ಮಂಗಳೂರು: ತುಳುನಾಡಿನವರೇ ಸೇರಿ ನಿರ್ಮಾಣ ಮಾಡಿರೋ ಹೊಸ ಕನ್ನಡ ಚಲನಚಿತ್ರ “ಕ್ಲಾಂತ” ಸಿನಿಮಾ ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ಉದಯ ಅಮ್ಮಣ್ಣಾಯ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
“ಅನುಗ್ರಹ ಪವರ್ ಮೀಡಿಯಾ ಎಂಬ ಸಂಸ್ಥೆಯಡಿ ಮೊದಲ ಬಾರಿಗೆ ಈ ಸಿನಿಮಾ ನಿರ್ಮಾಣ ಮಾಡಿದ್ದೇನೆ. ಈ ಹಿಂದೆ ತೆರೆಕಂಡಿದ್ದ “ದಗಲ್ ಬಾಜಿಲು” ತುಳು ಚಿತ್ರದ ಜೋಡಿ ಆದ ನಿರ್ದೇಶಕ ವೈಭವ್ ಪ್ರಶಾಂತ್ ಹಾಗೂ ನಾಯಕ ವಿಗ್ನೇಶ್ ಮತ್ತೊಮ್ಮೆ ಜೊತೆಯಾಗಿ ಕ್ಲಾಂತ ಎಂಬ ಕನ್ನಡ ಚಿತ್ರದ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಲು ಸಜ್ಜಾಗಿದ್ದಾರೆ. ನಿರ್ದೇಶಕ ವೈಭವ್ ಪ್ರಶಾಂತ್ ಈ ಮೊದಲು ರಂಗನ್ ಸ್ಟೈಲ್ಎಂಬ ಕನ್ನಡ ಚಿತ್ರ ನಿರ್ದೇಶನ ಮಾಡಿದ್ದು ಇದು ಕನ್ನಡದಲ್ಲಿ ಅವರ ಎರಡನೇ ಸಿನಿಮಾವಾಗಿದೆ. ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು ಎಲ್ಲಾ ಕಡೆ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ” ಎಂದರು.
ಬಳಿಕ ಮಾತಾಡಿದ ಗಾಯಕ ರಾಜೇಶ್ ಕೃಷ್ಣನ್ ಅವರು, “ಕೊರಗಜ್ಜನ ಕಾರಣಿಕ ಅಪಾರ. ನಾನು ಚಿತ್ರದಲ್ಲಿ ಕೊರಗಜ್ಜನನ್ನು ಭಕ್ತಿಯಿಂದ ಪೂಜಿಸುವ ಹಾಡನ್ನು ಹಾಡಿದ್ದೇನೆ. ಇದು ನನ್ನ ಪುಣ್ಯ ಎಂದು ಭಾವಿಸುತ್ತೇನೆ. ಕೊರಗಜ್ಜನ ಕಾರಣಿಕದ ಬಗ್ಗೆ ತಿಳಿದಿದ್ದೆ. ಇಂದು ಅಜ್ಜನ ಕ್ಷೇತ್ರದಲ್ಲೇ ಹಾಡು ಬಿಡುಗಡೆಯಾಗಿರುವುದು ಖುಷಿ ತಂದಿದೆ. ಎಲ್ಲರೂ ಪ್ರೀತಿಯಿಟ್ಟು ಸಿನಿಮಾ ಗೆಲ್ಲಿಸಿ” ಎಂದರು.
ನಿರ್ದೇಶಕ ವೈಭವ್ ಪ್ರಶಾಂತ್ ಮಾತನಾಡಿ, “ಚಿತ್ರದ ನಾಯಕನ ನಟನೆ ಹಾಗೂ ಪವರ್ ಫುಲ್ ಆಕ್ಷನ್ ನೋಡಿ ಸಿನಿರಸಿಕರು ಇವರಿಗೆ ಕನ್ನಡ ಚಿತ್ರರಂಗದಲ್ಲಿ ಮಾಸ್ ಹೀರೋ ಆಗೋ ಎಲ್ಲ ಲಕ್ಷಣ ಇದೆ ಎಂದು ಹೇಳುತ್ತಿದ್ದಾರೆ. ಎರಡನೇ ಸಲ ಹಾಗೂ ದಯವಿಟ್ಟು ಗಮನಿಸಿ ಚಿತ್ರಗಳ ಖ್ಯಾತಿಯ ಸಂಗೀತ ಭಟ್ ಈ ಚಿತ್ರಕ್ಕೆ ನಾಯಕಿಯಾಗಿದ್ದಾರೆ ಅವರ ನಟನೆ ಹಾಗೂ ಆಕ್ಷನ್ ಗೂ ಎಲ್ಲಾ ಕಡೆ ಅದ್ಭುತ ಪ್ರಶಂಸೆ ವ್ಯಕ್ತವಾಗಿದೆ. ತುಳುನಾಡಿನ ಹಾಸ್ಯ ನಟ ಭೋಜರಾಜ್ ವಾಮಂಜೂರ್ ಅವರ ಮಗಳು ಪಂಚಮಿ ವಾಮಜೂರ್ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಈ ಚಿತ್ರದ ವಿಭಿನ್ನ ಪಾತ್ರದ ಮೂಲಕ ಪಾದರ್ಪಣೆ ಮಾಡುತ್ತಿದ್ದಾರೆ. ಹಾಗೂ ತುಳು ಚಿತ್ರರಂಗದ ಅದ್ಭುತ ಖಳ ನಟ ಚಾ ಪರ್ಕ ತಂಡದ ತಿಮ್ಮಪ್ಪ ಕುಲಾಲ್ ರವರು ಈ ಚಿತ್ರದಲ್ಲಿ ಒಂದು ಅದ್ಭುತ ಪಾತ್ರ ನಿರ್ವಹಿಸಿದ್ದಾರೆ. ತಾರಾಗಣದಲ್ಲಿ ಶೋಭರಾಜ್, ವೀಣಾ ಸುಂದರ್, ಸಂಗೀತ ಯುವ, ಸ್ವಪ್ಪಾ ಶೆಟ್ಟಿಗಾರ್ ಕಾಮಿಡಿ ಕಿಲಾಡಿ ಪ್ರವೀಣ್ ಜೈನ್, ದೀಪಿಕಾ, ವಾಮದೇವ ಪುಣಿಂಚತ್ತಾಯ,ರಾಘವೇಂದ್ರ ಕಾರಂತ್ ಆಕಾಶ್ ಸಾಲ್ಯಾನ್, ಕೃಷ್ಣ ಮುಂತಾದವರು ಅಭಿನಯಿಸಿದ್ದಾರೆ.
ಚಿತ್ರಕ್ಕೆ ಛಾಯಾಗ್ರಹಣ ತುಳು “ಏಸ” ಚಿತ್ರದ ಖ್ಯಾತಿಯ ಮೋಹನ್ ಲೋಕನಾಥನ್ ಮಾಡಿದ್ದರೆ, ಎಸ್ಪಿ ಚಂದ್ರಕಾಂತ್ ಸಂಗೀತ ನೀಡಿದ್ದಾರೆ. ಸಂಭಾಷಣೆ ಮಹೇಶ್ ದೇವ್ ಮಂಡ್ಯ, ಸಂಕಲನ- ಪಿ ಆರ್ ಸೌಂದರರಾಜ್, ಸಾಹಸ -ವಿನೋದ್, ಸಾಹಿತ್ಯ ಶಶಿರಾಜ್ ಕಾವೂರು, ಸಂತೋಷ್ ನಾಯಕ್, ಸಹ ನಿರ್ಮಾಪಕರು ಸತೀಶ್ ಅಮ್ಮಣ್ಣಾಯ ಜಯಕುಮಾರ್ ಅರುಣ್ ಕುಮಾರ್ ಪ್ರದೀಪ್ ಗೌಡ ಹೇಮಂತ್ ರೈ ಮನವಳಿಕೆ. ಚಿತ್ರದ ಬಹುತೇಕ ಚಿತ್ರೀಕರಣ ಗುಂಡ್ಯ ಸುಬ್ರಹ್ಮಣ್ಯ ಅರಣ್ಯ ವಲಯದಲ್ಲಿ ಹಾಗೂ ಕಳಸ ಭಾಗದಲ್ಲೂ ನಡೆದಿದೆ.
ಚಿತ್ರದ ಕೆಲಸ ಸಂಪೂರ್ಣಗೊಂಡಿದ್ದು ಸದ್ಯದಲ್ಲೇ ಬೆಂಗಳೂರು-ಮಂಗಳೂರು ಹಾಗೂ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ” ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಖ್ಯಾತ ಗಾಯಕ ರಾಜೇಶ್ ಕೃಷ್ಣನ್, ಸಾಹಿತಿ ಶಶಿರಾಜ್ ರಾವ್ ಕಾವೂರು, ನಿರ್ಮಾಪಕ ಉದಯ ಅಮ್ಮಣ್ಣಾಯ, ನಿರ್ದೇಶಕ ವೈಭವ್ ಪ್ರಶಾಂತ್, ಸಂಗೀತ ನಿರ್ದೇಶಕ ಎಸ್ಪಿ ಚಂದ್ರಕಾಂತ್ ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English