ಗ್ರಾಮೀಣ ಪ್ರದೇಶದಲ್ಲಿ ತಾಯಿ- ಮಗಳ ‘ಕ್ಷೀರ ಕ್ರಾಂತಿ’

9:37 PM, Wednesday, March 6th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಹೈನುಗಾರಿಕೆ ಕೈಗೊಂಡು ಕ್ಷೀರಕ್ರಾಂತಿಯನ್ನುಂಟು ಮಾಡಿರುವ ಅಪೂರ್ವ ಸಾಧಕಿಯರಾಗಿರುವ ಉಳ್ಳಾಲ ತಾಲೂಕಿನ ಹರೇಕಳ ಗ್ರಾಮದ ಬಾವಲಿಗುರಿಯ ‘ತಾಯಿ- ಮಗಳು ಮೈಮೂನ- ಮರ್ಝಿನಾ ರಾಜ್ಕಮಾಲ್ ಪ್ರತಿಷ್ಠಿತ ಮಂಗಳೂರು ಪೆ್ರಸ್ ಕ್ಲಬ್ನ 2023-24ನೇ ಸಾಲಿನ ವರ್ಷದ ಪ್ರಶಸ್ತಿ ಗೆ ಆಯ್ಕೆಯಾಗಿದ್ದಾರೆ.

ಹಿರಿಯ ಪತ್ರಕರ್ತ ಯು.ಕೆ.ಕುಮಾರನಾಥ್ ಮತ್ತು ಎಸ್ ಡಿಎಂ ಕಾನೂನು ಮಹಾವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ಪುಷ್ಪರಾಜ್ .ಕೆ ನೇತೃತ್ವದ ಆಯ್ಕೆ ಸಮಿತಿಯು ಮಂಗಳೂರು ಪ್ರೆಸ್ ಕ್ಲಬ್ ನ ಪ್ರತಿಷ್ಠಿತ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಿದೆ.

ಮಾರ್ಚ್ 10ರಂದು ನಡೆಯಲಿರುವ ಪ್ರೆಸ್ ಕ್ಲಬ್ ದಿನಾಚರಣೆ ವೇಳೆ ಇವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.ಎಂದು ಮಂಗಳೂರು ಪ್ರೆಸ್ ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

ತಾಯಿಗೆ ಮಗಳ ಪ್ರೇರಣೆ: ಬಾವಲಿಗುರಿಯ ದಿವಂಗತ ದಿ.ಅಬ್ದುಲ್ ಮಜೀದ್ ರಾಜ್ ಕಮಾಲ್ ಅವರ ಪತ್ನಿ ಮೈಮೂನಾ ಹಾಗೂ ಮಗಳು ಮರ್ಝಿನಾ. ಕೃಷಿ,ಗೋಸಾಕಾಣಿಕೆ ಹೈನುಗಾರಿಕೆ ಲಾಭದಾಯಕವಲ್ಲ ಎಂದು ಎಲ್ಲರೂ ದೂರ ಸರಿಯುತ್ತಿರುವ ಈಗಿನ ಕಾಲಘಟ್ಟದಲ್ಲಿ ಸಾಂಪ್ರದಾಯಿಕ ಮತ್ತು ಅತ್ಯಾಧುನಿಕ ವಿಧಾನದ ಮೂಲಕ ಇವರು‌ ಹೈನುಗಾರಿಕೆಯಲ್ಲಿ ಹೊಸ ಕ್ರಾಂತಿಯನ್ನುಂಟು ಮಾಡಿದ್ದಾರೆ. ಮೈಮೂನಾರ ಪತಿ ಅಬ್ದುಲ್ ಮಜೀದ್ 2009ರ ಜನವರಿ 26ರಂದು ಹೃದಯಘಾತದಿಂದ ನಿಧನರಾದರು. ಅವರ ನಿಧನದ ಬಳಿಕ ಗೋವುಗಳನ್ನು ಸಾಕುವುದು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಬದುಕಿನ ಮುಂದಿನ ದಾರಿಯನ್ನು ಕಂಡುಕೊಳ್ಳುವುದು ಮೈಮೂನ ಅವರಿಗೆ ಸವಾಲಾಗಿತ್ತು. ಮುಸ್ಲಿಮ್ ಸಮುದಾಯದಲ್ಲಿ ಮಹಿಳೆಯರಿಗೆ ಗೋವುಗಳನ್ನು ಸಾಕುವುದು ಯೋಚಿಸಿದಷ್ಟು ಸುಲಭವಲ್ಲ. ತಮಗೆ ಯಾರು ಕೂಡಾ ನೆರವಿಗೆ ಯಾರೂ ಇಲ್ಲ ಎಂಬ ಕಾರಣಕ್ಕಾಗಿ ಮೈಮೂನ ತಮ್ಮ ಬಳಿಯಿದ್ದ ಗೋವುಗಳ ಜೊತೆ ಆಡುಗಳನ್ನೂ ಮಾರಿದ್ದರು. ಜೀವನ ನಿರ್ವಹಣೆಗೆ ಮನೆಯಲ್ಲಿ ಬಿರಿಯಾನಿ ತಯಾರಿಸಿ,ಮಾರಾಟ ಮಾಡುವ ಕಾಯಕವನ್ನು ಕೈಗೊಂಡರು.ಆದು ಕಷ್ಟಕರವಾಗಿ ಕಂಡು ಬಂದಾಗ ಸಾಫ್ಟ್ ವೇರ್ ಇಂಜಿನಿಯರ್ ಮಗಳು ಮರ್ಝೀನಾ ಹೈನುಗಾರಿಕೆಯನ್ನು ಪ್ರಾರಂಭಿಸುವ ನಿಟ್ಟಿನಲ್ಲಿ ತಾಯಿಯ ಮನವೊಲಿಸಿದರು. ಮರ್ಝೀನಾಳ ಮಾತಿನಂತೆ ಮೈಮೂನಾ ಒಂದು ಗೋವು ಖರೀದಿಸಿದರು. ಅವರ ದನ ‘ಲಕ್ಷ್ಮೀ’ ಮುಂದೆ ಕರು ಹಾಕಿತು. ಬಳಿಕ ದನದ ಹಾಲು ಮಾರಾಟದ ಮೂಲಕ ಬದುಕಿನ ದಾರಿಯನ್ನು ಕಂಡುಕೊಂಡರು. ಮೈಮೂನಾ ಮುಂದೆ ತನ್ನಲ್ಲಿರುವ ಚಿನ್ನಾಭರಣ ಮಾರಾಟ ಮಾಡಿ ಮತ್ತೆ ಏಳು ಗೋವುಗಳನ್ನು ಖರೀದಿಸಿದರು. ಇದರಲ್ಲಿ ಇವರ ಆದಾಯ ವೃದ್ದಿಯಾದರೂ, ಒಂದೇ ವಾರದಲ್ಲಿ ಲಕ್ಷ ಲಕ್ಷ ಮೌಲ್ಯದ 4 ಹಸುಗಳು ಅಸು ನೀಗಿದಾಗ ತಾಯಿ ಮಗಳು ಧೃತಿಗೆಡಲಿಲ್ಲ.ಆತ್ಮವಿಶ್ವಾಸದಿಂದ ನಾನಾ ಸವಾಲುಗಳನ್ನು ಎದುರಿಸುತ್ತಾ ಮುಂದುವರಿದರು.ಇವತ್ತು ಇವರು ಯಶಸ್ಸಿನ ಶಿಖರಕ್ಕೆ ತಲುಪಿದ್ದಾರೆ.

*ದಿನನಿತ್ಯ 320 ಲೀಟರ್ ಹಾಲು : ಎರಡು ತಿಂಗಳ ಹಿಂದೆಯಷ್ಟೇ ಆರಂಭಗೊಂಡ ಅವರ ಅತ್ಯಾಧುನಿಕ ಹಟ್ಟಿಯಲ್ಲಿ ಗೋವುಗಳ ಸಂಖ್ಯೆ 70 ದಾಟಿದೆ. 40 ಹಸುಗಳಿಂದ ಪ್ರತಿನಿತ್ಯ ದೊರೆಯುವ 300- 320 ಲೀಟರ್ ಹಾಲನ್ನು ಮಾರಲಾಗುತ್ತಿದೆ.ವ್ಯವಸ್ಥೆಯನ್ನು ನೋಡಿಕೊಳ್ಳಲು ಐವರು ಕೆಲಸಗಾರರಿದ್ದಾರೆ. ಬೆಳಿಗ್ಗೆ ನಾಲ್ಕು ಗಂಟೆಗೆ ತಾಯಿ-ಮಗಳು ಹಟ್ಟಿಗೆ ಹೋಗಿ ಎಂಟು ಗಂಟೆವರೆಗೂ ಶುಚಿತ್ವ, ಹಾಲು ಹಿಂಡುವ ಕೆಲಸ ಮಾಡುತ್ತಾರೆ. ಬರುವ ಎಲ್ಲ ಆದಾಯವನ್ನು ಕೂಡಿಡುವ ಇರಾದೆ ಇವರಿಗಿಲ್ಲ. ಬಡ ಹೆಣ್ಮಕ್ಕಳ ಮದುವೆ, ನಿರ್ಗತಿಕರು, ವಿಶೇಷ ಚೇತನರು, ಧಾರ್ಮಿಕ ಸಂಸ್ಥೆಗಳು, ಗ್ರಾಮ ಪಂಚಾಯತ್, ಅನಾಥಾಲಯಗಳು, ವೃದ್ಧಾಶ್ರಮಗಳು ಹೀಗೆ ಜಾತಿ, ಧರ್ಮ ನೋಡದೆ ಆದಾಯದಲ್ಲಿ ದೊಡ್ಡ ಭಾಗವನ್ನು ಸಾಮಾಜಿಕ ಸೇವಾ ಕಾರ್ಯಗಳಿಗೆ ನೀಡುತ್ತಿದ್ದಾರೆ.

ಕನ್ನಡ ಮಾಧ್ಯಮ ಶಾಲೆಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು ಶಾಲೆಗಳಿಗೆ ಅಗತ್ಯದ ಪರಿಕರಗಳು, ಕಾರ್ಯಕ್ರಮಗಳಿಗೆ ಊಟೋಪಚಾರ ವ್ಯವಸ್ಥೆ, ಧನ ಸಹಾಯ ಮಾಡುವ ಮೂಲಕ ಕೊಡುಗೈ ದಾನಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದಾರೆ. ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರು ಸ್ಥಾಪಿಸಿದ ಶಾಲೆಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಿದ್ದಾರೆ. ಇಲ್ಲಿ ಪ್ರಸಕ್ತ ಸಾಲಿನಲ್ಲಿ ಆಂಗ್ಲ ಮಾಧ್ಯಮ ಎಲ್ ಕೆಜಿ ವಿಭಾಗ ಪ್ರಾರಂಭಗೊಂಡಿದ್ದು ಶಿಕ್ಷಕರ ವೇತನ ಪಾವತಿಸುವ ಮೂಲಕ ಶಾಲೆಯ ಅಭಿವೃದ್ಧಿಗೆ ತಾಯಿ-ಮಗಳು ನೆರವಾಗಿದ್ದಾರೆ. ಹರೇಕಳ ಗ್ರಾಮ ಪಂಚಾಯತ್ ಗೆ ಪರಿಕರಗಳನ್ನು ಒದಗಿಸಿದ್ದಾರೆ. ಕಳೆದೆರಡು ವರ್ಷಗಳಲ್ಲಿ ಅವರು ಸಮಾಜ ಸೇವೆ ನೀಡಿರುವ ದೇಣಿಗೆ, ಇತರ ಕೊಡುಗೆಗಳು ನಿರೀಕ್ಷೆಗೂ ಮೀರಿದೆ.

101 ಗೋವುಗಳನ್ನು ಸಾಕುವ ಕನಸಿನೊಂದಿಗೆ ಮುನ್ನುಗ್ಗಿರುವ ಇವರು ಹೈನುಗಾರಿಕೆ ಯೊಂದಿಗೆ ಆಡು,ಕೋಳಿ ಸಾಕಾಣಿಕೆ,ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶ ವಿದೇಶಗಳ ಕೋಳಿ ಇಲ್ಲಿವೆ. ವಾಲ್ನೆಟ್ ,ಆ್ಯಪಲ್,ದ್ರಾಕ್ಷಿ,ಇತರ ಹಣ್ಣಿನ ಮರಗಳು ಇಲ್ಲಿದೆ. ಕೃಷಿ, ಪಶುಸಂಗೋಪನೆಯಲ್ಲಿ ಆಸಕ್ತಿ ಹೊಂದಿರುವ ಯುವ ಪೀಳಿಗೆಗೆ ಮಾಹಿತಿ,ತರಬೇತಿ ನೀಡುವ ಕೇಂದ್ರವಾಗಿದೆ ‘ಮೈಮೂನಾ -ಮರ್ಝೀನ’ರ ಮಜೀದ್ ಫಾರ್ಮ್.

ಇಂದಿನ ಸಾಮಾಜಿಕ ಸನ್ನಿವೇಶದಲ್ಲಿ ಮುಸ್ಲಿಂ ಮಹಿಳೆಯರು ಗೋ ಸಾಕಾಣೆ ಮತ್ತು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಅಪರೂಪ. ಅದರಲ್ಲೂ ಮೈಮೂನಾ ಮತ್ತು ಮರ್ಝೀನಾ ಎಂಬ ತಾಯಿ ಮಗಳು ಹೈನುಗಾರಿಕೆ ಮತ್ತು ಕೃಷಿ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿ ಗರಿಷ್ಠ ಆದಾಯ ಹಾಗೂ ಸಾಮಾಜಿಕ ಭಾವೈಕ್ಯತೆಯನ್ನು ಸಾರುವ ಮೂಲಕ ಸಮಾಜಕ್ಕೆ ಮಾದರಿ ಎನಿಸಿಕೊಂಡಿದ್ದಾರೆ.
*ಯು.ಕೆ. ಕುಮಾರನಾಥ್ ಮತ್ತು ಪ್ರೊ.ಪುಷ್ಪರಾಜ್.ಕೆ, ಆಯ್ಕೆ ಸಮಿತಿ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English