ಕಾಪು ಲೈಟ್‌ಹೌಸ್ ಸಮೀಪ ಸಮುದ್ರ ಮಧ್ಯದಲ್ಲಿ ದರೋಡೆ, ಮೀನುಬಾಕ್ಸ್ ಗಳನ್ನು ದರೋಡೆ ಮಾಡಿದ ಕಳ್ಳರು

7:49 PM, Wednesday, January 31st, 2024
Share
1 Star2 Stars3 Stars4 Stars5 Stars
(No Ratings Yet)
Loading...

ಪಡುಬಿದ್ರಿ: ಮಂಗಳೂರು ಬಂದರಿನಿಂದ ಮೀನುಗಾರಿಕೆಗೆ ಬಂದು, ಮೀನುಗಾರಿಕೆ ಮುಗಿಸಿ ವಾಪಸಾಗುತ್ತಿದ್ದ ವೇಳೆ ಕಾಪು ಲೈಟ್‌ಹೌಸ್ ಬಳಿ ಸಮುದ್ರ ಮಧ್ಯೆ ಲಕ್ಷಾಂತರ ರೂ. ಮೌಲ್ಯದ ಮೀನು ಹಾಗೂ ಮೀನುಗಾರರ ಬಳಿಯಿದ್ದ ನಾಲ್ಕು ಮೊಬೈಲ್ ಸಹಿತ ಸೊತ್ತುಗಳನ್ನು ದರೋಡೆ ಮಾಡಿರುವ ಘಟನೆ ಕಾಪು ಲೈಟ್‌ಹೌಸ್ ಸಮೀಪದಲ್ಲಿ ಮಂಗಳವಾರ ನಡೆದಿದೆ.

ಆಂಧ್ರ ಪ್ರದೇಶದ ಮೀನುಗಾರರಾದ ಪರ್ವತಯ್ಯ, ಕೊಂಡಯ್ಯ, ರಘು ರಾಮಯ್ಯ, ಶಿವರಾಜ್, ಕೆ.ಶೀನು, ಏಳುಮಲೆ, ಚಿನ್ನೋಡು, ರಾಜು ಎಂಬುವರು ಜ. 27ರಂದು ಮಹಮ್ಮದ್ ಮುಸ್ತಫ್ ಬಾಷಾರ ಟ್ರಾಲ್ ಬೋಟ್‌ನಲ್ಲಿ ಮಂಗಳೂರು ಬಂದರಿನಿಂದ ಮೀನುಗಾರಿಕೆಗೆ ಹೊರಟಿದ್ದು ಮೀನು ಹಿಡಿದು ಮಂಗಳೂರು ಬಂದರಿಗೆ ವಾಪಾಸು ಹೋಗುತ್ತಿದ್ದರು.

ಕಾಪು ಲೈಟ್‌ಹೌಸ್‌ನಿಂದ 10 ನಾಟಿಕಲ್ ಮೈಲು ದೂರದ ಸಮುದ್ರಮಧ್ಯದಲ್ಲಿ ಹನುಮ ಜ್ಯೋತಿ ಎಂಬ ಹೆಸರಿನ ಪರ್ಸಿನ್ ಬೋಟ್‌ನಲ್ಲಿದ್ದ ಜನರ ಪೈಕಿ 7-8 ಜನರು ಟ್ರಾಲ್ ಬೋಟ್ ಒಳಗೆ ಹತ್ತಿ ಬೋಟ್‌ನಲ್ಲಿದ್ದ ಮೀನಿನ ಬಾಕ್ಸ್‌ಗಳನ್ನು ದರೋಡೆಗೈದಿದ್ದು ಮೀನುಗಾರರಿಗೆ ಹಲ್ಲೆ ನಡೆಸಿದ್ದರು. ಈ ವೇಳೆ ಅವರನ್ನು ತಡೆಯಲು ಹೋದ ಟ್ರಾಲ್ ಬೋಟ್‌ನ ಮೀನುಗಾರರ ಪೈಕಿ ಶೀನು ಮತ್ತು ರಘು ರಾಮಯ್ಯ ಅವರನ್ನು ಪರ್ಸಿನ್ ಬೋಟ್‌ನ ಪಕ್ಕದಲ್ಲಿ ಬಂದ 5-7 ಜನರಿದ್ದ ನಾಡದೋಣಿಗೆ ಎತ್ತಿ ಹಾಕಿಕೊಂಡು ಹೋಗಿ ಹಲ್ಲೆ ನಡೆಸಿದ್ದರು.

ಈ ವೇಳೆ ಪರ್ಸಿನ್ ಬೋಟ್‌ನಲ್ಲಿದ್ದ ವ್ಯಕ್ತಿಗಳು ಟ್ರಾಲ್ ಬೋಟ್‌ನಲ್ಲಿದ್ದ 6 ಜನರಿಗೆ ಕೈಯಿಂದ ಹಾಗೂ ಮರದ ರೀಪ್‌ನಿಂದ ಹಲ್ಲೆ ನಡೆಸಿದ್ದು, ಬಳಿಕ ನಾಡ ದೋಣಿಯಲ್ಲಿ ಕರೆದುಕೊಂಡು ಹೋದ ಶೀನು ಮತ್ತ ರಘು ರಾಮಯ್ಯ ಅವರನ್ನು ವಾಪಸು ಕರೆದುಕೊಂಡು ಬಂದು ಟ್ರಾಲ್ ಬೋಟ್‌ಗೆ ಹಾಕಿ, ಮೀನುಗಾರರ 4 ಮೊಬೈಲ್ ಮತ್ತು ಲಕ್ಷಾಂತರ ಮೌಲ್ಯದ 12 ಬಾಕ್ಸ್ ಮೀನುಗಳನ್ನು ಸುಲಿಗೆ ಮಾಡಿ ಪರಾರಿಯಾಗಿದ್ದಾರೆ.
ಹಲ್ಲೆ ಪರಿಣಾಮ ಮೀನುಗಾರರಿಗೆ ಗಾಯ

ಹಲ್ಲೆಯ ಪರಿಣಾಮ ಪರ್ವತಯ್ಯ, ಕೊಂಡಯ್ಯ ರಘುರಾಮಯ್ಯ, ಶಿವರಾಜ್ ಮತ್ತು ಶೀನುಗೆ ಗಾಯಗಳಾಗಿವೆ. ಟ್ರಾಲ್ ಬೋಟ್‌ನಲ್ಲಿದ್ದ ಮೀನುಗಾರರು ಘಟನೆಯ ಸಮಯ ಹಲ್ಲೆ ನಡೆಸಿ ಸುಲಿಗೆ ಮಾಡಿಕೊಂಡು ಹೋದವರನ್ನು ಹಾಗೂ ಬೋಟ್‌ನ ಹೆಸರನ್ನು ಬೋಟ್‌ನಲ್ಲಿದ್ದ ಲೈಟ್ ಸಹಾಯದಿಂದ ನೋಡಿರುವುದಾಗಿ ಮೀನುಗಾರರು ತಿಳಿಸಿದ್ದಾರೆ ಎಂದು ಬೋಟ್‌ನ ಮಾಲೀಕ ಮಹಮ್ಮದ್ ಮುಸ್ತಫ್ ಬಾಷಾ ಕಾಪು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English