ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಧ್ಯಕ್ಷರಾಗಿ ಸದಾಶಿವ ಉಳ್ಳಾಲ ಅಧಿಕಾರ ಸ್ವೀಕಾರ

10:20 PM, Friday, March 1st, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು: ನಾಲ್ಕೂವರೆ ದಶಕಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿರುವ ಸದಾಶಿವ ಉಳ್ಳಾಲ ಅವರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಧ್ಯಕ್ಷರಾಗಿ ಶುಕ್ರವಾರ ಅಧಿಕಾರ ವಹಿಸಿಕೊಂಡರು.

ಸದಾಶಿವ ಉಳ್ಳಾಲ್ ಮಾತನಾಡಿ ‘ಪಕ್ಷ ನೀಡಿರುವ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವೆ. ಪಕ್ಷಕ್ಕೆ ಯಾವ ಬಗೆಯಲ್ಲೂ ಮುಜುಗರ ಆಗದಂತೆ ಬಡವರಿಗೆ ಸೂರು ನಿರ್ಮಿಸಿಕೊಳ್ಳಲು ಜಾಗ ಸಿಗುವಂತೆ ಮಾಡಲು ಪ್ರಯತ್ನಿಸುವೆ’ ಎಂದು ಹೇಳಿದ್ದಾರೆ.

ವಕೀಲರಾಗಿರುವ ಸದಾಶಿವ ಉಳ್ಳಾಲ್ ಅವರು ಉಳ್ಳಾಲ ತಾಲ್ಲೂಕಿನ ಕೊಲ್ಯ ನಿವಾಸಿ. ಗ್ರಾಮ ಪಂಚಾಯಿತಿ ಮತ್ತು ಬೂತ್ ಮಟ್ಟದ ಕಾರ್ಯಕರ್ತರಾಗಿ ರಾಜಕೀಯ ಜೀವನ ಆರಂಭಿಸಿದ ಅವರು ಎನ್‌ಎಸ್‌ಯುಐ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ, ಯುವ ಕಾಂಗ್ರೆಸ್‌ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ, ಕೆಪಿಸಿಸಿ ಸದಸ್ಯರಾಗಿ ಹೆಸರು ಮಾಡಿದ್ದಾರೆ. ಪುತ್ರ ವಕೀಲರಾಗಿದ್ದು, ಪುತ್ರಿ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಸದಾಶಿವ ಉಳ್ಳಾಲ ಅವರನ್ನು ಮುಡಾಗೆ ನೇಮಕ ಮಾಡುವ ಮೂಲಕ ತೀಯಾ ಸಮುದಾಯಕ್ಕೂ ಮಣ್ಣನೆ ನೀಡಿದೆ.

ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಮಮತಾ ಗಟ್ಟಿ

ದಕ್ಷಿಣ ಕನ್ನಡ ಜಿಲ್ಲೆಯ ಪಕ್ಷ ಸಂಘಟನೆಯಲ್ಲಿ, ವಿಶೇಷವಾಗಿ ಮಹಿಳೆಯರ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಮಮತಾ ಗಟ್ಟಿ ಅವರನ್ನು ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಪಕ್ಷ ನೇಮಕ ಮಾಡಿದೆ.

ಕೈರಂಗಳದವರಾದ ಮಮತಾ ಗಟ್ಟಿ ಬಂಟ್ವಾಳ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರಾಗಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದರು. ಬ್ಲಾಕ್ ಕಾಂಗ್ರೆಸ್ ಸದಸ್ಯರಾಗಿ ಪಕ್ಷ ಸಂಘಟನೆ ಆರಂಭಿಸಿದ ಅವರು ಜಿಲ್ಲಾ ಮಹಿಳಾ ಘಟಕಕ್ಕೆ 12 ವರ್ಷ ಅಧ್ಯಕ್ಷರಾಗಿದ್ದರು. ಕೆಪಿಸಿಸಿ ಕಾರ್ಯದರ್ಶಿಯಾಗಿ ವಿವಿಧ ಜಿಲ್ಲೆಗಳ ಉಸ್ತುವಾರಿ ಹೊತ್ತಿದ್ದ ಅವರು ಸದ್ಯ ಪಕ್ಷದ ಪ್ರಧಾನ ಕಾರ್ಯದರ್ಶಿ.

ಮಮತಾ ಅವರಿಗೆ ತಂದೆ ಸಂಜೀವ ಗಟ್ಟಿ ಅವರಿಂದ ರಾಜಕೀಯ ಸಂಘಟನೆ ಬಳುವಳಿಯಾಗಿ ಬಂದಿದೆ. ಕೈರಂಗಳ ಮತ್ತು ನರಿಂಗಾನದಲ್ಲಿ ಶಾಲಾ ಶಿಕ್ಷಣ, ಮುಡಿಪುವಿನಲ್ಲಿ ಪಿಯುಸಿ ಮತ್ತು ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಕಲಾ ಪದವಿ ಪಡೆದಿದ್ದಾರೆ. ಪತಿ ಸದಾಶಿವ ಗಟ್ಟಿ ಖಾಸಗಿ ಸಂಸ್ಥೆಯಲ್ಲಿ ಎಂಜಿನಿಯರ್. ಪುತ್ರ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಿದ್ದು ಪುತ್ರಿ ಬಿಕಾಂ ಓದಿದ್ದಾರೆ. 

ಹೆಚ್ಚು ವೆಚ್ಚವಿಲ್ಲದೆ ಬೆಳೆಯಬಹುದಾದ ಮತ್ತು ಉತ್ತಮ ಆದಾಯ ತಂದುಕೊಡುವ ಬೆಳೆ ಗೇರು ಬೀಜ. ಇದು ಈಗ ತೆರೆಮರೆಗೆ ಸರಿಯುತ್ತಿದೆ. ಅದಕ್ಕೆ ಪುನರ್ಜೀವ ನೀಡಬೇಕೆಂಬುದು ನನ್ನ ಆಶಯ. ಗುಡ್ಡಗಳು ಮತ್ತು ಖಾಲಿ ಜಾಗಗಳಲ್ಲಿ ಗೇರು ಬೆಳೆಯಲು ಪ್ರೋತ್ಸಾಹ ನೀಡಲಾಗುವುದು. ಕಾರ್ಯಾಗಾರಗಳನ್ನೂ ಹಮ್ಮಿಕೊಳ್ಳಲಾಗುವುದು ಎಂದು ಮಮತಾ ಗಟ್ಟಿ ಹೇಳಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English