ಮಂಗಳೂರು : ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾದ “ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿ ಯೋಜನೆಗಳ ಹಾಗೂ ಇತರ ಯೋಜನೆಗಳು, ಕಾರ್ಯಕ್ರಮಗಳನ್ನು ಜನರಿಗೆ ಮತ್ತಷ್ಟು ತಲುಪಿಸುವ ಉದ್ದೇಶದಿಂದ ಬೆಂಗಳೂರಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ “ಕಲಾಜಾಥ” ಸಂಚಾರಿ ಪ್ರದರ್ಶನ ನೀಡುವ ಸಂಚಾರಿ ವಾಹನಕ್ಕೆ ಮಾ.7ರ ಗುರುವಾರ ನಗರದ ಕರಾವಳಿ ಮೈದಾನದಲ್ಲಿ ವಿಧಾನ ಪರಿಷತ್ ಶಾಸಕರಾದ ಹರೀಶ್ ಕುಮಾರ್ ಹಾಗೂ ಡಾ. ಮಂಜುನಾಥ್ ಭಂಡಾರಿ ಅವರು ಚಾಲನೆ ನೀಡಿದರು.
ಈ ಕಲಾಜಾಥಾ ಸಂಚಾರಿ ವಾಹನವು ಜಿಲ್ಲೆಯಾದ್ಯಂತ ಮುಂದಿನ 15 ದಿನಗಳ ಕಾಲ 45 ಗ್ರಾಮಗಳಲ್ಲಿ ಸಂಚರಿಸಿ, ಸರ್ಕಾರದ ಯೋಜನೆಗಳ ಮಹತ್ವದ ಬಗ್ಗೆ ಹಾಗೂ ಯೋಜನೆಗಳ ಫಲಾನುಭವಿಗಳ ಬಗ್ಗೆ ಎಲ್.ಇ.ಡಿ ಪರದೆಗಳಲ್ಲಿ ವಿಡಿಯೋ ಬಿತ್ತರಿಸುವ ಮೂಲಕ ಹಾಗೂ ಕಲಾತಂಡಗಳಿಂದ ಬೀದಿ ನಾಟಕ ಪ್ರದರ್ಶನ ಮಾಡುವ ಮೂಲಕ ವ್ಯಾಪಕ ಪ್ರಚಾರ ಮಾಡಲಿದೆ. ಈ ಪ್ರದರ್ಶನ ಕಾರ್ಯಕ್ರಮದ ಸದುಪಯೋಗವನ್ನು ಜಿಲ್ಲೆಯ ಜನರು ಪಡೆದುಕೊಳ್ಳಬಹುದಾಗಿದೆ. ಈ ವರೆಗೆ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಿದ್ದರೆ ಜಾಗೃತಿ ಹೊಂದಿ ಸಂಬಂಧಪಟ್ಟ ಸಕ್ಷಮದವರನ್ನು ಸಂಪರ್ಕಿಸುವ ಮೂಲಕ ಹಾಗೂ ಸೇವಾ ಸಿಂದೂ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ಯೋಜನೆಗಳ ಫಲಾನುಭವವನ್ನು ಪಡೆಯಬಹುದಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಮೂಡದ ನೂತನ ಅಧ್ಯಕ್ಷರಾದ ಸದಾಶಿವ ಉಳ್ಳಾಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮಮತಾ ಗಟ್ಟಿ, ಮೆಸ್ಕಾಂ ಎಂ.ಡಿ. ಪದ್ಮಾವತಿ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ಆನಂದ್, ಮಂಗಳೂರು ತಹಶೀಲ್ದಾರರಾದ ಪ್ರಶಾಂತ್ ವಿ ಪಾಟೀಲ್, ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು, ಕರಾವಳಿ ಜಾನಪದ ಕಲಾತಂಡದ ನಾಯಕ ಗಿರೀಶ್ ನಾವಡ ಹಾಗೂ ತಂಡದವರು, ಸಾರ್ವಜನಿಕರು, ಫಲಾನುಭವಿಗಳು ಇದ್ದರು.
ಪಂಚ ಗ್ಯಾರಂಟಿ ಸಮರ್ಪಕ ಅನುಷ್ಠಾನ: ಹರೀಶ್ ಕುಮಾರ್
ಮಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಕೇವಲ 8 ತಿಂಗಳಲ್ಲಿಯೇ ಪಂಚ ಗ್ಯಾರಂಟಿ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿದೆ ಎಂದು ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಅವರು ಹೇಳಿದರು.
ಅವರು ಮಾ.7ರ ಗುರುವಾರ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಜಿಲ್ಲಾ ಹಾಗೂ ಮಂಗಳೂರು ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಂಗಳೂರು ತಾಲೂಕು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಚುನಾವಣೆ ಸಂದರ್ಭ ನೀಡಲಾಗಿದ್ದ ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಮೂರು ತಿಂಗಳಲ್ಲೇ ನಾಲ್ಕುನ್ನು ಸರ್ಕಾರ ಅನುಷ್ಠಾನಗಳಿಸಿದೆ. ಅದೇ ರೀತಿ ಐದನೇ ಯೋಜನೆಯಾದ ಯುವನಿಧಿಯೂ ಈಗ ಅನುಷ್ಠಾನವಾಗಿದ್ದು, ಸರ್ಕಾರ ತನ್ನ ಮಾತು ಉಳಿಸಿಕೊಂಡಿದೆ. ಮುಖ್ಯಮಂತ್ರಿಗಳು ನುಡಿದಂತೆ ನಡೆದಿದ್ದಾರೆ ಎಂದು ಹೇಳಿದರು.
ಶಕ್ತಿ ಯೋಜನೆಯಿಂದಾಗಿ ರಾಜ್ಯದ ಎಲ್ಲಾ ವರ್ಗದ ಜನತೆಗೆ ಪ್ರಯೋಜನವಾಗಿದೆ. ಮಹಿಳೆಯರು ಸಂತೋಷದಿಂದ ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯಿಂದ ಕೋಟ್ಯಂತರ ಮಹಿಳೆಯರಿಗೆ ಲಾಭವಾಗಿದೆ. ಗೃಹ ಜ್ಯೋತಿ ಯೋಜನೆ ಕೂಡ ಯಶಸ್ವಿಯಾಗಿ ದ್ದು, ಜನತೆ ನೆಮ್ಮದಿಯ ಬದುಕು ಕಾಣುವಂತಾಗಿದೆ ಎಂದು ಹರೀಶ್ ಕುಮಾರ್ ಯೋಜನೆಗಳ ವಿವರ ನೀಡಿದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಅದ್ಯಕ್ಷತೆ ವಹಿಸಿ,ಮಾತನಾಡಿದರು.
ಮೆಸ್ಕಾಂ ಎಂಡಿ ಪದ್ಮಾವತಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಆನಂದ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ, ಕಾರ್ಪೋರೇಟರ್ ಗಳಾದ ಶಶಿಧರ ಹೆಗ್ಡೆ,.ಎ.ಸಿ.ವಿನಯರಾಜ್, ಅನಿಲ್ ಕುಮಾರ್ , ಭಾಸ್ಕರ ಮೊಯಿಲಿ ಮತ್ತಿತರರು ಉಪಸ್ಥಿತರಿದ್ದರು.
ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಮಹೇಶ್ ಕುಮಾರ್ ಕಾರ್ಯಕ್ರಮದ ವಿವರ ನೀಡಿದರು.
ಮಂಗಳೂರು ತಾಲೂಕಿನಲ್ಲಿ 3524 ಮಂದಿ ಅಂತ್ಯೋದಯ ಪಡಿತರ ಚೀಟಿಯ ಲಾಭ ಪಡೆಯುತ್ತಿದ್ದಾರೆ. ಆದ್ಯತಾ ಪಡಿತರ ಚೀಟಿ 42,642 ಮಂದಿ ಪಡಿತರ ಚೀಟಿಗಳನ್ನು ಹೊಂದಿದವರಿದ್ದಾರೆ. ತಾಲೂಕಿನಲ್ಲಿ ಗೃಹ ಲಕ್ಷ್ಮಿ ಯೋಜನೆಯಡಿಯಲ್ಲಿ 77,573 ಮಂದಿಗೆ ತಲುಪಿದೆ.
1, 41,873 ಮನೆಗಳಿಗೆ ಗೃಹ ಜ್ಯೋತಿ ತಲುಪಿದೆ ಎಂದು ಮಹೇಶ್ ಕುಮಾರ್ ಮಾಹಿತಿ ನೀಡಿದರು.
ಗ್ಯಾರಂಟಿ ಯೋಜನೆಗಳ ಬಗ್ಗೆ ಹಲವು ಫಲಾನುಭವಿಗಳು ತಮ್ಮ ಅನಿಸಿಕೆ ಹಂಚಿಕೊಂಡರು.
ಮಂಗಳೂರು ಸಹಾಯಕ ಆಯುಕ್ತ ಮಹೇಶ್ ಸ್ವಾಗತಿಸಿದರು. ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮಾಲಿನಿ ವಂದಿಸಿದರು.
Click this button or press Ctrl+G to toggle between Kannada and English