ಮಂಗಳೂರು: ಮಂಗಳೂರಿನ ಜನ ಮುಂಜಾನೆ ಎದ್ದ ಕೂಡಲೇ ಕಾಂಗ್ರೆಸ್‌ಗೆ ಬೈತಾರೆ. ಧರ್ಮದ ಹೆಸರಲ್ಲಿ ಶ್ರೀಮಂತರು ಬಡವರನ್ನು ತುಳಿಯುತ್ತಿದ್ದಾರೆ. ಮಂಗಳೂರು ಉಡುಪಿಯಲ್ಲಿ ಸೇತುವೆ ನಿರ್ಮಾಣ ಮಾಡಿದ್ದು ಕಾಂಗ್ರೆಸ್ ಕಾಲದಲ್ಲಿ. ಬಂದರು ನಿರ್ಮಾಣ, ವಿಮಾನ ನಿಲ್ದಾಣ ಆಗಿದ್ದು ಕಾಂಗ್ರೆಸ್ ಕಾಲದಲ್ಲಿ. ಎಲ್ಲಾ ಬೃಹತ್ ಯೋಜನೆಗಳೂ ಕಾಂಗ್ರೆಸ್ ಕಾಲದಲ್ಲಿಯೇ ಆಗಿದ್ದು. ಮಣಿಪಾಲ ಶೈಕ್ಷಣಿಕ ಅಭಿವೃದ್ಧಿ, ಬ್ಯಾಂಕ್‌ಗಳನ್ನು ಕೊಟ್ಟಿರೋದೂ ಕಾಂಗ್ರೆಸ್ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೇಳಿದರು.
ಮಂಗಳೂರಿನ ಅಡ್ಯಾರ್ ಸಹ್ಯಾದ್ರಿ ಕಾಲೇಜು ಮೈದಾನದಲ್ಲಿ ಶನಿವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ಇಲ್ಲಿನ ಬ್ಯಾಂಕ್‌ಗಳನ್ನು ಅಹಮದಾಬಾದ್‌ನ ಬ್ಯಾಂಕ್‌ಗಳ ಜೊತೆ ಸೇರಿಸಿಬಿಟ್ಟರು. ಆರ್ಥಿಕವಾಗಿ ಈ ಜಿಲ್ಲೆಯನ್ನು ಮೋದಿ ಹಿಂದೆ ಮಾಡಿಬಿಟ್ರು. ಆದರೆ ಇಲ್ಲಿನ ಜನ ಮೋದಿಗೆ ಜೈಕಾರ ಹಾಕುತ್ತಾರೆ. ಇಲ್ಲಿನ ಬಡವರಿಗೆ ಅಧಿಕಾರ ಕೊಟ್ಟಿದ್ದು ಕಾಂಗ್ರೆಸ್ ಪಾರ್ಟಿ. ನಾವು ಹಿಂದೆ ಮಾಡಿದ ಗ್ಯಾರಂಟಿಗಳನ್ನು ಮರೆತಿದ್ದೀರಿ. ಆದ್ರೆ ಈಗ ಕೊಟ್ಟ ಗ್ಯಾರಂಟಿಗಳನ್ನಾದರೂ ನೆನಪಿಡಿ ಎಂದು ಮಂಗಳೂರು ಜನತೆಗೆ ವಿವರಿಸಿದರು.
ನಿಮ್ಮ ತಂದೆ-ತಾಯಿಯ ಸ್ಥಿತಿ ಹಿಂದೆ ಏನಾಗಿತ್ತು. ನಿಮ್ಮ ತಂದೆಯನ್ನು ಭೂಮಿಯ ಮಾಲೀಕರನ್ನಾಗಿ ಮಾಡಿದವರು ಯಾರು? ಈಗ ಇಲ್ಲಿನ ಜನ ಮರೆತು ಒಡಾಡುತ್ತಿದ್ದಾರೆ. ಭೂಮಿ ಹಂಚಿದ ಜನ ಈಗ ಎಲ್ಲಿ ಹೋಗಿದ್ದಾರೆ. ಲಾಭ ಪಡೆದುಕೊಂಡ ಜನ ಈಗ ನಮ್ಮನ್ನೇ ಮರೆತು ಹೋಗಿದ್ದಾರೆ. ನಮ್ಮ ದುರ್ದೈವ ಇಲ್ಲಿಯ ಜನ ಜಮೀನು ಕೊಟ್ಟವರನ್ನು ನೆನಪಿನಲ್ಲಿ ಇಟ್ಟುಕೊಂಡಿಲ್ಲ. ಆಹಾರ ಸುರಕ್ಷತೆ, ಉಚಿತ ಶಿಕ್ಷಣವನ್ನು ಜನ ಮರೆತಿದ್ದಾರೆ. ನಮ್ಮಿಂದ ಲಾಭ ಪಡೆದು ಜನರು ಮರೆತಿದ್ದಾರೆ. ಆದರೆ ಈಗ ಕೆಲ ಪಕ್ಷಗಳು ಜನರನ್ನು ಒಡೆದು ಸತತ ಅಧಿಕಾರ ಪಡೆಯಲು ಯತ್ನಿಸಿದ್ದಾರೆ ಎಂದು ಎಚ್ಚರಿಸಿದರು.
ಮೋದಿ ಜಮೀನು ಕೊಟ್ರಾ? ಆಹಾರ ಸುರಕ್ಷತೆಯನ್ನು ಮೋದಿ ಕೊಟ್ಟಿದ್ದಾರಾ? ಮಂಗಳೂರು ಜನ ಬಹಳ ಬುದ್ದಿವಂತರು. ನಿಮಗೆ ಬಿಜೆಪಿಯಿಂದ ಲಾಭ ಸಿಕ್ಕಿದ್ಯಾ? ಮೋದಿಯ ಹದಿನೈದು ಲಕ್ಷ ರೂಪಾಯಿ ಸಿಕ್ಕಿದ್ಯಾ? ನಿಮಗೆ ಸಿಕ್ಕಿರಬಹುದು. ನೀವು ಸುಳ್ಳು ಹೇಳುತ್ತಿರಬಹುದು. ಇಲ್ಲಾ ಮೋದಿ ಸುಳ್ಳು ಹೇಳ್ತಾ ಇರಬಹುದು ಎಂದು ವಾಗ್ದಾಳಿ ನಡೆಸಿದರು.
ಮಂಗಳೂರು ಐತಿಹಾಸಿಕ ಭೂಮಿ. ಕೋಟಿ ಚೆನ್ನಯನವರಿಂದ, ವೀರ ಅಬ್ಬಕ್ಕ ದೇವಿ, ನಾರಾಯಣ ಗುರುಗಳ ಭೂಮಿ ಇದು. ಈ ಭೂಮಿಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಇತಿಹಾಸವಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
Click this button or press Ctrl+G to toggle between Kannada and English