ಮಂಗಳೂರಿನಲ್ಲಿ 2 ಕಿ.ಮೀ. ರೋಡ್ ಶೋ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ರಸ್ತೆಯುದ್ದಕ್ಕೂ ಜನಸಾಗರ

9:11 AM, Monday, April 15th, 2024
Share
1 Star2 Stars3 Stars4 Stars5 Stars
(4 rating, 1 votes)
Loading...

ಮಂಗಳೂರು : ಲೋಕಸಭಾ ಚುನಾವಣೆ ಹಿನ್ನಲೆ ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾನುವಾರ ಸರಿಯಾಗಿ 7.36ಕ್ಕೆ ನಾರಾಯಣ ಗುರು ವೃತ್ತದ ಬಳಿಗೆ ಆಗಮಿಸಿ 7.39ಕ್ಕೆ ನಾರಾಯಣ ಗುರುಗಳ ಮೂರ್ತಿಗೆ ಮಾಲಾರ್ಪಣೆ ಮಾಡಿ ರೋಡ್ ಶೋಗಾಗಿ ಸಿದ್ಧಪಡಿಸಲಾದ ಅಲಂಕೃತ ವಾಹನವನ್ನೇರಿ ರೋಡ್ ಶೋ ಆರಂಭಿಸಿದರು.

ನಾರಾಯಣಗುರು ವೃತ್ತದಿಂದ ನವಭಾರತ ವೃತ್ತದವರೆಗೆ ಅಂದರೆ ಸುಮಾರು 2 ಕಿ.ಮೀ. ರೋಡ್ ಶೋ ನಡೆಸಿದರು. ಪ್ರಧಾನಿ ಮೋದಿಗಾಗಿ ರೋಡ್ ಶೋ ನಡೆಯುವ ರಸ್ತೆಯುದ್ದಕ್ಕೂ ಸಾವಿರಾರು ಮಂದಿ ಜಮಾಯಿಸಿ ಪ್ರಧಾನಿ ಮೋದಿ ಅವರಿಗೆ ಜೈಕಾರ ಕೂಗಿದರು. ಈ ಸಂದರ್ಭ ಮೋದಿ ಅವರು ಕೈಯಲ್ಲಿ ಹೊಳೆಯುವ ಕಮಲದ ಚಿಹ್ನೆಯನ್ನು ಹಿಡಿದುಕೊಂಡಿದ್ದರು. ರೋಡ್ ಶೋ ಉದ್ದಕ್ಕೂ ಬಿಜೆಪಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಪ್ರಧಾನಿ ಮೋದಿ ಅವರ ಮೇಲೆ ನಿರಂತರ ಪುಷ್ಪ ವೃಷ್ಟಿ ಗೈದರು.

ಬಿಳಿ ಬಣ್ಣದ ಕುರ್ತಾದ ಮೇಲೆ ನೀಲಿ ಬಣ್ಣದ ಓವರ್‌ಕೋಟ್ ತಲೆಯಲ್ಲಿ ಕೇಸರಿ ಟೋಪಿ ಧರಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಕೈಯ್ಯಲ್ಲಿ ಕಮಲದ ಚಿಹ್ನೆಯನ್ನು ಹಿಡಿದು ರಸ್ತೆಯುದ್ದಕ್ಕೂ ಸೇರಿದ್ದ ಜನರತ್ತ ಕೈಬೀಸುತ್ತಾ ಸಾಗಿದರು. ಮೈಸೂರಿನಿಂದ ನೇರವಾಗಿ ಮಂಗಳೂರು ವಿಮಾನದ ನಿಲ್ದಾಣಕ್ಕೆ ವಿಶೇಷ ವಿಮಾನದ ಮೂಲಕ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ನಿಗದಿತ ಅವಧಿಗೆ 9 ನಿಮಿಷ ಮುಂಚಿತವಾಗಿ ಆಗಮಿಸಿದ್ದರು.

ಮೋದಿ ಅವರಿದ್ದ ವಿಶೇಷ ವಾಹನದಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಮತ್ತು ಉಡುಪಿ-ಚಿಕ್ಕಮಗಳೂರು ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು. ಇನ್ನು ಕರಾವಳಿಯ ವಿಶೇಷ ವಾದ್ಯಗಳು, ಯಕ್ಷಗಾನ, ಹುಲಿ ವೇಷ, ಚಂಡೆ ಮೇಳಗಳು ರೋಡ್ ಶೋನ ಮೆರಗನ್ನು ಹೆಚ್ಚಿಸಿದವು.

ಸಂಜೆ ಐದು ಗಂಟೆಗಾಗಲೇ ರೋಡ್ ಶೋನ ರಸ್ತೆಯಲ್ಲಿ ಜನ ಜಮಾವಣೆ ಆರಂಭ ಗೊಂಡಿತ್ತು. ಎಸ್‌ಪಿಜಿ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಸಾವಿರಕ್ಕೂ ಅಧಿಕ ಪೊಲೀಸರು ಭದ್ರತೆ ಕಾರ್ಯ ನಿರ್ವಹಿಸಿದರು. ಸಾರ್ವಜನಿಕರಿಗೆ ಅಲ್ಲಲ್ಲಿ ಮಜ್ಜಿಗೆ ವಿತರಣೆ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ವಿಡಿಯೋ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English