ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ನೂತನ ಅಧ್ಯಕ್ಷ ಸತೀಶ್ ಕುಂಪಲ ಪದಗ್ರಹಣ

10:11 PM, Tuesday, January 30th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು: ರಾಜ್ಯದ ಯಾವುದೇ ಮೂಲೆಗೆ ಹೋದರು ಮತದಾರರು ಉತ್ಸುಕರಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಜಯಗಳಿಸುವುದು ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನುಡಿದಿದ್ದಾರೆ.

ಅಡ್ಯಾರ್ ಗಾರ್ಡನ್ ನಲ್ಲಿ ಇಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿ ಎಂಟು ತಿಂಗಳ ಹಿಂದೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು. ಕಾಂಗ್ರೆಸ್‌ಗೆ ದೇಶದಲ್ಲಿ ಅಧಿಕಾರಕ್ಕೆ ಬರ್ತೇವೆ ಎಂಬ ಭ್ರಮೆ ಹುಟ್ಟಿಕೊಂಡಿದೆ. ಆದರೆ ದೇಶದಲ್ಲಿ ಮತ್ತು ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಜಯೇಂದ್ರ ತಿಳಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಭ್ರಷ್ಟಾಚಾರ ಕಡಿಮೆಯಾಗಿಲ್ಲ. ರಾಜ್ಯದಲ್ಲಿ ಬರ ನಿರ್ವಹಣೆಯಲ್ಲಿ ಯಶಸ್ವಿ ಯಾಗಿಲ್ಲ. ರಾಜ್ಯ ಸರಕಾರ ಬಡವರ ಪರ ಅಲ್ಲ, ಅಲ್ಪಸಂಖ್ಯಾತರ ಹಿಂದೆ ಹೋಗುತ್ತಿರುವ ಸರಕಾರ ಎಂದು ವಿಜಯೇಂದ್ರ ಟೀಕಿಸಿದರು. ದಕ್ಷಿಣ ಕನ್ನಡದ ಜನರ ಬಗ್ಗೆ ಹೆಚ್ಚು ಗೌರವ ಅಭಿಮಾನವಿದೆ ಎಂದರು.

ವಿಧಾನ ಸಭಾ ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡುತ್ತಾ, ಮಂಡ್ಯದಲ್ಲಿ ಎರಡು ತಿಂಗಳ ಹಿಂದೆ ಗ್ರಾಮ ಪಂಚಾಯತ್ ಅನುಮತಿ ಪಡೆದು ಹನುಮ ಧ್ವಜ ಹಾರಾಟ ಮಾಡಿದ್ದಾರೆ. ಅಲ್ಲಿ ಕಾಂಗ್ರೆಸ್ ನ ಕುಮ್ಮಕ್ಕಿನಿಂದ ಹನುಮ ಧ್ವಜ ಇಳಿಸಿ ರಾಷ್ಟ್ರ ಧ್ವಜ ಏರಿಸಿದ್ದಾರೆ. ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ್ದಾರೆ ಎಂದು ಆರ್ ಅಶೋಕ್ ಹೇಳಿದರು.

ಯಾರಿಗೂ ನೋವಾಗದಂತೆ ಕಾರ್ಯ ನಿರ್ವಹಿಸುತ್ತೇನೆ. ಪಕ್ಷದ ಸಾಮಾನ್ಯ ಕಾರ್ಯಕರ್ತನಂತೆ ಜಿಲ್ಲಾಧ್ಯಕ್ಷನಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ನೂತನ ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ವಿಶ್ವಾಸ ವ್ಯಕ್ತಪಡಿಸಿದರು. ನಿರ್ಗಮನ ಅಧ್ಯಕ್ಷ ಸುದರ್ಶನ ಮೂಡುಬಿದಿರೆ ಮಾತನಾಡುತ್ತಾ, ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ ತೃಪ್ತಿ ಇದೆ. ಎಲ್ಲಾ ಪದಾಧಿಕಾರಿಗಳ ಸಹಕಾರ ದೊರೆತಿದೆ. ಹಿರಿಯ ಮಾರ್ಗದರ್ಶನ ದೊರೆತಿದೆ ಎಂದರು.

ಮಾಜಿ ಸಚಿವ ಡಾ.ಅಶ್ವಥ ನಾರಾಯಣ್ ಶುಭ ಹಾರೈಸಿದರು. ಮಾಜಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ನರೇಂದ್ರ ಮೋದಿ ಆಡಳಿತದಲ್ಲಿ ಭಾರತ ಜಗತ್ತಿ ಮೂರನೆ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಲಿದೆ. ರಾಜ್ಯದಲ್ಲಿ ನಳಿನ್ ಕುಮಾರ್ ಕಟೀಲ್ ಯಶಸ್ವಿಯಾಗಿ ಪಕ್ಷವನ್ನು ಕಟ್ಟಿದ್ದಾರೆ ಎಂದು ಅವರು ಅಭಿನಂದಿಸಿದರು.

ಸಮಾರಂಭದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜ, ಭರತ್ ಶೆಟ್ಟಿ, ಉಮಾನಾಥ ಕೊಟ್ಯಾನ್, ಭಾಗೀರಥಿ ಮುರುಳ್ಯ, ಪ್ರತಾಪ ಸಿಂಹ ನಾಯಕ್, ನಿಕಟ ಪೂರ್ವ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಬಿಜೆಪಿ ಪದಾಧಿಕಾರಿಗಳಾದ ಬೃಜೇಶ್ ಚೌಟ, ನಿತಿನ್ ಕುಮಾರ್, ರಾಜೇಶ್, ಉದಯ ಕುಮಾರ್ ಶೆಟ್ಟಿ, ಗೋಪಾಲ ಕೃಷ್ಣ ಹೇರಳೆ, ವಿ.ಬಿ.ಭಾರತೀಶ್, ರಾಜೇಶ್ ಕಾವೇರಿ, ರಾಮದಾಸ್ ಬಂಟ್ವಾಳ, ಪ್ರಶಾಂತ್ ಕೆಡಿಂಜ, ಮನಪಾ ಮೇಯರ್ ಸುಧೀರ್ ಶೆಟ್ಟಿ,ಉಪ ಮೇಯರ್ ಸುನೀತಾ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English