“ಆಳ್ವಾಸ್ ನಿಂದ 10 ಕೋಟಿಗೂ ಮಿಕ್ಕಿದ ವಿದ್ಯಾರ್ಥಿವೇತನ” -ಡಾ.ಎಂ. ಮೋಹನ್ ಆಳ್ವ

9:20 PM, Friday, March 15th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು: “ನಾಲ್ಕು ದಶಕಗಳಿಂದ ನಾಡಿನ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾ ಶೈಕ್ಷಣಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ದತ್ತು ಸ್ವೀಕಾರ, ಸಹಾಯಧನ, ಪ್ರೋತ್ಸಾಹಧನ, ವಿವಿಧ ಶಿಷ್ಯವೇತನ, ಬಹುಮಾನ, ಪುರಸ್ಕಾರಗಳನ್ನು ನೀಡುತ್ತಾ ಬಂದಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಈ ಬಾರಿ ಪಿಯುಸಿ ವಿದ್ಯಾರ್ಥಿಗಳಿಗೆ ಎರಡು ವರ್ಷಕ್ಕೆ 10 ಕೋಟಿಗೂಅಧಿಕ ಮೌಲ್ಯದ ಶೈಕ್ಷಣಿಕ ವಿದ್ಯಾರ್ಥಿ ವೇತನ ಘೋಷಿಸಿದೆ” ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

“10ನೇ ತರಗತಿಯಲ್ಲಿ ಸಿಬಿಎಸ್‌ಸಿ (ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ) ಐಸಿಎಸ್‌ಇ (ಭಾರತೀಯ ಪ್ರೌಢಶಿಕ್ಷಣದ ಪ್ರಮಾಣ ಪತ್ರ) ಹಾಗೂ ರಾಜ್ಯ ಪಠ್ಯಕ್ರಮ (ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿ) ಪರೀಕ್ಷೆ ಬರೆದ ವಿದ್ಯಾರ್ಥಿಗಳು ಈ ಶೈಕ್ಷಣಿಕ ವಿದ್ಯಾರ್ಥಿ ವೇತನ ಪರೀಕ್ಷೆಯನ್ನು ಬರೆಯಬಹುದು. ವಿದ್ಯಾರ್ಥಿಗಳ ಪ್ರವೇಶ ಪರೀಕ್ಷೆಯ ಅಂಕಗಳನ್ನು ಪರಿಗಣಿಸಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆ ಮಾಡಲಾಗುವುದು. ವಿದ್ಯಾರ್ಥಿ ವೇತನಕ್ಕೆ ಅರ್ಹತೆ ಪಡೆದ ವಿದ್ಯಾರ್ಥಿಗಳು ದೇಶದಲ್ಲೇ ಅತ್ಯುತ್ತಮ ಹಾಗೂ ಅನನ್ಯ ಮಾದರಿಯ ಶಿಕ್ಷಣ ನೀಡುತ್ತಿರುವ ಆಳ್ವಾಸ್ ಪದವಿ ಪೂರ್ವ ಕಾಲೇಜಿನಲ್ಲಿ ವಿಜ್ಞಾನ, ವಾಣಿಜ್ಯ ಅಥವಾ ಕಲಾ ವಿಭಾಗದಲ್ಲಿ ಪದವಿಪೂರ್ವ ಶಿಕ್ಷಣ ಪಡೆಯಲು ಅರ್ಹರಾಗಿರುತ್ತಾರೆ.

ಗಣಿತ, ವಿಜ್ಞಾನ ಹಾಗೂ ಸಾಮಾನ್ಯ ಸಾಮರ್ಥ್ಯ ಕುರಿತು 100 ನಿಮಿಷಗಳ ಪರೀಕ್ಷೆಯು ಮಾರ್ಚ್ 31ರಂದು ಸಿಬಿಎಸ್‌ಸಿ ಮತ್ತು ಐಸಿಎಸ್‌ ಇ ವಿದ್ಯಾರ್ಥಿಗಳಿಗೆ ಹಾಗೂ ಏಪ್ರಿಲ್ 14ರಂದು ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಮೂಡಬಿದಿರೆಯ ವಿದ್ಯಾಗಿರಿ ಶ್ರೀಮತಿ ಸುಂದರಿ ಆಳ್ವ ಆವರಣದಲ್ಲಿನ ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದ್ದು, ಇಂಗ್ಲಿಷ್ ಮಾಧ್ಯಮದಲ್ಲಿ ಪರೀಕ್ಷಾ ಪತ್ರಿಕೆ ಇರಲಿದೆ. ಸಿಬಿಎಸ್‌ ಸಿ ಮತ್ತು ಐಸಿಎಸ್‌ ಇ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಮಾರ್ಚ್ 28 ಕೊನೆಯ ದಿನವಾಗಿದ್ದು, ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳು ಏಪ್ರಿಲ್ 10ರವರೆಗೆ ಅರ್ಜಿಯನ್ನು ಸಲ್ಲಿಸಬಹುದು” ಎಂದು ಮಾಹಿತಿ ನೀಡಿದರು.

ವಿದ್ಯಾಥಿಗಳ ಅನುಕೂಲಕ್ಕಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದ್ದು https://scholarship.alvas.org/puc/login.php ಮೂಲಕ ಅರ್ಜಿಯನ್ನು ಸಲ್ಲಿಸಬಹುಡಾಗಿದೆ.

ವಿಶೇಷ ಸೂಚನೆ:
ಶೈಕ್ಷಣಿಕ ವಿದ್ಯಾರ್ಥಿವೇತನ ಪ್ರವೇಶ ಪರೀಕ್ಷೆಯ ಅಂಕದ ಆಧಾರದ ಮೇಲೆ ಆಯ್ಕೆಯ ಜೊತೆಯಲ್ಲಿ ಪ್ರತ್ಯೇಕವಾಗಿ ಪ್ರತಿ ವರ್ಷದಂತೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಅಂಕವನ್ನು ಪರಿಗಣಿಸಿ, ಕ್ರೀಡೆ ಹಾಗೂ ಸಾಂಸ್ಕೃತಿಕ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆಯ ಮೇಲೂ ಆಯ್ಕೆಗಳು ನಡೆಯುತ್ತವೆ. ಪರೀಕ್ಷೆಯ ದಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ಪೋಷಕರ ಜೊತೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸಮಾಲೋಚನೆ ನಡೆಸಲಿದ್ದಾರೆ.

ಶೈಕ್ಷಣಿಕ-ಬೋಧನ ಭಿನ್ನತೆ, ಸಾಮಾಜಿಕ ಅಸಮಾನತೆ, ಆರ್ಥಿಕ ಅಜಗಜಾಂತರ, ಪ್ರಾದೇಶಿಕ ಭೇದಭಾವ, ಲಿಂಗ ತಾರತಮ್ಯ ಎಲ್ಲವನ್ನೂ ಮೀರಿ ಅರ್ಹ ಮಕ್ಕಳಿಗೆ ಅರ್ಹತೆಯ ಆಧಾರದಲ್ಲಿ ಅತ್ಯುನ್ನತ ಮಟ್ಟದ ಶಿಕ್ಷಣ ದೊರೆಯಬೇಕು ಎಂಬ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಮಹತ್ವಾಕಾಂಕ್ಷಿ ಸದಾಶಯದಂತೆ ಸಂಪೂರ್ಣ ಪಾರದರ್ಶಕವಾಗಿ ಪ್ರವೇಶ ಪರೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ. ಪ್ರವೇಶ ಪರೀಕ್ಷೆಗಳ ಅಂಕವೇ ಅಂತಿಮ ಮಾನದಂಡವಾಗಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ:8884477588/ 6366377827/ 6366377823 ಸಂಪರ್ಕಿಸಬಹುದು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English