ಜೈನಧರ್ಮವನ್ನು ಉಳಿಸುವುದಕ್ಕಿಂತ ಪಾಲಿಸುವ ಪ್ರಯತ್ನ ಮಾಡಬೇಕು : ದೇವೇಂದ್ರಕೀರ್ತಿ ಭಟ್ಠಾರಕ ಸ್ವಾಮೀಜಿ

10:04 PM, Saturday, February 24th, 2024
Share
1 Star2 Stars3 Stars4 Stars5 Stars
(No Ratings Yet)
Loading...

ವೇಣೂರು: ಜೈನಧರ್ಮವನ್ನು ಉಳಿಸುವುದಕ್ಕಿಂತ ಅದರ ತತ್ವ –ಸಿದ್ಧಾಂತಗಳನ್ನು ನಿತ್ಯವೂ ಮನ,ವಚನ ಮತ್ತು ಕಾಯದಿಂದ ತ್ರಿಕರಣಪೂರ್ವಕವಾಗಿ ಪಾಲಿಸುವ ಪ್ರಯತ್ನ ಮಾಡಬೇಕು ಎಂದು ಹೊಂಬುಜ ಜೈನಮಠದ ಪೂಜ್ಯ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಅವರು ಶನಿವಾರ ವೇಣೂರಿನಲ್ಲಿ ಬಾಹುಬಲಿ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಅಯೋಜಿಸಿದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ತೀರ್ಥಂಕರರು ಜೈನಧರ್ಮ ಪ್ರಚಾರಕರಲ್ಲ, ಧರ್ಮ ಪ್ರಭಾವಕರು ಎಂದು ಅವರು ಸ್ಪಷ್ಟಪಡಿಸಿದರು. ಅಂತರಂಗದಲ್ಲಿಯೂ, ಬಹಿರಂಗದಲ್ಲಿಯೂ ಅಹಿಂಸಾಧರ್ಮದ ಪಾಲನೆ ಮಾಡಬೆಕು. ಮಹಾವೀರ ತೀರ್ಥಂಕರರು ಉಪದೇಶ ಮಾಡಿದ ಸರ್ವೋದಯ ತೀರ್ಥವನ್ನು ಯಾರು ನಿತ್ಯವೂ ಪಾಲನೆ ಮಾಡುತ್ತಾರೋ ಅವರೇ ಜೈನರು.

ಅಹಿಂಸೆ ಮತ್ತು ಅನೇಕಾಂತವಾದದಿಂದ ಇಂದಿನ ಎಲ್ಲಾ ಸಮಸ್ಯೆಗಳನ್ನು ಸುಲಭದಲ್ಲಿ ಪರಿಹರಿಸಿ ಸುಖ-ಶಾಂತಿ-ನೆಮ್ಮದಿ ಪಡೆಯಬಹುದು.ಅಹಿಂಸೆ ಮತ್ತು ತ್ಯಾಗದ ಮಹತ್ವಕ್ಕಾಗಿ ನಾವು ಬಾಹುಬಲಿಯನ್ನು ಶ್ರದ್ಧಾ-ಭಕ್ತಿಯಿಂದ ಆರಾಧನೆ ಮಾಡುತ್ತೇವೆ. ಚಕ್ರವರ್ತಿಯಾದ ಭರತನನ್ನೇ ಗೆದ್ದ ಬಾಹುಬಲಿ ಮಹಾಚಕ್ರವರ್ತಿಯಾಗಿ ವಿ ಶ್ವ ವಂದ್ಯನಾಗಿದ್ದಾನೆ ಎಂದು ಸ್ವಾಮೀಜಿ ಹೇಳಿದರು.

ಮೂಡಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಜೈನಧರ್ಮ ಶ್ರೇಷ್ಟ ವಿಶ್ವ ಧರ್ಮವಾಗಿದ್ದು ಎಲ್ಲಾ ತತ್ವಸಿದ್ಧಾಂತಗಳು ವೈಜ್ಞಾನಿಕವಾಗಿಯೂ ಸತ್ಯ ಮತ್ತು ಪರಿಪೂರ್ಣ ಎಂದು ಖಚಿತವಾಗಿದೆ ಎಂದರು.

ಏರ್ ಇಂಡಿಯಾದಲ್ಲಿ ಪೈಲೆಟ್ ಆಗಿ ನೇಮಕಗೊಂಡ ವೇಣೂರಿನ ದಿವಂಗತ ಬಿ.ಪಿ.ಇಂದ್ರರ ಮೊಮ್ಮಗಳು ಕುಮಾರಿ ಅನನ್ಯಾ ಜೈನ್ ಅವರನ್ನು ಗೌರವಿಸಲಾಯಿತು.

ಬೆಂಗಳೂರಿನ ಏಷ್ಯಾನೆಟ್ ಸುವರ್ಣ ಸುದ್ದಿವಾಹಿನಿಯ ಮುಖ್ಯ ಸಂಪಾದಕ ಅಜಿತ್ ಹನುಮಕ್ಕನವರ್ ಮಾತನಾಡಿ ಅಹಿಂಸೆ, ಅನೇಕಾಂತವಾದ ಮತ್ತು ಪಂಚಾಣು ವೃತಗಳು ಜೈನಧರ್ಮದ ಶ್ರೇಷ್ಟ ತತ್ವಗಳಾಗಿದ್ದು ಇವುಗಳ ಪಾಲನೆಯಿಂದ ಸುಖ-ಶಾಂತಿ-ನೆಮ್ಮದಿ ಪಡೆಯಬಹುದು. ಭೋಗಿಗಳನ್ನು ಕೆಲವೇ ಸಮಯ ಸ್ಮರಿಸುತ್ತೇವೆ ಆದರೆ ಬಾಹುಬಲಿಯಂತಹ ತ್ಯಾಗಿಗಳನ್ನು ಸದಾ ಗೌರವಿಸುತ್ತೇವೆ.ಯಾರು ತಮ್ಮ ಅಂತರಂಗದ ವೈರಿಗಳನ್ನು ಗೆಲ್ಲುತ್ತಾರೋ ಅವರೇ ಜೈನರು.ಬದುಕು ಮತ್ತು ಬದಕಲು ಬಿಡು ಎಂಬುದು ಜೈನಧರ್ಮದ ಶ್ರೇಷ್ಟ ತತ್ವವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ಬೆಳಗಾವಿಯ ಪೋಲೀಸ್ ವರಿಷ್ಟಾಧಿಕಾರಿ ಜಿನೇಂದ್ರ ಕಣಗಾವಿ, ಹಿರಿಯ ವಕೀಲ ಪಿ.ಪಿ.ಹೆಗ್ಡೆ, ಎಚ್ ಪಿ ಸಿ ಎಲ್ ನ ನವೀನ್ ಕುಮಾರ್,ಹೃದ್ರೋಗತಜ್ಞ ಡಾ| ಪದ್ಮನಾಭ ಕಾಮತ್, ಧರ್ಮಸ್ಥಳದ ಡಿ.ಹರ್ಷೇಂದ್ರಕುಮಾರ್ ಮತ್ತು ಶಾಸಕ ಹರೀಶ ಪೂಂಜ ಶುಭಾಶಂಸನೆ ಮಾಡಿದರು.

ಯುಗಳ ಮುನಿಗಳ ದಿವ್ಯ ಉಪಸ್ಥಿತಿಯಲ್ಲಿ ಸಭೆ ನಡೆಯಿತು ಅಳದಂಗಡಿ ಅರಮನೆಯ ಡಾ| ಪದ್ಮಪ್ರಸಾದ ಅಜಿಲ ಮತ್ತು ಪ್ರಧಾನ ಕಾರ್ಯದರ್ಶಿ ವಿ.ಪ್ರವೀಣಕುಮಾರ್ ಇಂದ್ರ ಇದ್ದರು.

ಡಾ | ಶಾಂತಿಪ್ರಸಾದ್ ಸ್ವಾಗತಿಸಿದರು. ಶಾಲಿನಿ ನಿರಂಜನ್ ಧನ್ಯವಾದವಿತ್ತರು.ಕುಮಾರಿ ನವಿತಾ ಜೈನ್ ಕಾರ್ಯಕ್ರಮ ನಿರ್ವಹಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English