ಮಂಗಳೂರು: ಪಿಎಚ್ ಡಿ ವಿದ್ಯಾರ್ಥಿನಿಯೋರ್ವಳು ಡ್ರಗ್ಸ್ ಜಾಲದಲ್ಲಿ ಸಿಲುಕಿ ನಾಪತ್ತೆಯಾದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಪುತ್ತೂರಿನ ಪುರುಷರ ಕಟ್ಟೆಯ ವಿದ್ಯಾರ್ಥಿನಿ ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದು, ಪ್ರಕರಣದ ಹಿಂದೆ ಡ್ರಗ್ಸ್ ಮಾಫಿಯಾದ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ. ಆಕೆಯ ಪತ್ತೆಗೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಚೈತ್ರಾ ಹೆಬ್ಬಾರ್(27) ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪುತ್ತೂರು ಮೂಲದ ಮುಸ್ಲಿಂ ಯುವಕ ಶಾರೂಕ್ ಶೇಕ್ ಎಂಬಾತನ ಜೊತೆಗೆ ತೆರಳಿರುವ ಅನುಮಾನ ದಟ್ಟವಾಗಿದೆ.
ವಿದ್ಯಾರ್ಥಿನಿಯ ತಂದೆ ಸಾವನ್ನಪ್ಪಿದ್ದು, ಮಂಗಳೂರಿನ ಕದ್ರಿಯಲ್ಲಿರುವ ಆಕೆಯ ದೊಡ್ಡಪ್ಪ ಶಿಕ್ಷಣದ ಜವಾಬ್ದಾರಿ ಹೊತ್ತಿದ್ದರು. ಮಾಡೂರು ಎಂಬಲ್ಲಿನ ಪಿಜಿಯಲ್ಲಿ ತಂಗಲು ಯುವತಿಗೆ ವ್ಯವಸ್ಥೆ ಮಾಡಿದ್ದರು.
ಶಾರೂಕ್ ಶೇಖ್ ಬಂಟ್ವಾಳದ ನೇರಳಕಟ್ಟೆ ನಿವಾಸಿಯಾಗಿದ್ದು, ಪುತ್ತೂರಿನ ಕೂರ್ನಡ್ಕದ ಚಿಕ್ಕಮ್ಮನ ಮನೆಯಲ್ಲಿ ವಾಸವಿದ್ದ. ಈ ಹಿಂದೆ ಸೌದಿ ಅರೇಬಿಯಾ, ಕತಾರಿನಲ್ಲಿ ಕೆಲಸಕ್ಕಿದ್ದು ಆನಂತರ ಊರಿನಲ್ಲಿಯೇ ನೆಲೆಸಿದ್ದ. ಕತಾರಿನಲ್ಲಿದ್ದಾಗ ಪ್ರಕರಣ ಒಂದರಲ್ಲಿ ಸಿಕ್ಕಿಬಿದ್ದು ಜೈಲು ಪಾಲಾಗಿದ್ದ ಎನ್ನುವ ಮಾಹಿತಿಯೂ ಇದೆ. ಆನಂತರ ಊರಿಗೆ ಬಂದು ಗಾಂಜಾ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗುತ್ತಿದ್ದು, ಚೈತ್ರಾಗೂ ಗಾಂಜಾ. ಡ್ರಗ್ಸ್ ಅಮಲು ಹತ್ತಿಸಿದ್ದ ಎನ್ನುವ ಮಾತು ಕೇಳಿಬರುತ್ತಿದೆ.
ಚೈತ್ರಾ ಪುತ್ತೂರು ಮೂಲದ ಯುವತಿಯಾಗಿದ್ದು, ಮಂಗಳೂರಿನಲ್ಲಿಯೇ ಶಿಕ್ಷಣ ಪೂರೈಸಿದ್ದಳು. ಇದೀಗ ಶಾರೂಕ್ ಶೇಖ್ ತೆಕ್ಕೆಗೆ ಬಿದ್ದು ಆತನ ಜೊತೆಗೆ ಪರಾರಿಯಾಗಿದ್ದಾಳೆ ಎನ್ನಲಾಗುತ್ತಿದೆ. ಚೈತ್ರಾಳ ಸ್ಕೂಟರ್ ಎರಡು ದಿನಗಳ ಹಿಂದೆ ಸುರತ್ಕಲ್ ಬಳಿ ಪತ್ತೆಯಾಗಿದ್ದು, ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಕೆಯ ಬ್ಯಾಂಕ್ ಖಾತೆಯಿಂದ ಸುರತ್ಕಲ್ ನಲ್ಲಿ ಎಟಿಎಂ ಒಂದರಿಂದ ಎರಡು ಲಕ್ಷ ರೂಪಾಯಿ ಹಣ ಡ್ರಾ ಮಾಡಲಾಗಿದೆ ಎನ್ನುವ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ಸದ್ಯ ಆಕೆಯ ಬ್ಯಾಂಕ್ ಖಾತೆಯನ್ನು ಬ್ಲಾಕ್ ಮಾಡಿದ್ದಾರೆ.
ಇದೀಗ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಶಾರೂಕ್ ಶೇಖ್ ಜೊತೆ ಬೆಂಗಳೂರಿಗೆ ಯುವತಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Click this button or press Ctrl+G to toggle between Kannada and English