ಪ್ರೇಮ್ ಸಿಂಗ್ ಚಾಕು ಇರಿತ ಪ್ರಕರಣದ ಪ್ರಮುಖ ಆರೋಪಿಗೆ ಗುಂಡು, ಬಂಧನ

2:20 PM, Tuesday, August 16th, 2022
Share
1 Star2 Stars3 Stars4 Stars5 Stars
(5 rating, 1 votes)
Loading...
ಪ್ರೇಮ್ ಸಿಂಗ್

ಶಿವಮೊಗ್ಗ : ವೀರ ಸಾವರ್ಕರ್ ಫೋಟೋ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕು ಇರಿದ ಪ್ರಕರಣ ಸಂಬಂಧ ಈಗಾಗಲೇ ಇಬ್ಬರನ್ನು ಬಂಧಿಸಿದ್ದ ಪೊಲೀಸರು, ಇದೀಗ ಪ್ರಕರಣದ ಪ್ರಮುಖ ಆರೋಪಿಯನ್ನು ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಿವಮೊಗ್ಗದ ಮಾರ್ನಾಮಿಬೈಲ್​ನ ನಿವಾಸಿ ಮೊಹಮ್ಮದ್ ಜಬೀವುಲ್ಲಾನನ್ನು ಪೊಲೀಸರು ಇಂದು ಮಂಗಳವಾರ ನಸುಕಿನ ಜಾವ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರ ಮೇಲೆ ಚಾಕುವಿನಿಂದ ಜಬೀವುಲ್ಲಾ ಹಲ್ಲೆ ಮಾಡಲು ಯತ್ನಿಸಿದ ವೇಳೆ ಪೊಲೀಸರು ಕಾಲಿಗೆ ಗುಂಡೇಟು ತಗುಲಿಸಿ ಬಂಧಿಸಿದ್ದಾರೆ.

ಎರಡು ಕೋಮಿನ ಗುಂಪಿನಿಂದ ಶಿವಮೊಗ್ಗ ಜಿಲ್ಲೆ ಬಿಗುವಿಣ ವಾತಾವರಣ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ರಾತ್ರಿ ಹೊತ್ತು ಅನಗತ್ಯ ಬೈಕ್ ಸಂಚಾರ ನಿಷೇಧಿಸಿ, ಬೈಕ್ ನಲ್ಲಿ ಇಬ್ಬರು ಯುವಕರು ಸಂಚರಿಸದಂತೆ ಎಡಿಜಿಪಿ ಅಲೋಕ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ದ್ವಿಚಕ್ರ ವಾಹನ ಸವಾರರು ಹಿಂಬದಿಯಲ್ಲಿ 40 ವರ್ಷಕ್ಕಿಂತ ಕಿರಿಯ ವಯಸ್ಸಿನವರನ್ನು ಕೂರಿಸಿಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. 40 ವರ್ಷ ಮೇಲ್ಪಟ್ಟ ವಯಸ್ಕರು ಮತ್ತು ಮಹಿಳೆಯರಿಗೆ ರಿಯಾಯಿತಿ ನೀಡಲಾಗಿದೆ. ರಾತ್ರಿ 9 ರಿಂದ ಬೆಳಗಿನ ಜಾವ 5ರವರೆಗೆ ತುರ್ತು ಸಂದರ್ಭವನ್ನು ಹೊರತುಪಡಿಸಿ ದ್ವಿಚಕ್ರ ವಾಹನಗಳ ಸಂಚಾರ ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.

ದುಷ್ಕರ್ಮಿಗಳಿಂದ ಇರಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರೇಮ್ ಸಿಂಗ್ ಎಂಬ ಯುವಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಬಳಿಕ ಮಾತನಾಡಿದ ಸಚಿವರು, ಗಾಯಾಳು ಪ್ರೇಮ್ ಸಿಂಗ್ ಭೇಟಿ ಮಾಡಿ ಬಂದಿದ್ದೇನೆ. ಜೀವಕ್ಕೆ ತೊಂದರೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಮೆಗ್ಗನ್ ಆಸ್ಪತ್ರೆಯ ವೈದ್ಯರು ಉತ್ತಮ ಕೆಲಸ ಮಾಡಿದ್ದಾರೆ. ಚಾಕು ಇರಿತಕ್ಕೆ ಒಳಗಾದ ಯುವಕನಿಗೆ 15 ನಿಮಿಷಗಳಲ್ಲಿ ಚಿಕಿತ್ಸೆ ದೊರೆತಿದೆ ಎಂದರು.

ಅಮಾಯಕನ ಮೇಲೆ ಹಾಗೂ ಸಿಕ್ಕಿದವರನ್ನು ಹೊಡೆದು ಹಾಕಿದ್ದಾರೆ. ಒಬ್ಬ ಇದ್ದ ಕಾರಣ ಸ್ವಲ್ಪ ದೂರ ನಡೆದುಕೊಂಡು ಬಂದಿದ್ದಾನೆ. ನಂತರ ಆತನ ಸ್ನೇಹಿತರು ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಸೇರಿಸಿದ್ದಾರೆ. ಘಟನೆಗೆ ಕಾರಣರಾದವರು ಎಲ್ಲೇ ಇದ್ದರೂ ಅವರನ್ನು ಹುಡುಕಿ ಮಟ್ಟ ಹಾಕುತ್ತೇವೆ. ಇಂತವರನ್ನು ಮಟ್ಟಹಾಕುವ ಕೆಲಸ ಪೊಲೀಸರು ಮಾಡುತ್ತಾರೆ‌ ಎಂದು ತಿಳಿಸಿದರು.

ಮೊನ್ನೆ ಅರೆಸ್ಟ್ ಆದವನ ಮೇಲೆ ಕ್ರಮ ತೆಗೆದುಕೊಳ್ಳಲು ಪೊಲೀಸರಿಗೆ ತಿಳಿಸಿದ್ದೇನೆ. ಈ ಘಟನೆಗಳಿಗೆ ಯಾರು ಪ್ರಚೋದನೆ ನೀಡುತ್ತಿದ್ದಾರೆ. ಯಾವ ರೀತಿ ಪ್ರಚೋಧನೆ ಕೊಡುತ್ತಿದ್ದಾರೆ ಎನ್ನುವುದನ್ನು ತನಿಖೆ ಮಾಡುತ್ತಿದ್ದಾರೆ ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English