ಪ್ರಧಾನ ಮಂತ್ರಿಯಾಗಿ ಸತತ ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ ನರೇಂದ್ರ ದಾಮೋದರ ದಾಸ್ ಮೋದಿ

12:02 AM, Monday, June 10th, 2024
Share
1 Star2 Stars3 Stars4 Stars5 Stars
(No Ratings Yet)
Loading...

ನವದೆಹಲಿ: ಎನ್ ಡಿಎ ಮೈತ್ರಿಕೂಟ ಸತತ ಮೂರನೇ ಬಾರಿಗೆ ದೆಹಲಿ ಗದ್ದುಗೆ ಏರಿದ್ದು ಇಂದು ಭಾನುವಾರ ಸಂಜೆ ಪ್ರಧಾನ ಮಂತ್ರಿಯಾಗಿ ಸತತ ಮೂರನೇ ಅವಧಿಗೆ ನರೇಂದ್ರ ದಾಮೋದರ ದಾಸ್ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದರು.

ಈಶ್ವರ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮೋದಿಯವರಿಗೆ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅಧಿಕಾರ ಗೌಪ್ಯತೆಯ ಪ್ರತಿಜ್ಞಾವಿಧಿ ಬೋಧಿಸಿದರು.

ದೆಹಲಿಯಲ್ಲಿರುವ ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಅವರಿಗೆ ರಾಷ್ಟ್ರಪತಿಗಳುು ಪ್ರಮಾಣವಚನ ಬೋಧಿಸಿದಿರು. ನರೇಂದ್ರ ಮೋದಿ ಅವರ ಜತೆಗೆ ಹಲವು ಸಂಸದರು ಕೂಡ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ದೇಶದಲ್ಲಿ 10 ವರ್ಷಗಳ ಬಳಿಕ ಸಮ್ಮಿಶ್ರ ಸರ್ಕಾರ ರಚನೆಯಾಗಿದೆ.

ಟಿಡಿಪಿ, ಜೆಡಿಯು, ಜೆಡಿಎಸ್‌ ಹಾಗೂ ಎಲ್‌ಜೆಪಿ ಸಂಸದರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಭಾರತದ ಸಾವಿರಾರು ಗಣ್ಯರ ಜತೆಗೆ ನೆರೆ ರಾಷ್ಟ್ರಗಳ ನಾಯಕರು ಕೂಡ ಭಾಗವಹಿಸಿದ್ದರು.

ಸತತ ಮೂರು ಅವಧಿಗೆ ಆಯ್ಕೆಯಾದ ಎರಡನೇ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ. ಸ್ವಾತಂತ್ರ್ಯದ ನಂತರದ ದೇಶದ ಮೊದಲ ನಾಯಕ ಜವಾಹರಲಾಲ್ ನೆಹರು ಅವರು ಬ್ರಿಟನ್‌ನಿಂದ 1947 ರಲ್ಲಿ ಸ್ವಾತಂತ್ರ್ಯ ಪಡೆದ ನಂತರ 17 ವರ್ಷಗಳ ಕಾಲ ಭಾರತವನ್ನು ಆಳಿದ್ದರು.

ನರೇಂದ್ರ ಮೋದಿ ಅವರು ಮೂರನೇ ಅವಧಿಗೆ ಪ್ರಧಾನ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ಮೋದಿ….ಮೋದಿ ಉದ್ಘಾರ ಕೇಳಿಬಂತು. ದೆಹಲಿ ಪೊಲೀಸರ ಸುಮಾರು 1,100 ಟ್ರಾಫಿಕ್ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದಲ್ಲದೇ, ಎನ್‌ಎಸ್‌ಜಿ ಕಮಾಂಡೋಗಳು, ಡ್ರೋನ್‌ಗಳು ಮತ್ತು ಸ್ನೈಪರ್‌ಗಳು ರಾಷ್ಟ್ರಪತಿ ಭವನ ಸುತ್ತ ಭದ್ರತೆಗೆ ನಿಯೋಜಿಸಲಾಗಿದೆ.

ಸಂಪುಟಕ್ಕೆ ಸೇರ್ಪಡೆಯಾದವರು: ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸಿದ ಬಳಿಕ ಕ್ಯಾಬಿನೆಟ್​ ಮಂತ್ರಿಯಾಗಿ ರಾಜನಾಥ್ ಸಿಂಗ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಈಶ್ವರನ ಹೆಸರಿನಲ್ಲಿ ರಾಜನಾಥ್ ಸಿಂಗ್ ಅವರು ಪ್ರಮಾಣವಚನ ಸ್ವೀಕರಿಸಿದರು.

ಬಿಜೆಪಿ ಹಿರಿಯ ಸಂಸದ ಅಮಿತ್ ಶಾ ಅವರು ಸಹ ಈಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಕಳೆದ ಬಾರಿ ಶಾ ಕೇಂದ್ರ ಗೃಹ ಸಚಿವರಾಗಿದ್ದರು, ಈ ಬಾರಿಯೂ ಸಹ ಅವರು ಮತ್ತೊಮ್ಮೆ ಗೃಹ ಖಾತೆ ವಹಿಸಿಕೊಳ್ಳುವ ಸಾಧ್ಯೆತಗಳಿವೆ.ಮೋದಿ ಸಂಪುಟದ ಕ್ಯಾಬಿನೆಟ್​ ಸಚಿವರಾಗಿ ನಿತಿನ್ ಗಡ್ಕರಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಅಚ್ಚರಿ ಎಂಬಂತೆ ಮೋದಿ ಸಂಪುಟ ಸೇರಿದ್ದಾರೆ. ಇಂದು ಮೋದಿ ಜೊತೆಗೆ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ಮಧ್ಯ ಪ್ರದೇಶ ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ನಿರ್ಮಲಾ ಸೀತಾರಾಮನ್, ಡಾ ಎಸ್ ಜೈಶಂಕರ್, ಪಿಯೂಷ್ ಗೋಯಲ್, ಧರ್ಮೇಂದ್ರ ಪ್ರಧಾನ್, ಹೆಚ್ ಡಿ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಅವರು ಸಹ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಹರ್ಯಾಣದ ಮಾಜಿ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಅವರು ಕ್ಯಾಬಿನೆಟ್ ಸಚಿವರಾಗಿ ಮೋದಿ ಸರ್ಕಾರಕ್ಕೆ ಸೇರ್ಪಡೆಯಾದರು. ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಹಿಂದೂಸ್ತಾನ್ ಅವಾಮಿ ಮೋರ್ಚಾ ಪಕ್ಷದ ನಾಯಕ ಜಿತನ್ ರಾಮ್ ಮಾಂಝಿ, ಬಿಹಾರದ ಜೆಡಿಯು ಸಂಸದ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಲನ್ ಸಿಂಗ್ ಅವರು ನಿತೀಶ್ ಕುಮಾರ್ ಅವರ ಜೆಡಿಯು ಕೋಟಾದಿಂದ ಮೋದಿ ಸಂಪುಟಕ್ಕೆ ಸೇರ್ಪಡೆಯಾದರು.

ಅಸ್ಸಾಂನ ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯಸಭೆ ಸಂಸದ ಸರ್ಬಾನಂದ್ ಸೊನೊವಾಲ್, ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವರಾಗಿದ್ದ ಮಧ್ಯಪ್ರದೇಶದ ಬಿಜೆಪಿ ಸಂಸದ ಡಾ ವಿರೇಂದ್ರ ಕುಮಾರ್ ಖಾಟಿಕ್ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿದೆ.

ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷದ ಸಂಸದ ಕಿಂಜರಪು ರಾಮ್ ಮೋಹನ್ ನಾಯ್ಡು ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಶ್ರೀಕಾಕುಳಂ ಕ್ಷೇತ್ರದ ಸಂಸದರಾಗಿರುವ ನಾಯ್ಡು, 36ನೇ ವಯಸ್ಸಿನಲ್ಲಿಯೇ ಕೇಂದ್ರ ಸಚಿವರಾಗುವ ಅವಕಾಶ ಪಡೆದಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English