ಕಲರ್ಸ್‌ನಲ್ಲಿ ಹೊಸ ಧಾರಾವಾಹಿ ‘ನನ್ನ ದೇವ್ರು’ ಜುಲೈ 8ರಿಂದ ನಿತ್ಯ ಸಂಜೆ 6:30ಕ್ಕೆ ಪ್ರಸಾರ ಅಶ್ವಿನಿ ನಕ್ಷತ್ರ ಖ್ಯಾತಿಯ ಮಯೂರಿ ಮರಳಿ ಕಿರುತೆರೆಗೆ

8:47 PM, Thursday, July 4th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಕೌಟುಂಬಿಕ ಮೌಲ್ಯಗಳನ್ನು ಬಿಂಬಿಸುವ ಸದಭಿರುಚಿಯ ಧಾರಾವಾಹಿಗಳಿಗೆ ಹೆಸರಾದ ಕಲರ್ಸ್‌ ಕನ್ನಡ ಇದೀಗ ‘ನನ್ನ ದೇವ್ರು’ ಎಂಬ ಹೊಸ ಕತೆಯನ್ನು ಹೊತ್ತು ತಂದಿದೆ. ಜುಲೈ 8, 2024 ರಿಂದ ಪ್ರಸಾರ ಆರಂಭಿಸಲಿರುವ ಈ ಹೊಸ ಧಾರಾವಾಹಿಯನ್ನು ನೀವು ಸೋಮವಾರದಿಂದ ಶುಕ್ರವಾರದ ತನಕ ಪ್ರತಿ ಸಂಜೆ 6.30 ರಿಂದ ವೀಕ್ಷಿಸಬಹುದು.

‘ನನ್ನ ದೇವ್ರು’ ಧಾರಾವಾಹಿಯ ವಿಶೇಷವೆಂದರೆ “ಅಶ್ವಿನಿ ನಕ್ಷತ್ರ’ದಿಂದ ಮನೆಮಾತಾಗಿದ್ದ ಮಯೂರಿ ಮತ್ತೆ ಕಿರುತೆರೆಗೆ ಮರಳಿರುವುದು. ಈ ಧಾರಾವಾಹಿಯಲ್ಲಿ ಮಯೂರಿಯದು ಸಣ್ಣ ಊರಿನ ಬಡ ನರ್ಸ್‌ ಪಾತ್ರ. ಊರೇ ಮೆಚ್ಚುವ ಉದ್ಯಮಿ ಸಚ್ಚಿದಾನಂದ ಅವರಿಗೆ ಸೇರಿದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುವ ಬಡ ಹುಡುಗಿ ಮಯೂರಿ. ಜನಾನುರಾಗಿ ಸಚ್ಚಿದಾನಂದರ 20 ವರ್ಷದ ಮಗಳಿಗೆ ಅಪ್ಪನನ್ನು ಕಂಡರೆ ಇಷ್ಟವಿಲ್ಲ. ತನ್ನಿಂದ ದೂರಾಗಿ ಬದುಕುತ್ತಿರುವ ಮಗಳ ವಿಶ್ವಾಸವನ್ನು ಮರಳಿ ಗಳಿಸಿಕೊಳ್ಳಲು ಹಲುಬುತ್ತಿರುವ ಸಚ್ಚಿದಾನಂದ ಅವರ ಬದುಕಿನಲ್ಲಿ ಮಯೂರಿಯ ಪ್ರವೇಶವಾಗುತ್ತದೆ. ತಾನು ಆರಾಧಿಸುವ ಸಚ್ಚಿದಾನಂದ್ ಬಾಳನ್ನು ಸರಿದಾರಿಗೆ ತರುವ ಹಾದಿಯಲ್ಲಿ ಮಯೂರಿ ಎದುರಿಸುವ ಸವಾಲುಗಳೇನು ಎಂಬುದೇ ಮುಂದಿನ ಕತೆ. ಸುತ್ತಲಿನವರ ಸಂಚುಗಳಿಂದ ಮಯೂರಿ ಹೇಗೆ ಸಚ್ಚಿದಾನಂದರನ್ನು ಕಾಪಾಡುತ್ತಾಳೆ ಎಂಬುದೇ ಕುತೂಹಲ.

‘ಅಶ್ವಿನಿ ನಕ್ಷತ್ರ’ ದಿಂದ ಹೆಸರಾದ ಮಯೂರಿ ತುಂಬಾ ವರ್ಷಗಳ ನಂತರ ಟಿವಿಗೆ ಮರಳಿ ‘ನನ್ನ ದೇವ್ರು’ ನಾಯಕಿಯಾಗಿದ್ದಾರೆ. ನಾಯಕನಾಗಿ ನಟಿಸುತ್ತಿರುವ ಅವಿನಾಶ್ ದಿವಾಕರ್ ಹಾಸ್ಯಚಕ್ರವರ್ತಿ ನರಸಿಂಹರಾಜು ಅವರ ಮೊಮ್ಮಗ ಅನ್ನುವುದು ಇನ್ನೊಂದು ವಿಶೇಷ. ಇವರೊಂದಿಗೆ ಯುಕ್ತಾ ಮಲ್ನಾಡ್, ಸ್ವಾತಿ, ವಿ. ಮನೋಹರ್, ರೇಖಾದಾಸ್, ನಿಶ್ಚಿತಾ ಗೌಡ, ಮಾಲತಿ ಸುಧೀರ್, ಯಮುನಾ ಶ್ರೀನಿಧಿ, ರವಿ ಬ್ರಹ್ಮ, ಅಭಿಷೇಕ್ ಶ್ರೀಕಾಂತ್… ಹೀಗೆ ‘ನನ್ನ ದೇವ್ರು’ ತಾರಾಗಣದಲ್ಲಿ ಜನಪ್ರಿಯ ನಟ ನಟಿಯರು ತುಂಬಾ ಮಂದಿ ಇದ್ದಾರೆ.

ಈ ಮೊದಲು ‘ಒಲವಿನ ನಿಲ್ದಾಣ’ ಧಾರಾವಾಹಿಯನ್ನು ನಿರ್ಮಿಸಿದ್ದ ಶ್ರುತಿ ನಾಯ್ಡು ಅವರು ‘ನನ್ನ ದೇವ್ರು’ ಧಾರಾವಾಹಿಯ ನಿರ್ಮಾಪಕಿ. ಇತ್ತೀಚಿಗೆ ಬೆಳ್ಳಿ ತೆರೆಯ ಮೇಲೆ ಖಳನಟನಾಗಿ ಗಮನ ಸೆಳೆಯುತ್ತಿರುವ ರಮೇಶ್ ಇಂದಿರಾ ‘ನನ್ನ ದೇವ್ರು’ ಧಾರಾವಾಹಿಯನ್ನು ನಿರ್ದೇಶಿಸುತ್ತಿದ್ದಾರೆ.

ಈ ಹೊಸ ಧಾರಾವಾಹಿ ಬಗ್ಗೆ ಉತ್ಸುಕತೆ ತೋರಿದ ಕಲರ್ಸ್‌ ಕನ್ನಡದ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ ಮಾತನಾಡಿ, ‘ಸದಾ ಹೊಸತನಕ್ಕಾಗಿ ತುಡಿಯುವ ಕಲರ್ಸ್‌ ಕನ್ನಡ ವಾಹಿನಿಯು ಈ ಹೊಸ ಧಾರಾವಾಹಿಯ ಮೂಲಕ ಮುಗ್ಧತೆ ಮತ್ತು ಪ್ರಾಮಾಣಿಕತೆ ತಂದೊಡ್ಡುವ ಸವಾಲುಗಳ ಕತೆಯೊಂದನ್ನು ವೀಕ್ಷಕರಿಗೆ ಉಣಬಡಿಸಲಿದೆ’ ಎಂದು ಹೇಳಿದರು.

ಕಲರ್ಸ್‌ ಕನ್ನಡದ ವಾಹಿನಿಯಲ್ಲಿ ಜುಲೈ 8ರಂದು ಸಂಜೆ 6.30 ಕ್ಕೆ ‘ನನ್ನ ದೇವ್ರು’ ಧಾರಾವಾಹಿಯ ಮೊದಲ ಕಂತು ಪ್ರಸಾರವಾಗಲಿದೆ. ಇದನ್ನು ನೀವು ಜಿಯೋ ಸಿನಿಮಾ ಮೂಲಕ ನಿಮ್ಮ ಫೋನಿನಲ್ಲೂ ನೋಡಬಹುದು,

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English