ಮಂಗಳೂರು: ಖಾಸಗಿ ಕಂಪೆನಿಯೊಂದರ ಪ್ರಚಾರಕ್ಕಾಗಿ ತಿಂಗಳ ಬಾಡಿಗೆಗೆ ನೀಡಲಾಗಿದ್ದ ಸುಮಾರು ಹನ್ನೆರಡು ಖಾಸಗಿ ಕ್ವಾಲಿಸ್ ವಾಹನಗಳನ್ನು ಇಂದು ಬೆಳಿಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮತ್ತು ಟ್ರಾಫಿಕ್ ಪೊಲೀಸರು ಮುಟ್ಟುಗೋಲು ಹಾಕಿದರು.
ಮಂಗಳೂರಿನ ಫಳ್ನೀರಿನಲ್ಲಿ ಸದ್ಯದಲ್ಲೇ ಆರಂಭಗೊಳ್ಳಲಿರುವ ಜೋಯ್ ಆಲುಕಾಸ್ ಕಂಪೆನಿಯವರು ಸಂಸ್ಥೆಯ ಪ್ರಚಾರಕ್ಕಾಗಿ 20 ಕಾರುಗಳನ್ನು ನಿಗದಿಪಡಿಸಲಾಗಿದ್ದು ಅದರ ನಿರ್ವಹಣೆಯನ್ನು ಪ್ರಿಯಾ ಟ್ರಾವೆಲ್ಸ್ ನವರಿಗೆ ನೀಡಿದ್ದರು. ಕಾಂಟ್ರಾಕ್ಟುದಾರರಾದ ಪ್ರಿಯಾ ಟ್ರಾವೆಲ್ಸ್ ನ ಮಾಲಕರು ಕೆಲವೇ ಟೂರಿಸ್ಟ್ ಕಾರುಗಳನ್ನು ಗೊತ್ತು ಪಡಿಸಿ, ಇನ್ನುಳಿದ 12 ಕ್ವಾಲೀಸ್ ವಾಹನಗಳನ್ನು ಖಾಸಗಿಯವರಿಂದ ಉಡುಪಿ, ಪುತ್ತೂರು, ಮಡಿಕೇರಿ, ಮಹಾರಾಷ್ಟ್ರ ಮುಂತಾದ ಕಡೆಗಳಿಂದ ಪಡೆದಿದ್ದರು.
ದ.ಕ. ಟ್ಯಾಕ್ಸಿ ಮತ್ತು ಮಾಕ್ಸಿಕ್ಯಾಬ್ ಎಸೋಸಿಯೇಶನ್ ನ ಸದಸ್ಯರು ಅನಧಿಕೃತ ಖಾಸಗಿ ಕ್ವಾಲಿಸ್ ಬಾಡಿಗೆದಾರರನ್ನು ಪತ್ತೆ ಹಚ್ಚಿ ಬಾಡಿಗೆ ಮಾಡದಂತೆ ತಡೆಹಿಡಿದು ಇಂದು ಬೆಳಿಗ್ಗೆ ಎಂ.ಜಿ ರಸ್ತೆಯ ಬಳಿ ಇರುವ ಹೋಟೆಲ್ ಹಿಂದೂಸ್ಥಾನದ ಬಳಿ ಪ್ರತಿಭಟನೆ ನಡೆಸಿ ಖಾಸಗಿ ವಾಹನಗಳನ್ನು ಮುಟ್ಟುಗೋಲು ಹಾಕುವಂತೆ ಸಾರಿಗೆ ಅಧಿಕಾರಿಗಳನ್ನು ಒತ್ತಾಯಿಸಿ ತಡೆಹಿಡಿಯುವಲ್ಲಿ ಸಫಲರಾದರು.
ಪ್ರತಿಭಟನೆಯಲ್ಲಿ ದ.ಕ ಟ್ಯಾಕ್ಸಿ ಮೆನ್ ಎಸೋಸಿಯೇಶನ್ ನ ಕಾರ್ಯದರ್ಶಿ ಸತೀಶ್ ಎಂ. ಭಟ್, ಪ್ರಮೋದ್ ಕುಮಾರ್ ಉಳ್ಳಾಲ ಹಾಗೂ ಬೆಂಬಲಿಗರಾದ ಅಖಿಲ ಭಾರತ ಕಾರ್ಮಿಕ ಸಂಘದ ಸುದತ್ತ ಜೈನ್ ಭಾಗವಹಿಸಿದ್ದರು.
Click this button or press Ctrl+G to toggle between Kannada and English