ಮಂಗಳೂರು: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನೇಮಕಾತಿ ಪರೀಕ್ಷೆ ಹಗರಣದಲ್ಲಿ ಮಂಗಳೂರು ವಿವಿ ಅಧಿಕಾರಿಗಳು ನೇರವಾಗಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಪರೀಕ್ಷಾ ಪೂರ್ವದಲ್ಲೇ ಕೋಚಿಮುಲ್ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮಾರಾಟವಾಗಿದೆ ಅನ್ನೋ ಬಗ್ಗೆ ಸಂಶಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಶನಿವಾರ (ಜ.20) ಮಂಗಳೂರು ವಿವಿಗೆ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳ ತಂಡ ಭೇಟಿ ನೀಡಿ ತೀವ್ರ ವಿಚಾರಣೆ ನಡೆಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಉಲ್ಲಾಳ ತಾಲೂಕಿನ ಕೊಣಾಜೆಯಲ್ಲಿರುವ ಮಂಗಳೂರು ವಿವಿಗೆ ಇ.ಡಿ ಅಧಿಕಾರಿಗಳ ತಂಡ ಭೇಟಿ ನೀಡಿದ್ದು, ಪರೀಕ್ಷಾಂಗ ಕುಲಸಚಿವ ಪ್ರೊ.ರಾಜುಕೃಷ್ಣ ಚಲನ್ನವರ್ ಅವರನ್ನ ವಿಚಾರಣೆ ನಡೆಸಿದೆ.
ಕೋಚಿಮುಲ್ ನೇಮಕಾತಿ ಹಗರಣ ಸಂಬಂಧ ಈ ಹಿಂದೆಯೇ ವಿವಿ ಪರೀಕ್ಷಾಂಗ ಕುಲಸಚಿವರಿಗೆ ನೋಟಿಸ್ ನೀಡಲಾಗಿತ್ತು. ಶನಿವಾರ ವಿವಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ, ವಿವಿ ಅಧಿಕಾರಿಗಳೇ ಅಭ್ಯರ್ಥಿಗಳಿಗೆ ಲಕ್ಷಾಂತರ ರೂ.ಗಳಿಗೆ ಪ್ರಶ್ನೆಪತ್ರಿಕೆ ಮಾರಾಟ ಮಾಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. ಅಲ್ಲದೇ ವಿವಿ ಅಧಿಕಾರಿಗಳ ಇ-ಮೇಲ್, ದೂರವಾಣಿ ಕರೆಗಳ ವಿವರ ಹಾಗೂ ಬ್ಯಾಂಕಿಂಗ್ ವ್ಯವಹಾರಗಳ ಕುರಿತು ತೀವ್ರ ತಪಾಸಣೆ ನಡೆಸಿದೆ.
Click this button or press Ctrl+G to toggle between Kannada and English