ಮಂಗಳೂರು : ನಿರ್ಮಲ ಭಾರತ ಚಾರಿಟೇಬಲ್ ಟ್ರಸ್ಟ್ ಅಧೀನದ ಜಾಗಕ್ಕೆ ಬೇಲಿ ಹಾಕುವ ಸಂದರ್ಭ ಟ್ರಸ್ಟ್ ನ ಮಹಿಳಾ ಕಾರ್ಯದರ್ಶಿಗೆ ತಡೆಯೊಡ್ಡಿ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಉಳ್ಳಾಲ ಠಾಣಾಧಿಕಾರಿ ಹೆಚ್.ಎನ್ ಬಾಲಕೃಷ್ಣ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಕ್ಷಿಣ ಕನ್ನಡದ ನಿರ್ಮಲ ಭಾರತ ಚಾರಿಟೇಬಲ್ ಟ್ರಸ್ಟ್ ಗೆ ಉಳ್ಳಾಲ ತಾಲೂಕು ಕೊಣಾಜೆ ಗ್ರಾಮದ, ಸರ್ವೆ ನಂ. 149 ರಲ್ಲಿ ಎರಡು ಎಕರೆ ಜಮೀನು ಮಂಜೂರಾಗಿರುತ್ತದೆ. ಜ.26 ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಟ್ರಸ್ಟ್ ಕಾರ್ಯದರ್ಶಿ ಲತಾ ರೈ ಅವರು ಸದಸ್ಯರಾದ ಡಾ.ಸಿ.ಎನ್.ಶಂಕರ್ ರಾವ್, ಪ್ರೊ.ಕೆ.ಎಂ.ಬಾಲಕೃಷ್ಣ, ಜಗದೀಶ್ ಕಾಪುಮಲೆ ಎಂಬವರೊಂದಿಗೆ ಟ್ರಸ್ಟ್ ನ ಜಾಗದ ಗಡಿಯಲ್ಲಿ, ಬೇಲಿ ಹಾಕಲು ಸೈಟ್ ಗೆ ತೆರಳಿದ್ದಾಗ ಸುಮಾರು 11 ಗಂಟೆಗೆ ಅಂದು ಕೊಣಾಜೆ ಠಾಣೆಯ ಜವಾಬ್ದಾರಿ ಹೊಂದಿದ್ದ ಉಳ್ಳಾಲದ ಪೊಲೀಸ್ ಠಾಣೆ ಇನ್ಸ್‌ಕ್ಟರ್ ಬಾಲಕೃಷ್ಣ ಎಚ್.ಎನ್ ಅವರು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಬಾಲಕೃಷ್ಣ ಅವರು ಸೈಟ್‌ನಲ್ಲಿದ್ದವರೆಲ್ಲರನ್ನೂ ಅವಾಚ್ಯ ಶಬ್ದಗಳಿಂದ ಬೈದು, ನಿಂದಿಸಿದ್ದಾರೆಂದು ಆರೋಪಿಸಲಾಗಿದೆ.
ಲತಾ ರೈ ಅವರು ಹೈಕೋರ್ಟ್ ಆದೇಶದ ಬಗ್ಗೆ ತಿಳಿಸಿದರೂ ಕೂಡ ಅದನ್ನು ಒಪ್ಪಿಕೊಳ್ಳದೇ ಸೈಟ್‌ನಲ್ಲಿ ಕೆಲಸಗಳನ್ನು ನಿಲ್ಲಿಸಲು ಇಲಾಖೆಯ ಮೇಲಾಧಿಕಾರಿಗಳ ಆದೇಶವಿದೆ ಎಂದು ಹೇಳಿದ ಪಿಐ ಬಾಲಕೃಷ್ಣ ಅವರು ಲತಾ ಅವರ ಕೈಗೆ ಹೊಡೆದು, ಕೈಯನ್ನು ಎಳೆದು ಕೈಯಲ್ಲಿದ್ದ ಮೊಬೈಲ್ ಫೋನ್ ಅನ್ನು ಕಸಿದು ನೆಲಕ್ಕೆ ಹೊಡೆಯಲು ಯತ್ನಿಸಿದ್ದಾರೆ. ಈ ವೇಳೆ ಲತಾ ಅವರ ರಕ್ಷಣೆಗೆ ಬಂದ ಅಭಿಷೇಕ್ ಭಂಡಾರಿ ಎಂಬವರಿಗೂ ಇನ್ಸ್ ಪೆಕ್ಟರ್ ಥಳಿಸಿದ್ದು, ಘಟನೆಯನ್ನು ರೆಕಾರ್ಡ್ ಮಾಡುತ್ತಿದ್ದ ಅವರ ಫೋನ್ ಕಿತ್ತುಕೊಳ್ಳಲು ಯತ್ನಿಸಿ ತಳ್ಳಿದ್ದಾರೆಂದು ದೂರಲಾಗಿದೆ. ಏರು ಧ್ವನಿಯಲ್ಲಿ ಕಿರುಚಾಡಿದ ಬಾಲಕೃಷ್ಣ ಅವರು ಸ್ಥಳದಲ್ಲಿದ್ದವರೆಲ್ಲರನ್ನೂ ಬಂಧಿಸುವುದಾಗಿ ಬೆದರಿಸಿದ್ದಲ್ಲದೆ, ಪೊಲೀಸ್ ವ್ಯಾನ್‌ನಲ್ಲಿ ಹಾಕುವಂತೆ ಪೊಲೀಸ್ ಸಿಬ್ಬಂದಿಯವರಿಗೆ ಸೂಚಿಸಿದ್ದಾರೆಂದು ಲತಾ ರೈ ಅವರು ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ. ಲತಾ ನೀಡಿರುವ ದೂರಿನಂತೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಬಾಲಕೃಷ್ಣ ವಿರುದ್ಧ ಪ್ರಕರಣ ದಾಖಲಾಗಿದೆ.
Click this button or press Ctrl+G to toggle between Kannada and English