ಮಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಭದಿಂದಲೇ ಎಲ್ಲವನ್ನೂ ಮುಚ್ಚಿ ಹಾಕುವ ಸರ್ಕಾರದ ಪ್ರಯತ್ನಕ್ಕೆ ವಿರುದ್ಧವಾಗಿ ಬಿಜೆಪಿ ರಾಜ್ಯಾದ್ಯಂತ ನಡೆಸಿದ ಬೃಹತ್ ಹೋರಾಟದ ಫಲವಾಗಿ ಸಚಿವರು ರಾಜೀನಾಮೆ ನೀಡುವಂತಾಗಿದ್ದು ಕಾಂಗ್ರೆಸ್ಸಿನ ಭ್ರಷ್ಟಾಚಾರದ ದಾಹಕ್ಕೆ ತಾತ್ಕಾಲಿಕ ಕಡಿವಾಣ ಬಿದ್ದಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಹೇಳಿದರು.
ನಾಡಿನ ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಮೀಸಲಿಡಲಾದ ಅನುದಾನವನ್ನು ಭ್ರಷ್ಟರು ತಿಂದು ತೇಗುತ್ತಿದ್ದರೂ ಸರ್ಕಾರ ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದು, ಪ್ರಸ್ತುತ ರಾಜ್ಯದಲ್ಲಿ ಸರ್ಕಾರಕ್ಕೆ ನಿರ್ದಿಷ್ಟ ಪಾಲು ನೀಡಿದರೆ ಯಾವ ಅಕ್ರಮವನ್ನು ಬೇಕಾದರೂ ನಡೆಸಿಕೊಂಡು ಹೋಗುವ ವಾತಾವರಣ ನಿರ್ಮಾಣವಾಗಿದೆ. ಇದರಿಂದ ಪ್ರಾಮಾಣಿಕ ಅಧಿಕಾರಿಗಳ ತಲೆದಂಡವಾಗುತ್ತಿದ್ದು, ತಮ್ಮದಲ್ಲದ ತಪ್ಪಿಗೆ ಹೆದರಿ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದಾರೆ. ಜನಸಾಮಾನ್ಯರ ಪರವಾಗಿ ಬಿಜೆಪಿ ಮುಂದೆಯೂ ಇದೇ ಮಾದರಿಯ ಹೋರಾಟ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮುಂದುವರಿಸಲಿದೆ ಎಂದರು.
ಪ್ರಾಮಾಣಿಕ ಅಧಿಕಾರಿ ಚಂದ್ರಶೇಖರನ್ ಅವರ ಆತ್ಮಹತ್ಯೆಗೆ ಇಡೀ ರಾಜ್ಯವೇ ಕಂಬನಿ ಮಿಡಿದಿದ್ದು ಎಲ್ಲಾ ತಪ್ಪಿತಸ್ಥರಿಗೂ ಶಿಕ್ಷೆಯಾಗಲು ಸಿಬಿಐ ತನಿಖೆಯೇ ಸೂಕ್ತವೆಂದು ಶಾಸಕರು ಇದೇ ವೇಳೆ ಆಗ್ರಹಿಸಿದರು.
Click this button or press Ctrl+G to toggle between Kannada and English