ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾ ಷಷ್ಠಿ ಹಾಗೂ ವೈಭವದ ಬ್ರಹ್ಮರಥೋತ್ಸವ

1:35 PM, Tuesday, December 19th, 2023
Share
1 Star2 Stars3 Stars4 Stars5 Stars
(No Ratings Yet)
Loading...

ಸುಳ್ಯ : ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾ ಷಷ್ಠಿ ವೈಭವ ಹಾಗೂ ಬ್ರಹ್ಮರಥೋತ್ಸವವು ಸೋಮವಾರ ವಿಜೃಂಭಣೆಯಿಂದ ನೆರವೇರಿತು. ನಾಡಿನೆಲ್ಲೆಡೆಯಿಂದ ಭಕ್ತ ಸಾಗರವೇ ಕುಕ್ಕೆಗೆ ಆಗಮಿಸಿ, ಬ್ರಹ್ಮರಥೋತ್ಸವ ಕಣ್ಣುಂಬಿಕೊಂಡರು. ಜೊತೆಗೆ ಕುಕ್ಕೆಯ ಶ್ರೀ ಸುಬ್ರಮಣ್ಯ ಸ್ವಾಮಿಯ ದರ್ಶನ ಪಡೆದು ಪುನೀತರಾದರು.

ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲೂ, ಐದು ದಿನಗಳ ಪರ್ಯಂತ ಷಷ್ಠಿ ಮಹೋತ್ಸವ ವೈಭವದಿಂದ ನೆರವೇರಿದೆ. ಕೊನೆಯ ದಿನವಾದ ಸೋಮವಾರ ಚಂಪಾಷಷ್ಠಿ ಮಹೋತ್ಸವಕ್ಕೆ ಬೆಳಗ್ಗೆ 7.30ರ ಧನುಲಗ್ನ ಮುಹೂರ್ತದಲ್ಲಿ ಅದ್ಧೂರಿ ಚಾಲನೆ ನೀಡಲಾಯಿತು ಹಾಗೂ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು.

ಸಂಪ್ರದಾಯದಂತೆ ಸ್ಥಳೀಯ ಮಲೆಕುಡಿಯ ಸಮುದಾಯದವರು ರಥವನ್ನು ಕಟ್ಟಿದ್ದರು. ಬ್ರಹ್ಮರಥವನ್ನು ಬಿದಿರಿನಿಂದ ಎಳೆಯುವುದು ಕುಕ್ಕೆಯ ಬ್ರಹ್ಮರಥೋತ್ಸವದ ವಿಶೇಷ. ರಥೋತ್ಸವದ ಬಳಿಕ ಈ ಬಿದಿರನ್ನೇ ತುಂಡರಿಸಿ ಭಕ್ತರಿಗೆ ನೀಡಲಾಗುತ್ತದೆ. ಚಂಪಾ ಷಷ್ಠಿ ಪ್ರಯುಕ್ತ ದೇಗುಲದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ನೂರಾರು ಭಕ್ತರು ಬೀದಿ ಮಡೆಸ್ನಾನ ಮಾಡಿ ಹರಕೆ ಸಲ್ಲಿಸಿದರು. ಬ್ರಹ್ಮರಥೋತ್ಸದಲ್ಲಿ ಜಿಲ್ಲಾಧಿಕಾರಿ ಮುಲೈ ಮುಹಿಲನ್, ಎಸ್‌ಪಿ ರಿಷ್ಯಂತ್‌ ಸಹಿತ ಗಣ್ಯರು ಭಾಗವಹಿಸಿದರು. ಕರಾವಳಿ ಮಾತ್ರವಲ್ಲದೇ ರಾಜ್ಯ, ಹೊರ ರಾಜ್ಯಗಳಿಂದಲೂ ಸಾವಿರಾರು ಮಂದಿ ಭಕ್ತರು ಚಂಪಾ ಷಷ್ಠಿ ಉತ್ಸವದಲ್ಲಿ ಪಾಲ್ಗೊಂಡು, ಸುಬ್ರಮಣ್ಯನ ದರ್ಶನ ಪಡೆದು ಪುನೀತರಾದರು.

ಶಿವ ಹಾಗೂ ಪಾರ್ವತಿಯರ ಮಗನಾದ ಕಾರ್ತಿಕೇಯನು ಕುಮಾರಧಾರ ತಟದಲ್ಲಿ ನೆಲೆಯಾದ ಸ್ಥಳ ಕುಕ್ಕೆ ಸುಬ್ರಹ್ಮಣ್ಯ. ಈ ಸುಬ್ರಹ್ಮಣ್ಯ ಷಷ್ಠಿಯ ಹಿಂದೆಯೂ ಒಂದು ಪೌರಾಣಿಕ ಹಿನ್ನಲೆ ಇದೆ. ಸ್ಕಂದ ಷಷ್ಠಿ ನಂತರ ಬರುವ ಆಚರಣೆಯೇ ಸುಬ್ರಹ್ಮಣ್ಯ ಷಷ್ಠಿ. ಮಾರ್ಗಶಿರ ಮಾಸದಲ್ಲಿ ಬರುವ ಈ ಷಷ್ಠಿ ಕುಕ್ಕೆ ಸುಬ್ರಹ್ಮಣ್ಯ ಷಷ್ಠಿ ಎಂದೂ ಪ್ರಸಿದ್ಧಿಯನ್ನು ಪಡೆದಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English