ಪುತ್ತಿಲರಿಗೆ ಸರಿಯಾದ ಸ್ಥಾನಮಾನ ನೀಡಿದ್ದಲ್ಲಿ ಬಿಜೆಪಿ ಸೇರ್ಪಡೆ, ಇಲ್ಲವಾದಲ್ಲಿ ಲೋಕಸಭೆಗೆ ಸ್ಪರ್ಧೆ

10:02 PM, Monday, February 5th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಪುತ್ತೂರು: ಪುತ್ತಿಲ ಪರಿವಾರದ ಕಾರ್ಯಕರ್ತರ ಸಮಾಲೋಚನಾ ಸಭೆ ನಡೆದಿದ್ದು ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಇನ್ನು ಮೂರು ದಿನಗಳಲ್ಲಿ ಪುತ್ತಿಲ ಪರಿವಾರ ಬಿಜೆಪಿ ಸೇರ್ಪಡೆ ಅಥವಾ ಲೋಕಸಭೆಯಲ್ಲಿ ಸ್ಫರ್ಧಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ ಎಂದು ನಿರ್ಧರಿಸುವ ಘೋಷಣೆ ಮಾಡಲಾಗಿದೆ.

ಪುತ್ತಿಲರಿಗೆ ಬಿಜೆಪಿ ಪುತ್ತೂರು ಮಂಡಲ ಅಧ್ಯಕ್ಷತೆ ನೀಡದಿದ್ದಲ್ಲಿ ಮುಂದೆ ಜಿಲ್ಲೆಯಲ್ಲಿ ಮಹಾ ರಾಜಕೀಯ ವಿಪ್ಲವ ನಡೆಯಲಿದೆ ಎಂದು ಪುತ್ತಿಲ ಪರಿವಾರದ ಅಧ್ಯಕ್ಷ ಪ್ರಸನ್ನ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಸಂಜೆ ಪುತ್ತೂರಿನ ಕೊಟೇಚ ಹಾಲ್‍ನಲ್ಲಿ ನಡೆದ ಪುತ್ತಿಲ ಪರಿವಾರದ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು ಪುತ್ತಿಲ ಪರಿವಾರದಿಂದ ಕಳೆದ 11 ತಿಂಗಳಿನಿಂದ ಬಿಜೆಪಿ ಜೊತೆ ಸಂಧಾನದ ಮಾತುಕತೆ ನಡೆಯುತ್ತಲೇ ಇದೆ. ಆದರೆ ಇಲ್ಲಿಯ ತನಕ ಯಾವುದೇ ನಿರ್ಧಾರ ಕೈಗೊಳ್ಳಲು ಆಗಿಲ್ಲ. ಅರುಣ್ ಕುಮಾರ್ ಪುತ್ತಿಲ ಅವರಿಗೆ ಜವಾಬ್ದಾರಿಯುತ ಸ್ಥಾನ ನೀಡಿದಲ್ಲಿ ಪುತ್ತಿಲ ಪರಿವಾರ ಮಾತೃ ಪಕ್ಷದೊಂದಿಗೆ ವಿಲೀನವಾಗಲಿದೆ. ಇಲ್ಲವಾದಲ್ಲಿ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಪುತ್ತಿಲ ಪರಿವಾರ ಸ್ಪರ್ಧಿಸಲಿದೆ ಎಂದರು.

ಪುತ್ತಿಲ ಪರಿವಾದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಪಕ್ಷದಲ್ಲಿ ಎಲ್ಲರಿಗೂ ಗೌರವ ತರುವ ವ್ಯವಸ್ಥೆಗಳು ಸುಸೂತ್ರವಾಗಿ ನಡೆಯಬೇಕು. ಇದಕ್ಕಾಗಿ ಪುತ್ತಿಲ ಪರಿವಾರ ಸಂಘಟನೆ ಕೆಲವು ತೀರ್ಮಾನಗಳನ್ನು ಕೈಗೊಂಡಿದ್ದಾರೆ. ಪುತ್ತಿಲ ಪರಿವಾರ ಕೈಗೊಂಡ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ನಾವೆಲ್ಲರೂ ಕೂಡಾ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂ ಸೇವಕರು. ರಾಷ್ಟ್ರೀಯ ವಿಚಾರ ಧಾರೆಯ ಜೊತೆ ನಮ್ಮ ಬದುಕು ಸಾಗಿದೆ. ನಮ್ಮ ರಕ್ತವನ್ನು ಬೆವರು ಮಾಡಿ ಮಾತೃ ಪಕ್ಷವನ್ನು ಅಧಿಕಾರಕ್ಕೆ ತರಲು ದುಡಿದಿದ್ದೇವೆ. ವಿಧಾನಸಭಾ ಚುನಾವಣೆಗೆ ಕಾರ್ಯಕರ್ತರ ಆಸೆಯಂತೆ ಹೆಜ್ಜೆ ಇಟ್ಟಿದ್ದೆವು. ಪ್ರಸ್ತುತ ಸನ್ನಿವೇಶದಲ್ಲಿ ಪಕ್ಷದ ಮತ್ತು ಸಂಘದ ಹಿರಿಯರ ಯೋಚನೆಯಂತೆ ನಡೆಯಲಿದ್ದೇವೆ. ಮುಂದಿನ ನಡೆಗೆ ಕಾರ್ಯಕರ್ತರ ವಿರೋಧ ಇಲ್ಲ ಎಂಬುದನ್ನು ಸ್ಪಷ್ಟ ಪಡಿಸುತ್ತೇನೆ ಎಂದು ಹೇಳಿದರು.

ಶ್ರೀಕೃಷ್ಣ ಉಪಾಧ್ಯಾಯ ಅವರು ಮಾತನಾಡಿ ಪುತ್ತಿಲ ಪರಿವಾರ ಎಂಬುದು ಪುತ್ತಿಲ ಒಬ್ಬರದ್ದಲ್ಲ, ಬದಲಾಗಿ ಇಲ್ಲಿರುವುದು ಸಮಾನ ಮನಸ್ಕರ ಸಶಕ್ತ ತಂಡ. ದೇಶ ಭಕ್ತ ಮೋದಿಯನ್ನು ಕಳೆದುಕೊಳ್ಳಲು ಪುತ್ತಿಲ ಪರಿವಾರ ಎಂದಿಗೂ ಬಯಸುವುದಿಲ್ಲ. ಪುತ್ತಿಲ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ರಾಜ್ಯ ನಾಯಕರು ಉತ್ಸಾಹ, ಕಾತರದಲ್ಲಿದ್ದರೂ ಪುತ್ತೂರಿನ ಬೆರಳೆಣಿಕೆಯ ಸ್ಥಾಪಿತ ಹಿತಾಸಕ್ತಿಗಳು ತಡೆಯಾಗುತ್ತಿದ್ದಾರೆ. ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿಗೆ ಯಾವತ್ತೂ ಬೈದಿಲ್ಲ. ಆದರೆ ಅನ್ಯಾಯ ಆಗುವಾಗ ಇಂತಹ ಅನ್ಯಾಯದ ಪರಂಪರೆ ಪುತ್ತೂರಿನಲ್ಲಿ ಅಂತ್ಯವಾಗಬೇಕು ಎಂದು ನಾವು ಅವರ ಪರವಾಗಿ ಮಾತನಾಡಿದ್ದೇವೆ. ಅರುಣ್ ಕುಮಾರ್ ಪುತ್ತಿಲ ಅವರು ಒಳಗೆ ಬಂದಲ್ಲಿ ತಮ್ಮ ಕುರ್ಚಿಗೆ ಪೆಟ್ಟು ಬೀಳಲಿದೆ ಎಂದು ನಾಲ್ಕು ಜನ ಮಾತ್ರ ಅವರಿಗೆ ಅಡ್ಡಿ ಪಡಿಸುತ್ತಿದ್ದಾರೆ. ಉಳಿದಂತೆ 32 ಸಾವಿರ ಜನರ ವಿರೋಧವೇ ಇಲ್ಲ. ಪುತ್ತಿಲ ಅವರು ಯಾರನ್ನೂ ಬೈದಿಲ್ಲ ಆದ್ದರಿಂದ ಯಾರಲ್ಲೂ ಕ್ಷಮೆ ಕೇಳುವ ಅವಶ್ಯಕತೆಯಿಲ್ಲ. ಪುತ್ತಿಲ ಪರಿವಾರ ಬಿಜೆಪಿ ಸೇರಲು ಸಿದ್ಧವಿದೆ. ದೇಶದ ಅಭಿವೃದ್ಧಿಯ ಹರಿಕಾರ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯಾಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗುತ್ತೇವೆ. ಮಾತೃಪಕ್ಷ ಬಿಜೆಪಿಯಿಂದ ಗೌರವಯುತ ಸ್ವಾಗತವನ್ನು ಬಯಸುತ್ತೇವೆ ಎಂದರು.

ವೇದಿಕೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಶಶಾಂಕ ಕೊಟೇಚಾ, ಪುತ್ತಿಲ ಪರಿವಾರದ ಪ್ರಧಾನ ಕಾರ್ಯದರ್ಶಿ ಉಮೇಶ್ ಕೋಡಿಬೈಲು, ಶ್ರೀನಿವಾಸ ಕಲ್ಯಾಣೋತ್ಸವ ಪ್ರಧಾನ ಕಾರ್ಯದರ್ಶಿ ಮನೀಶ್ ಕುಲಾಲ್, ನಗರ ಅಧ್ಯಕ್ಷ ಅನಿಲ್ ತೆಂಕಿಲ, ಪುತ್ತಿಲ ಪರಿವಾರದ ಮಹಿಳಾ ಘಟಕದ ಅಧ್ಯಕ್ಷೆ ಮಲ್ಲಿಕಾಪ್ರಸಾದ್, ವಕೀಲ ರಾಜೇಶ್ ಕೆ ಆರ್ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English