ತನ್ನದೇ ಪಕ್ಷದ ಕಾರ್ಪೊರೇಟರ್‌ ಪುತ್ರಿ ನೇಹಾ ಕೊಲೆಯಾದರೂ ಕಾಂಗ್ರೆಸ್‌ ಸರ್ಕಾರ ಅವರಿಗೆ ಧೈರ್ಯ ತುಂಬಿಲ್ಲ : ನಳಿನ್‌ ಕುಮಾರ್‌

8:14 PM, Tuesday, April 23rd, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಹುಬ್ಬಳ್ಳಿಯಲ್ಲಿ ನಡೆದ ನೇಹಾ ಕೊಲೆ ಪ್ರಕರಣದ ಕುಟುಂಬಸ್ಥರಿಗೆ ಕಾಂಗ್ರೆಸ್‌ ಸರ್ಕಾರ ಪರಿಹಾರ ನೀಡಬೇಕು, ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಳಿನ್, ಅವರದೇ ಪಕ್ಷದ ಕಾರ್ಪೊರೇಟರ್‌ ಪುತ್ರಿ ನೇಹಾ ಕೊಲೆಯಾದರೂ ಕಾಂಗ್ರೆಸ್‌ ಸರ್ಕಾರ, ಮುಖಂಡರು ನೇಹಾ ಕುಟುಂಬಕ್ಕೆ ಇದುವರೆಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ. ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಆತಂಕದ ವಾತಾವರಣ ಸೃಷ್ಟಿಯಾಗುತ್ತಿದೆ ಎಂದರು.

ಹಿಂದೂಗಳ ಮೇಲೆ ಹಲ್ಲೆ, ಹತ್ಯೆಗಳು ನಡೆಯುತ್ತಿವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಶಿವಮೊಗ್ಗದಲ್ಲಿ ಹರ್ಷ ಹತ್ಯೆ, ಮಂಗಳೂರಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ನಡೆದಾಗ ತಕ್ಷಣ ಅವರ ಮನೆಗೆ ತೆರಳಿ ಸಾಂತ್ವನ ಹೇಳುವ, ಪರಿಹಾರ ನೀಡುವ ಕೆಲಸ ಮಾಡಲಾಯಿತು. ನೇಹಾ ಪ್ರಕರಣದ ತನಿಖೆಯನ್ನು ಕಾಂಗ್ರೆಸ್‌ ಸರ್ಕಾರ ನಡೆಸುವ ವಿಶ್ವಾಸವಿಲ್ಲ. ಕೂಡಲೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ನಳಿನ್ ಒತ್ತಾಯಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಮೆರವಣಿಗೆಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಲಾಯಿತು. ವಿಧಾನಸೌಧದಲ್ಲಿ ಪಾಕ್‌ ಪರ ಘೋಷಣೆ ಕೇಳಿ ಬಂತು. ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟ ಆದಾಗ ಡಿ.ಕೆ. ಶಿವಕುಮಾರ್‌ ಹಗುರ ಹೇಳಿಕೆ ನೀಡಿದ್ದರು. ಬಳಿಕ ಬಾಂಬ್‌ ಸ್ಫೋಟಕ್ಕೆ ಉಗ್ರವಾದಿಗಳ ಲಿಂಕ್‌ ಇರುವುದು ಬಯಲಾದಾಗ ದಾರಿ ತಪ್ಪಿಸುವ ಮಾತನಾಡಿದ್ದರು. ಕಾಂಗ್ರೆಸ್‌ನ ತುಷ್ಟೀಕರಣ ನೀತಿಯೇ ಇಂತಹ ಘಟನೆಗಳಿಗೆ ಕಾರಣ ಎಂದು ನಳಿನ್‌ ಕುಮಾರ್‌ ಹೇಳಿದರು.

ಬಿಜೆಪಿ ಸರ್ಕಾರ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿತ್ತು. ಇದೀಗ ಪಿಎಫ್‌ಐನ ನಂಟಿರುವ ಎಸ್‌ಡಿಪಿಐ ಜತೆ ಕಾಂಗ್ರೆಸ್‌ ಒಳ ಒಪ್ಪಂದ ಮಾಡಿಕೊಂಡಿದೆ. ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಸಂಪತ್ತಿನ ಸಮಾನ ಹಂಚಿಕೆಯನ್ನು ಪ್ರಸ್ತಾಪಿಸಲಾಗಿದೆ. ಇದು ಮುಸ್ಲಿಮರ ತುಷ್ಟೀಕರಣ ನೀತಿ. ರಾಜ್ಯದಲ್ಲಿ ಬಹುಸಂಖ್ಯಾತ ಹಿಂದುಗಳಿಗೆ ಬದುಕು ಕಷ್ಟವಾಗಿದೆ ಎಂದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English