟೆ ವಿದ್ಯುತ್ ಕೊಟ್ಟಿತ್ತು, ರಾಜ್ಯದಲ್ಲಿ ತೀವ್ರ ಬರಗಾಲವಿದ್ದರೂ ರಾಜ್ಯದ ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ನಿಗಮ, ಮಂಡಳಿಗಳ ಅಧ್ಯಕ್ಷರ ನೇಮಕಾತಿ, ಲೋಕಸಭಾ ಚುನಾವಣೆ ಕಡೆ ಗಮನ ಹರಿಸುತ್ತಿದೆ ಎಂದು ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರನವರು ಆಕ್ಷೇಪಿಸಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬೇಸಿಗೆಯಲ್ಲಿ ವಿದ್ಯುತ್ ಕೊರತೆ ಆಗುವುದಾಗಿ ಮುಂಚಿತವಾಗಿಯೇ ಆಲೋಚಿಸಿ ಬಿಜೆಪಿ ಸರಕಾರವು ಹೊರ ರಾಜ್ಯಗಳಿಂದ ವಿದ್ಯುತ್ ಖರೀದಿಸಿತ್ತು. ಆದರೆ, ಮುಂಗಾರು, ಹಿಂಗಾರು ವೈಫಲ್ಯ, ಒಂದೆರಡು ತಾಸು ವಿದ್ಯುತ್ ಇಲ್ಲದೆ ರೈತರು ಪರದಾಡುತ್ತಿದ್ದರೂ ರಾಜ್ಯ ಸರಕಾರವು ಹೊಣೆಗೇಡಿಯಾಗಿ ವರ್ತಿಸಿದೆ. ಇದರಿಂದ ರೈತರು ಸಮಸ್ಯೆ ಅನುಭವಿಸುತ್ತಿದ್ದಾರೆ ಎಂದು ಟೀಕಿಸಿದರು.

ಮುಖ್ಯಮಂತ್ರಿಗಳು ಒಂದು ಕಡೆ ತಮ್ಮ ಸ್ವಗೃಹ ನವೀಕರಣ, ಅಲಂಕಾರಕ್ಕೆ ಕೋಟಿಗಟ್ಟಲೆ ಹಣ ಬಳಸುತ್ತಾರೆ. ಬರಗಾಲವಿದ್ದರೂ ಸಚಿವರಿಗೆ ಹೊಸ ಕಾರು ಖರೀದಿ ನಡೆದಿದೆ. ಇದು ಅವಿವೇಕತನದ ಪ್ರದರ್ಶನ ಎಂದು ಟೀಕಿಸಿದರು.
ಇದು ನಾಡಿನ ರೈತರಿಗೆ ಮಾಡುವ ಅವಮಾನ. ಪದೇಪದೇ ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸುತ್ತಾರೆ. ಹಾಗಿದ್ದರೆ ರಾಜ್ಯ ಸರಕಾರಕ್ಕೆ ಜವಾಬ್ದಾರಿ ಇಲ್ಲವೇ ಎಂದು ಕೇಳಿದರು. ಜವಾಬ್ದಾರಿ ಮರೆತ ರಾಜ್ಯ ಸರಕಾರದ ಕಿವಿ ಹಿಂಡುವ ಕೆಲಸವನ್ನು ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ನಾವು ಮಾಡುತ್ತೇವೆ ಎಂದು ಎಚ್ಚರಿಸಿದರು.

ಹಿಂದೆ ಕಾಂಗ್ರೆಸ್ ಸರಕಾರ ಇದ್ದಾಗ ಅನೇಕ ಹಿಂದೂ ಕಾರ್ಯಕರ್ತರ ಹತ್ಯೆ ಆಗಿತ್ತು. ಮುಂದೆ ಅದಾಗದಂತೆ ನಾವು ಇವತ್ತು ಎಚ್ಚರ ವಹಿಸಬೇಕಿದೆ. ಹಿಂದೂ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇವೆ. ಯಾರೂ ಹೆದರುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.

ಭ್ರಷ್ಟ, ದುಷ್ಟ ಸರಕಾರವನ್ನು ಎಲ್ಲರೂ ಒಗ್ಗಟ್ಟಾಗಿ ಎಚ್ಚರಿಸುತ್ತೇವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನಗಳನ್ನೂ ಗೆಲ್ಲಸಿ, ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಮಂತ್ರಿಯಾಗುವಂತೆ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಸಂಸದ ಮತ್ತು ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಜಿಲ್ಲಾಧ್ಯಕ್ಷ ಸುದರ್ಶನ ಮೂಡಬಿದಿರೆ ಅವರು ಹಾಜರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English