“ಸಮಾಜಮುಖಿ ಕಾರ್ಯಗಳಿಗೆ ದಾನಿಗಳ ತುಂಬು ಮನಸ್ಸಿನ ಸಹಕಾರ ಬೇಕು” -ಕೆ.ಎಂ. ಶೆಟ್ಟಿ

11:35 AM, Tuesday, June 18th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು: ಕೆ.ಎಂ. ಶೆಟ್ಟಿ ಒಡೆತನದ ವಿ.ಕೆ. ಗ್ರೂಫ್ ಆಫ್ ಕಂಪೆನೀಸ್ ಮುಂಬೈ ಪ್ರಾಯೋಜಕತ್ವದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದರ ವತಿಯಿಂದ ಬೃಹತ್ ಸಮಾಜ ಕಲ್ಯಾಣ ಕಾರ್ಯಕ್ರಮ ಸೋಮವಾರ ನಗರದ ಪುರಭವನದಲ್ಲಿ ಜರುಗಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತಾಡಿದ ವಿ.ಕೆ. ಗ್ರೂಫ್ ಆಫ್ ಕಂಪೆನೀಸ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎಂ. ಶೆಟ್ಟಿ ಮದ್ಯಗುತ್ತು ಅವರು, “ಸಮಾಜ ಕಲ್ಯಾಣ ಕಾರ್ಯಕ್ರಮಗಳು ಅವಿರತವಾಗಿ ನಡೆಯಲಿ. ಇದಕ್ಕೆ ನಾವೆಲ್ಲರೂ ತುಂಬು ಮನಸ್ಸಿನಿಂದ ಸಹಕಾರ ನೀಡಬೇಕಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಉದ್ಯಮ ಸ್ಥಾಪನೆಗೆ ಆಡಳಿತ ನಡೆಸುವವರ ಸಹಕಾರ ಅಗತ್ಯ ಬೇಕು. ಇದರಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ಉದ್ಯಮಿಗಳು ತಮ್ಮ ತಾಯ್ನಾಡಿನಲ್ಲೇ ಉದ್ಯಮ ಸ್ಥಾಪನೆಗೆ ಮುಂದಾಗಲಿದ್ದಾರೆ” ಎಂದರು.

ಒಕ್ಕೂಟದ ಮಹಾದಾನಿ ಕೂಳೂರು ಕನ್ಯಾನ ಸದಾಶಿವ ಶೆಟ್ಟಿ ಮಾತನಾಡಿ, “ಐಕಳ ಹರೀಶ್ ಶೆಟ್ಟಿ ಅವರು ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಅವರಿಗೆ ನನ್ನ ಧನ್ಯವಾದಗಳು. ಇನ್ನು ಮುಂದಿನ ದಿನಗಳಲ್ಲೂ ಸಂಘಟನೆ ಇದೇ ರೀತಿ ಅರ್ಥಪೂರ್ಣ ಕಾರ್ಯಕ್ರಮ ಕೈಗೊಳ್ಳಲಿ” ಎಂದರು.

ಎಂಆರ್ ಜಿ ಗ್ರೂಫ್ ಚೇರ್ ಮೆನ್ ಕೆ.ಪ್ರಕಾಶ್ ಶೆಟ್ಟಿ ಮಾತನಾಡಿ, “ಜನಸೇವೆಯೇ ಜನಾರ್ಧನ ಸೇವೆ ಎನ್ನುವ ಸಂಕಲ್ಪವನ್ನು ಮಾಡಿಕೊಂಡು 2018ರಿಂದ ಜಾಗತಿಕ ಬಂಟರ ಸಂಘಗಳ ಒಕ್ಕೂಟ ನಿರಂತರ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಬಡತನದಲ್ಲೇ ಹುಟ್ಟಿ ಹಂತಹಂತವಾಗಿ ಮುಂದಕ್ಕೆ ಬಂದು ನಾನೀಗ ಈ ಮಟ್ಟಕ್ಕೆ ಬೆಳೆದು ನಿಂತಿದ್ದೇನೆ. ಇಂಥ ಅರ್ಥಪೂರ್ಣ ಕಾರ್ಯಕ್ರಮ ಮುಂದಕ್ಕೂ ನಡೆಯಬೇಕು. ಅಶಕ್ತರು, ನೊಂದವರು ಸಂಕುಚಿತ ಮನೋಭಾವನೆ ಬಿಟ್ಟು ಹೊರಬನ್ನಿ. ನಾವು ದುಡಿದ ಅಲ್ಪಭಾಗವನ್ನು ಸಮಾಜಕ್ಕೆ ದಾನ ಮಾಡುತ್ತೇವೆ. ಯಾರೂ ಬರುವಾಗ ಏನನ್ನೂ ತರುವುದಿಲ್ಲ ಹೋಗುವಾಗ ಕೊಂಡೊಯ್ಯುವುದು ಕೂಡಾ ಇಲ್ಲ. ಹೀಗಾಗಿ ಸಮಾಜದ ನೊಂದವರಿಗಾಗಿ ಒಳ್ಳೆಯ ಮನಸ್ಸಿನಿಂದ ದಾನ ಮಾಡಿ. ಗೋಲ್ಡ್ ಫಿಂಚ್ ಸಿಟಿಯಲ್ಲಿ ಬೃಹತ್ ಐಟಿ ಸಂಸ್ಥೆ ಸ್ಥಾಪಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು ಈ ಮೂಲಕ 60,000ಕ್ಕೂ ಹೆಚ್ಚು ವಿದ್ಯಾವಂತ ಯುವಕ ಯುವತಿಯರಿಗೆ ಉದ್ಯೋಗ ಕಲ್ಪಿಸುವ ಯೋಜನೆ ಹಾಕಿಕೊಂಡಿದ್ದೇನೆ. ಯಾರೂ ಕೆಲಸ ಇಲ್ಲ ಎಂದು ಊರು ಬಿಟ್ಟು ಹೋಗಬೇಡಿ” ಎಂದರು.

ಇದೇ ಸಂದರ್ಭದಲ್ಲಿ ಲೋಕಸಭೆಗೆ ನೂತನವಾಗಿ ಆಯ್ಕೆಯಾದ ಕ್ಯಾ. ಬೃಜೇಶ್ ಚೌಟ ಹಾಗೂ ಕೋಟ ಶ್ರೀನಿವಾಸ್ ಪೂಜಾರಿ ಅವರನ್ನು ಅತಿಥಿಗಳು ಸನ್ಮಾನಿಸಿದರು.

ಬಳಿಕ ಮಾತಾಡಿದ ಕ್ಯಾ. ಬೃಜೇಶ್ ಚೌಟ ಅವರು “ಜಿಲ್ಲೆಯ ಅಭಿವೃದ್ಧಿಗೆ ನನ್ನದೇ ಆದ 9 ಕಾರ್ಯಸೂಚಿಯನ್ವಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇನೆ. ಪ್ರಗತಿಯ ಪಥದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೊಂಡೊಯ್ಯಲು ಕಟಿಬದ್ಧನಾಗಿದ್ದೇನೆ. ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಅದೆಷ್ಟೋ ಯೋಜನೆಗಳು ಜನರಿಗಾಗಿ ಜಾರಿಗೆ ಬರುತ್ತಿದ್ದು ಅದನ್ನು ಅನುಷ್ಠಾನಕ್ಕೆ ತರಲು ಬಂಟರ ಸಂಘಟನೆಗಳು ಯೋಗ್ಯ ಕಾರ್ಯಕ್ರಮ ಆಯೋಜಿಸಬೇಕಿದೆ” ಎಂದರು.

ಕೋಟ ಶ್ರೀನಿವಾಸ್ ಪೂಜಾರಿ ಮಾತು ಮುಂದುವರೆಸುತ್ತ, “ಉಳುವವನೆ ಹೊಲದೊಡೆಯ ಕಾನೂನಿನಲ್ಲಿ ಅತೀ ಹೆಚ್ಚು ಭೂಮಿ ಕಳೆದುಕೊಂಡವರು ಬಂಟರು. ಅವರು ಅದಕ್ಕಾಗಿ ಕಣ್ಣೀರು ಹಾಕಿಲ್ಲ. ತಮ್ಮ ಸ್ವಂತ ಬಲದಿಂದ ಬೆಳೆದು ಬಂದು ಸಮಾಜದಲ್ಲಿ ಗುರುತಿಸಲ್ಪಡುತ್ತಿದ್ದಾರೆ. ಹೊರರಾಜ್ಯ, ಹೊರದೇಶಗಳಲ್ಲಿ ಸಾಕಷ್ಟು ಸಂಖ್ಯೆಯ ಬಂಟರು ಯಶಸ್ವಿ ಉದ್ಯಮಿಗಳಾಗಿದ್ದಾರೆ. ದೇಶ ರಕ್ಷಣೆಯ ವಿಷಯ ಬಂದಾಗಲೂ ಮುಂಚೂಣಿಯಲ್ಲಿರುವವರು ಬಂಟರು” ಎಂದರು.

ದಾನಿಗಳ ಪ್ರೋತ್ಸಾಹದಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಸಾಧ್ಯವಾಗುತ್ತದೆ. ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತವಾಗಿ ನಡೆಸಲು ದಾನಿಗಳ ಸಹಾಯ ಬೇಕು.‌ ಸಮಾಜ ಕಲ್ಯಾಣ ಕಾರ್ಯಕ್ರಮದಿಂದ ಬಡವರಿಗೆ ತುಂಬಾ ಅನುಕೂಲವಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾರಂಭದಲ್ಲಿ ಡಾಕ್ಟರೇಟ್ ಪದವಿ ಪುರಸ್ಕೃತ ಡಾ ಕೆ ಪ್ರಕಾಶ್ ಶೆಟ್ಟಿ, ಸಂಸದರಾದ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಉದ್ಯಮಿಗಳಾದ ಕನ್ಯಾನ ಸದಾಶಿವ ಶೆಟ್ಟಿ, ಕರುಣಾಕರ ಶೆಟ್ಟಿ ಮದ್ಯಗುತ್ತು, ಲೆಫ್ಟಿನೆಂಟ್ ಸಾತ್ವಿಕ್ ರೈ ಕಾಸರಗೋಡು ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಮುಂಬೈ ಬಂಟ್ಸ್ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಎಸ್ ಸಿಡಿಸಿಸಿ ಬ್ಯಾಂಕ್ ಚೇರ್ ಮೆನ್ ಡಾ.ಎಂ.ಎನ್. ರಾಜೇಂದ್ರ ಕುಮಾರ್, ರಾಜೇಶ್ ಎನ್. ಶೆಟ್ಟಿ, ಅರವಿಂದ್ ಆನಂದ್ ಶೆಟ್ಟಿ, ಬೆಳ್ಳಾಡಿ ಅಶೋಕ್ ಎಸ್. ಶೆಟ್ಟಿ, ಮುನಿಯಾಲ್ ಉದಯ ಕುಮಾರ್ ಶೆಟ್ಟಿ, ಭಾಸ್ಕರ್ ಶೆಟ್ಟಿ ಕಾಶ್ಮೀರ, ಎ ಸದಾನಂದ ಶೆಟ್ಟಿ, ಅಜಿತ್ ಕುಮಾರ್ ರೈ ಮಾಲಾಡಿ, ಡಾ.ಪಿ.ವಿ. ಶೆಟ್ಟಿ, ಪಟ್ಲ ಸತೀಶ್ ಶೆಟ್ಟಿ, ಸಂತೋಷ್ ಶೆಟ್ಟಿ, ಇನ್ನಂಜೆ ಶಶಿಧರ್ ಶೆಟ್ಟಿ, ದಯಾಚರಣ್ ಶೆಟ್ಟಿ, ಶ್ರೀಧರ್ ಶೆಟ್ಟಿ, ಗಿರೀಶ್ ಶೆಟ್ಟಿ ತೆಳ್ಳಾರ್, ರವೀಂದ್ರ ಶೆಟ್ಟಿ ಉಳಿದೊಟ್ಟು, ಆದರ್ಶ ಶೆಟ್ಟಿ, ಸುಧಾಕರ್ ಪೂಂಜಾ, ನಾಗೇಶ್ ಹೆಗ್ಡೆ, ಪುರುಷೋತ್ತಮ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ, ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಉಳ್ತೂರು ಮೋಹನ್ ದಾಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಚಂದ್ರಹಾಸ್ ಡಿ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಪಟ್ಲ ಸತೀಶ್ ಶೆಟ್ಟಿ ಪ್ರಾರ್ಥನೆಗೈದರು. ಜಯಕರ ಶೆಟ್ಟಿ ಇಂದ್ರಾಳಿ ಪ್ರಾಸ್ತಾವಿಕ ಮಾತನ್ನಾಡಿದರು.

ಡಾ ಮಂಜುಳಾ ಶೆಟ್ಟಿ, ರಾಜೇಶ್ವರಿ ಡಿ ಶೆಟ್ಟಿ ಸುರತ್ಕಲ್, ಬಾಲಕೃಷ್ಣ ಆಳ್ವ ಕೊಡಾಜೆ, ಆರ್ ಜೆ ನಯನ, ಭಾಗ್ಯರಾಜ್ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು.

ಪುರುಷೋತ್ತಮ ಭಂಡಾರಿ ಅಡ್ಯಾರ್ , ನಿತೇಶ್ ಶೆಟ್ಟಿ ಎಕ್ಕಾರ್ ಪ್ರಿಯಾ ಹರೀಶ್ ಶೆಟ್ಟಿ, ಕಾರ್ಯಕ್ರಮ ನಿರೂಪಿಸಿದರು.

ಸಮಾಜ ಕಲ್ಯಾಣ ಕಾರ್ಯಕ್ರಮದಂಗವಾಗಿ 1,312 ಮಕ್ಕಳಿಗೆ ಸುಮಾರು 1 ಕೋಟಿ ರೂ. ಮೊತ್ತದ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English