ಮಂಗಳೂರು : ನೆಹರು ಮೈದಾನದಲ್ಲಿ ನಡೆದ 75ನೇ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಧ್ವಜಾರೋಹಣ ಮಾಡಿದರು.
ಪರೇಡ್ ವೀಕ್ಷಣೆ ಬಳಿಕ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ‘ದೇಶ ನಿರ್ಮಾಣಕ್ಕೆ ಬುನಾದಿ ಹಾಕಿದ ರಾಷ್ಟ್ರನಾಯಕರನ್ನು ತೆರೆಮರೆಗೆ ಸರಿಸಿ ಅವರ ಬಗ್ಗೆ ಯುವತಲೆಮಾರಿಗೆ ತಿಳಿಯದಂತೆ ಮಾಡುವ ಒಳಸಂಚು ರಾಷ್ಟ್ರದಲ್ಲಿ ನಡೆಯುತ್ತಿದೆ. ಇದು ಕಳವಳಕಾರಿ ಸಂಗತಿ‘ ಎಂದರು.
ಆದರ್ಶ ಪುರುಷ ಶ್ರೀರಾಮನಂತೆ ನಾಡಿನ ಜನರಿಗೆ ನೀಡಿದ ಮಾತನ್ನು ಉಳಿಸಿಕೊಳ್ಳುವ ಮೂಲಕ ರಾಜ್ಯ ಸರ್ಕಾರ ರಾಮರಾಜ್ಯದ ಕನಸು ನನಸು ಮಾಡುತ್ತಿದೆ. ಕೆಲವರು ಎದೆಯಲ್ಲಿ ದ್ವೇಷ, ಮತ್ಸರ, ಅಸಹನೆಯನ್ನು ಇರಿಸಿಕೊಂಡು ರಾಮನ ಭಜನೆ ಮಾಡುತ್ತಿದ್ದಾರೆ. ಇದರಿಂದ ರಾಮನ ಕೃಪೆ ದೊರೆಯುವುದೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದ ದಿನೇಶ್ ಗುಂಡೂರಾವ್ ‘ಸಂವಿಧಾನ ಬದಲಿಸುವ ಬಗ್ಗೆಯೂ ಈಚೆಗೆ ಮಾತುಗಳು ಕೇಳಿ ಬರುತ್ತಿವೆ. ಸಂವಿಧಾನ ಬದಲಿಸುವುದು ಎಂದರೆ ಭಾರತದ ಆತ್ಮಕ್ಕೆ ಚೂರಿ ಹಾಕಿದಂತೆ’ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ರಾಷ್ಟ್ರಪ್ರೇಮ ದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ದೇಶಭಕ್ತಿ, ರಾಷ್ಟ್ರಶಕ್ತಿ, ಯೋಧರ ತ್ಯಾಗವನ್ನು ಬಿಂಬಿಸುವ ರೂಪಕಗಳು, ಬ್ಯಾಂಡ್ ಮೇಳದ ಹಿನ್ನೆಲೆಯಲ್ಲಿ ಶಿಸ್ತಿನ ಕವಾಯತು, ಜಾನಪದ ನೃತ್ಯ ಮುಂತಾದ ವೈವಿಧ್ಯಗಳೊಂದಿಗೆ ಗಣರಾಜ್ಯೋತ್ಸವ ನಡೆಯಿತು.
ಸಂಸದ ನಳಿನ್ ಕುಮಾರ್ ಕಟೀಲ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ ಕೆ, ಐಜಿಪಿ ಅಮಿತ್ ಸಿಂಗ್, ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English