ಮಂಗಳೂರು : ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನವು ಪ್ರತಿವರ್ಷ ಅತ್ಯುತ್ತಮ ಕವನ ಸಂಕಲನಕ್ಕೆ ನೀಡುವ 2023ನೇ ಸಾಲಿನ ಹಂಸಕಾವ್ಯ ರಾಷ್ಟ್ರೀಯ ಕಾವ್ಯ ಪುರಸ್ಕಾರಕ್ಕೆ ದಾವಣಗೆರೆಯ ಸದಾಶಿವ ಸೊರಟೂರು ಅವರ ‘ನಿನ್ನ ಬೆರಳು ತಾಕಿ’ ಕವನ ಸಂಕಲನವು ಆಯ್ಕೆಯಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಕೆ. ವಿ. ಕೃಷ್ಣ ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪುರಸ್ಕಾರವು 25000 ರೂಪಾಯಿ ನಗದು ಬಹುಮಾನವನ್ನು ಒಳಗೊಂಡಿದ್ದು ಮುಂಬರುವ ನವೆಂಬರ್ ನಲ್ಲಿ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ.
ಕವಿ ಸದಾಶಿವ ಸೊರಟೂರು ಅವರು ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ಸೊರಟೂರಿನವರು. ಸದ್ಯ ಹೊನ್ನಾಳಿಯಲ್ಲಿ ವಾಸ. ವೃತ್ತಿಯಲ್ಲಿ ಪ್ರೌಢಶಾಲಾ ಶಿಕ್ಷಕ.
ಇದುವರೆಗೂ ಇವರ ನಾಲ್ಕು ಕವನಸಂಕಲನ ಮತ್ತು ಎರಡು ಕಥಾಸಂಕಲನ ಪ್ರಕಟವಾಗಿದೆ. ‘ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ’ ಕವನ ಸಂಕಲನಕ್ಕೆ ಹರಿಹರಶ್ರೀ ಕಾವ್ಯ ಪ್ರಶಸ್ತಿ. ‘ಗಾಯಗೊಂಡ ಸಾಲುಗಳು’ ಕವನ ಸಂಕಲನಕ್ಕೆ ಹಸ್ತಪ್ರತಿಗೆ ಕೊಡಮಾಡುವ ಬಳ್ಳಾರಿ ಎನ್ ಗವಿಸಿದ್ದ ಕಾವ್ಯ ಪುರಸ್ಕಾರ ಬಂದಿದೆ. ‘ಕೊಲ್ಲುವುದಕ್ಕೆ ಸದ್ದುಗಳಿವೆ’ ಎಂಬ ಕವನಸಂಕಲದ ಹಸ್ತಪ್ರತಿ ‘ಕಾವ್ಯಸಂಜೆ’ಯ ದಶಮಾನೋತ್ಸವ ಕಾವ್ಯ ಪುರಸ್ಕಾರ ಬಂದಿದೆ. ಮೊದಲ ಕಥಾಸಂಕಲನ ‘ಅರ್ಧ ಬಿಸಿಲು ಅರ್ಧ ಮಳೆ’ ಪುಸ್ತಕಕ್ಕೆ ಧಾರಾವಾಡದ ಭೂಮಿ ಸಾಹಿತ್ಯ ಪ್ರತಿಷ್ಠಾನದ ಕಥಾಪುರಸ್ಕಾರ ಮತ್ತು ಕ.ಸಾ.ಪ ದತ್ತಿ ಪ್ರಶಸ್ತಿ ಬಂದಿದೆ.
‘ಆ ಹಾದಿ’ ಮತ್ತು ‘ಕಂಡಕ್ಟರ್ ಕವಿತೆಗಳು’ ಇವು ವಿಭಿನ್ನ ಶೈಲಿಯ ಪುಸ್ತಕಗಳು.
ಇತ್ತೀಚಿಗೆ ‘ನಿನ್ನ ಬೆರಳು ತಾಕಿ’ ಎಂಬ ಕವನ ಸಂಕಲನ ಬಿಡುಗಡೆಯಾಗಿದೆ
‘ಧ್ಯಾನಕ್ಕೆ ಕೂತ ನದಿ’ ಕಥಾಸಂಕಲನವು 2024 ನೇ ಸಾಲಿನ ಈ ಹೊತ್ತಿಗೆ ಕಥಾ ಪ್ರಶಸ್ತಿ ಪಡೆದಿದೆ.
ಅನೇಕ ಕಥೆ, ಕವನ ಸ್ಪರ್ಧೆಗಳಲ್ಲಿ ಬಹುಮಾನ ಬಂದಿದೆ. ಹಲವು ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ನೂರಾರು ಲೇಖನಗಳನ್ನು, ಪ್ರಬಂಧಗಳನ್ನೂ ಬರೆದಿದ್ದಾರೆ. ಒಟ್ಟಾರೆ ಹದಿಮೂರು ಪುಸ್ತಕಗಳು ಪ್ರಕಟವಾಗಿವೆ.
‘ಭಂಟಿ’ ಎಂಬ ಕಥೆಯು ಮಂಗಳೂರು ವಿಶ್ವವಿದ್ಯಾಲಯದ ಪದವಿ ತರಗತಿ ಪಠ್ಯವಾಗಿದೆ.
2023ರಲ್ಲಿ ಪ್ರಕಟಗೊಂಡ ‘ನಿನ್ನ ಬೆರಳು ತಾಕಿ’ ಎಂಬ ಕವನ ಸಂಕಲನ ಈಗ ಪ್ರತಿಷ್ಠಿತ ಹಂಸಕಾವ್ಯ ರಾಷ್ಟ್ರೀಯ ಕಾವ್ಯ ಪುರಸ್ಕಾರಕ್ಕೆ ಆಯ್ಕೆಯಾಗಿರುವುದು ಅವರ ಸಾಹಿತ್ಯ ಸೇವೆಗೆ ಮತ್ತಷ್ಟು ಮಹತ್ವ ನೀಡಿದೆ.
Click this button or press Ctrl+G to toggle between Kannada and English