ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಅಂತಾರಾಷ್ಟ್ರೀಯ ಐ.ಎಸ್.ಒ. 270011ಪ್ರಶಸ್ತಿ ಪ್ರದಾನ

10:13 PM, Friday, March 15th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಉಜಿರೆ: ಲಂಡನ್‌ನಲ್ಲಿ ಪ್ರಧಾನಕಛೇರಿ ಹೊಂದಿರುವ ಎನ್.ಕ್ಯೂ.ಎ. ಸಂಸ್ಥೆ 2023 ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯವೈಖರಿ, ಪಾರದರ್ಶಕತೆ, ತಂತ್ರಜ್ಞಾನಗಳ ಬಳಕೆ, ಸುರಕ್ಷತೆ, ಬದ್ಧತೆ, ಕಾರ್ಯಕರ್ತರ ಕಾರ್ಯಕುಶಲತೆ, ವರದಿಗಳ ತಯಾರಿ ಮತ್ತು ಬಳಕೆ, ವ್ಯವಹಾರದಲ್ಲಿ ನೈಪುಣ್ಯತೆ ಮೊದಲಾದ 114 ವಿಷಯಗಳನ್ನು ಗಮನಿಸಿ ಅಂತಾರಾಷ್ಟ್ರೀಯ ಐ.ಎಸ್.ಒ. 270011 ಪ್ರಶಸ್ತಿ ಪ್ರದಾನ ಮಾಡಲು ಸಂತೋಷ ಮತ್ತು ಅಭಿಮಾನ ಉಂಟಾಗುತ್ತದೆ ಎಂದು ಎನ್.ಕ್ಯೂ.ಎ. ಸಂಸ್ಥೆಯ ಮಹಾಪ್ರಬಂಧಕ ಅಮರ್‌ದೀಪ್ ಹೇಳಿದರು.
ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಐ.ಎಸ್.ಒ. 270011 ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಮುಂದಿನ ಮೂರು ವರ್ಷಗಳ ವರೆಗೆ ಇದು ಚಾಲ್ತಿಯಲ್ಲಿದ್ದು ಬ್ಯಾಂಕ್‌ಗಳೊಡನೆ ವಿಶ್ವಾಸಾರ್ಹ ವ್ಯವಹಾರಗಳನ್ನು ನಡೆಸಲು ನೆರವಾಗಲಿದೆ. ಬ್ಯಾಂಕುಗಳಿಗೆ ಯೋಜನೆಯ ಮೇಲೆ ಹೆಚ್ಚಿನ ವಿಶ್ವಾಸಾರ್ಹತೆ ಮೂಡಿಸಲು ಸಹಾಯವಾಗುತ್ತದೆ. ಸ್ವ-ಸಹಾಯ ಸಂಘಗಳ ಸದಸ್ಯರು ಇನ್ನೂ ಹೆಚ್ಚಿನ ಸೇವೆಯನ್ನು ನಿರೀಕ್ಷಿಸಬಹುದು ಎಂದು ಅವರು ಹೇಳಿದರು.

ಪ್ರಶಸ್ತಿ ಗೋಡೆಯಲ್ಲಿ ಮಾತ್ರ ಪ್ರದರ್ಶನಕ್ಕೆ ಅಲ್ಲ. ಮನಃಪೂರ್ವಕವಾಗಿ ಅದರ ಉದ್ದೇಶ ಫಲಾನುಭವಿಗಳ ಸೇವೆಯಲ್ಲಿ ಬಳಕೆಯಾಗಬೇಕು ಎಂದು ಅವರು ಹೇಳಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ದೇವಸ್ಥಾನ, ಕಛೇರಿ ಹಾಗೂ ಎಲ್ಲಾ ವಿಭಾಗಗಳಲ್ಲಿಯೂ ಈಗ ತಂತ್ರಜ್ಞಾನ ಬಳಕೆ ಮಾಡಲಾಗುತ್ತದೆ. ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಗ್ರಾಮೀಣ ಪ್ರದೇಶದ ಫಲಾನುಭವಿಗಳು ಕೂಡಾ ತಂತ್ರಜ್ಞಾನದ ಬಳಕೆಯೊಂದಿಗೆ ಈಗ ತಮ್ಮ ವ್ಯವಹಾರ ನಡೆಸುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರೆ ಈ ಬಗ್ಯೆ ಮುಕ್ತ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.

ತಂತ್ರಜ್ಞಾನ ನಮ್ಮ ಸೇವಕ ಆಗಬೇಕು. ಮಾಲಕ ಆಗಬಾರದು. ತಂತ್ರಜ್ಞಾನದ ನೆಪದಲ್ಲಿ ಮಾನವೀಯತೆ ಮತ್ತು ಮಾನವೀಯ ಮೌಲ್ಯಗಳನ್ನು ಮರೆಯಬಾರದು ಎಂದು ಅವರು ಎಚ್ಚರಿಕೆ ನೀಡಿದರು.

ತಂತ್ರಜ್ಞಾನದ ಬಳಕೆಯಿಂದಾಗಿ ವಂಚನೆ, ಅವ್ಯವಹಾರಕ್ಕೆ ಅವಕಾಶವಿಲ್ಲ. ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಹೊಣೆಗಾರಿಕೆಯಿಂದ ನಿರ್ವಹಿಸಿ ಸಂಸ್ಥೆ ಇನ್ನೂ ಹೆಚ್ಚು ಬೆಳೆಯಲಿ, ಬೆಳಗಲಿ ಎಂದು ಹೆಗ್ಗಡೆಯವರು ಹಾರೈಸಿದರು.

ಹರೀಶ್‌ಕೃಷ್ಣಸ್ವಾಮಿ ಮಾತನಾಡಿ, ಅಂತಾರಾಷ್ಟ್ರೀಯ ಮಾನ್ಯತೆಯಿಂದ ಫಲಾನುಭವಿಗಳ ನಂಬಿಕೆ, ವಿಶ್ವಾಸ ಹೆಚ್ಚಾಗುತ್ತದೆ ಎಂದು ಹೇಳಿದರು.|

ಹೇಮಾವತಿ ವಿ. ಹೆಗ್ಗಡೆ, ಜಿ.ಎಸ್. ಭಾರ್ಗವ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಮತ್ತು ಹಣಕಾಸು ಅಧಿಕಾರಿ ಶಾಂತಾರಾಮ ಪೈ. ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಹೆಚ್. ಮಂಜುನಾಥ್ ಸ್ವಾಗತಿಸಿದರು. ಅನಿಲ್‌ಕುಮಾರ್ ಧನ್ಯವಾದವಿತ್ತರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English