ಮಂಗಳೂರು : ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ವಿಷಯದಲ್ಲಿ ಸಚಿವ ರಾಜಣ್ಣ ನೀಡಿರುವುದು ಮುರ್ಖತನದ ಹೇಳಿಕೆ. ಈ ಹೇಳಿಕೆ ಕಾಂಗ್ರೆಸ್‌ನ ಮಾನಸಿಕತೆಯನ್ನು ತೋರಿಸುತ್ತದೆ ಎಂದು ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ, ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಂಗಳೂರಿನಲ್ಲಿ ರಾಮ ಮಂದಿರದ ಬಗ್ಗೆ ಸಚಿವ ರಾಜಣ್ಣ ವಿವಾದಾತ್ಮಕ ಹೇಳಿಕೆ ನೀಡಿದ ಬಗ್ಗೆ ಪ್ರತಿಕ್ರಿಯಿಸಿದ ನಳಿನ್ ಕುಮಾರ್ ಅವರು, ಅಯೋಧ್ಯೆಯ ಹೋರಾಟದ ಸಂದರ್ಭ ಕಾಂಗ್ರೆಸ್ ಟೀಕೆಗಳನ್ನು ಮಾಡಿತ್ತು. ರಾಮನ ಹುಟ್ಟಿನ ಬಗ್ಗೆ ಪ್ರಶ್ನೆ ಮಾಡಿತ್ತು. ಕಾಂಗ್ರೆಸ್‌ಗೆ ಈ ದೇಶದ ಸಂಸ್ಕೃತಿ ಬಗ್ಗೆ ಗೌರವ ಇಲ್ಲ, ಈ ದೇಶದ ಆದರ್ಶ ಪುರುಷ, ವೇದ ಪುರಾಣಗಳ ಬಗ್ಗೆಯೂ ನಂಬಿಕೆ ಇಲ್ಲದ ಪಕ್ಷ ಕಾಂಗ್ರೆಸ್. ಕೇವಲ ಮತಬ್ಯಾಂಕ್ ತುಷ್ಟೀಕರಣ ನೀತಿಯ ಮೇಲೆ ಕಾಂಗ್ರೆಸ್ ಅವಲಂಬಿತವಾಗಿದೆ.
ಅಯೋಧ್ಯೆಯಲ್ಲಿ ಮಂದಿರ ಯಾಕೆ? ಟಾಯ್ಲೆಟ್ ಕಟ್ಟಿ ಎಂದು ಹೇಳಿದ್ದು ಕಾಂಗ್ರೆಸ್. ಕಾಂಗ್ರೆಸ್ ಎಲ್ಲ ಹಿರಿಯ ನಾಯಕರು ಅಯೋಧ್ಯೆಯ ರಾಮ ಮಂದಿರ ಬಗ್ಗೆ ಟೀಕೆ ಮಾಡಿದವರೇ. ಅಯೋಧ್ಯೆಯ ರಾಮ ಮಂದಿರವನ್ನು ಟೂರಿಂಗ್ ಟಾಕೀಸ್‌ಗೆ ಹೋಲಿಸಿರುವುದು, ಅಯೋಧ್ಯೆಯ ರಾಮ ಮಂದಿರದ ಬಗ್ಗೆ ಕೀಳಾಗಿ ಮಾತನಾಡಿರುವುದು ಅವರ ವ್ಯಕ್ತಿತ್ವವನ್ನು ತೋರಿಸುತ್ತದೆ. ರಾಜಣ್ಣ ಅಧಿಕಾರದ ದಾಹ, ಮೋಹ, ಸ್ಥಾನಕ್ಕಾಗಿ ಈ ರೀತಿಯ ಹೇಳಿಕೆ ಕೊಡುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್‌ನ್ನು ಮೆಚ್ಚಿಸುವ ಕೆಲಸ ಮಾಡಿದ್ದಾರೆ. ರಾಜಣ್ಣನಂತಹ ಮಾತು ರಾಮಮಂದಿರಕ್ಕೆ ಅವಶ್ಯಕತೆಯಿಲ್ಲ. ರಾಜಣ್ಣನ ಭಾವನೆ, ಮಾತು ಬಹುಸಂಖ್ಯಾತ ಹಿಂದುಗಳಿಗೆ ಮಾಡಿರುವ ಅವಮಾನ. ರಾಜಣ್ಣನಂತಹ ಹೇಳಿಕೆ ರಾಷ್ಟ್ರವಿರೋಧಿ ಹೇಳಿಕೆ ಎಂದರು.
ಭಾರತ ಮಾತ್ರವಲ್ಲದೆ ಇಂಡೋನೇಷ್ಯಾ, ಮುಸಲ್ಮಾನ ರಾಷ್ಟ್ರಗಳಲ್ಲಿಯೂ ರಾಮನ ಆರಾಧನೆ ಇದೆ. ಇಂತಹ ರಾಮನ ಬಗ್ಗೆ ರಾಜಣ್ಣರ ಹೇಳಿಕೆ ಅವರ, ಕಾಂಗ್ರೆಸ್‌ನ ಮಾನಸಿಕತೆ ತೋರಿಸುತ್ತದೆ. ಕಾಂಗ್ರೆಸ್‌ಗೆ ರಾಮಮಂದಿರದ ಅವಶ್ಯಕತೆ ಇದ್ದಾಗಲೂ ಅದನ್ನು ವಿರೋಧಿಸಿದೆ. ಈಗ ರಾಮನ ದರ್ಶನ ಭಾಗ್ಯವನ್ನು ವಿರೋಧಿಸಿದೆ. ತುಷ್ಟೀಕರಣದ ರಾಜನೀತಿಗಾಗಿ ಈ ರೀತಿಯ ಹೇಳಿಕೆ ಕೊಡುತ್ತಿದ್ದಾರೆ ಎಂದರು.
ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಮಂದಿರ ರಾಷ್ಟ್ರ ಮಂದಿರವಾಗಿದೆ. ಭಾರತೀಯ ಸಂಸ್ಕೃತಿಯ ಗೌರವ, ಸ್ವಾಭಿಮಾನದ ಪ್ರತೀಕವಾಗಿ ಶ್ರೀರಾಮನ ಮಂದಿರ ನಿರ್ಮಾಣವಾಗಿದೆ. ಗುಲಾಮಗಿರಿ ಸಂಕೇತವಾಗಿದ್ದ ವಿವಾದಾತ್ಮಕ ಕಟ್ಟಡ ಕರಸೇವಕರ ಮೂಲಕ ನಾಶವಾಯಿತು. ನ್ಯಾಯಾಲಯದ ತೀರ್ಪಿನ ಆದೇಶದಂತೆ ಮಂದಿರ ನಿರ್ಮಾಣವಾಗಿದೆ. ಮಂದಿರ ಎನ್ನುವುದು ಹಿಂದುಗಳ ಭಾವನೆ ಮಾತ್ರವಲ್ಲ ರಾಷ್ಟ್ರದ ಭಾವನೆ ಎಂದರು.
ಒಳ ಮೀಸಲಾತಿ ಜಾರಿಗೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಶಿಫಾರಸು ಮಾಡಿದ ವಿಚಾರದ ಬಗ್ಗೆ ಮಾತಾಡಿದ ನಳಿನ್ ಕುಮಾರ್, ಜಾತಿ-ಜಾತಿ, ಸಮುದಾಯವನ್ನು ಒಡೆಯುವುದು ಕಾಂಗ್ರೆಸ್ ಜಾಯಮಾನ. ಅವರಿಗೆ ಇಚ್ಛಾಶಕ್ತಿ ಇದ್ದರೆ ಅವರೇ ಒಂದು ನಿರ್ಣಯ ತೆಗೆದುಕೊಳ್ಳಬಹುದಿತ್ತು. ಅವರಿಗೆ ಇಚ್ಛಾಶಕ್ತಿಯ ಕೊರತೆ ಇದೆ. ಕೇವಲ ಓಟಿಗಾಗಿ ಸಿಎಂ ಸಿದ್ದರಾಮಯ್ಯ ಈ ರೀತಿ ನಾಟಕ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
Click this button or press Ctrl+G to toggle between Kannada and English