ತಲಪಾಡಿ ಹೆದ್ದಾರಿ ಪಕ್ಕ ಇರುವ ಗೂಡಂಗಡಿಗಳನ್ನು ತೆರವು ಮಾಡಲು ಮುಂದಾದ ಟೋಲ್ ಗೇಟ್ ಕಂಪೆನಿ

8:03 PM, Friday, July 5th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಕುಂದಾಪುರದಿಂದ ತಲಪಾಡಿವರೆಗಿನ ರಸ್ತೆ ಬದಿಯ ಅಂಗಡಿಗಳನ್ನು ತೆರವು ಗೊಳಿಸಲು ಮುಂದಾಗಿರುವ ಟೋಲ್ ಗೇಟ್ ಕಂಪೆನಿ ತಲಪಾಡಿ ಟೋಲ್ ಗೇಟ್ ಸುತ್ತಮುತ್ತ ನಿರ್ಮಿಸಲಾಗಿದ್ದ ಅಂಗಡಿಗಳನ್ನು ತೆರವುಗೊಳಿಸಲು ಮುಂದಾದಾಗ ಸ್ಥಳೀಯರು ಹಾಗೂ ತಲಪಾಡಿ ಗ್ರಾಮ ಪಂಚಾಯಿತಿ ಸದಸ್ಯರು ಕಾರ್ಯಾಚರಣೆ ನಿಲ್ಲಿಸಿದರು.

ನವಯುಗ ಉಡುಪಿ ಟೋಲ್ ವೇ ಖಾಸಗಿ ಲಿಮಿಟೆಡ್ ಸಿಬ್ಬಂದಿಗಳು ಟೋಲ್ ಗೇಟ್ ಸುತ್ತಮುತ್ತಇರುವ ಅಂಗಡಿಗಳನ್ನು ಜುಲೈ 20ರೊಳಗೆ ತೆರವುಗೊಳಿಸಲು ಗಡುವು ನೀಡಿದ್ದಾರೆ. ಅಂಗಡಿಗಳನ್ನು ಜುಲೈ 20ರೊಳಗೆ ತೆರವುಗೊಳಿಸದೇ ಇದ್ದಲ್ಲಿ ನೆಲಸಮಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ವರ್ಷ ಮಾರ್ಚ್ ತಿಂಗಳಲ್ಲಿ ಟೋಲ್ ಗೇಟ್ ಕಂಪೆನಿ ಸುಪ್ರೀಂ ಕೋರ್ಟ್ ಆದೇಶ ನೀಡಿದೆ ಎಂದು ವ್ಯಾಪಾರಿಗಳು ತಮ್ಮ ಅಂಗಡಿಗಳು ಮತ್ತು ಗಾಡಿಗಳನ್ನು ಖಾಲಿ ಮಾಡುವಂತೆ ಸೂಚನೆ ನೀಡಿತ್ತು. ಖಾಲಿ ಮಾಡದವರಿಗೆ ಮಾರ್ಚ್ ನಲ್ಲಿ ಎನ್‌ಹೆಚ್‌ಎಐ ನೋಟಿಸ್ ಕೂಡ ನೀಡಿತ್ತು. ನೋಟಿಸ್ ನೀಡಿದ ಬಳಿಕವೂ ಕೆಲವರು 3 ತಿಂಗಳು ಕಳೆದರೂ ಅಂಗಡಿ ತೆರವುಗೊಳಿಸಿಲ್ಲ. ಇನ್ನು ಕೆಲವರು ಅಂಗಡಿಯನ್ನು ಬಾಡಿಗೆಗೆ ನೀಡಿದ್ದಾರೆ. ಇನ್ನು ಕೆಲವರು ಲಕ್ಕಾಂತರ ರೂಪಾಯಿಗೆ ಅಂಗಡಿಯನ್ನು ಮಾರಾಟ ಮಾಡಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದಂತೆ ಹೆದ್ದಾರಿ ಪಕ್ಕದ ರಸ್ತೆ ಬದಿ ವ್ಯಾಪಾರಿಗಳು ಖಾಲಿ ಮಾಡಬೇಕು. ಏಪ್ರಿಲ್ ತಿಂಗಳಲ್ಲೇ ಈ ಕಾರ್ಯಾಚರಣೆ ನಡೆಯಬೇಕಿತ್ತು. ಆದರೆ, ಮಾನವೀಯ ನೆಲೆಯಲ್ಲಿ ವಿಳಂಬವಾಯಿತು. ಈಗ ಜುಲೈ 20 ಅಂತಿಮ ಗಡುವು ನೀಡಲಾಗಿದೆ. ಅಷ್ಟರೊಳಗೆ ಅಂಗಡಿಗಳನ್ನು ತೆರವು ಮಾಡದಿದ್ದರೆ ಅಂಗಡಿಗಳನ್ನು ನೆಲಸಮ ಮಾಡುತ್ತೇವೆ. ಹೆದ್ದಾರಿಯಿಂದ 60 ರಿಂದ 90 ಅಡಿ ಅಂತರದಲ್ಲಿರುವ ಎಲ್ಲಾ ಅಂಗಡಿಗಳನ್ನು ತೆರವು ಮಾಡಲಾಗುತ್ತದೆ. ಎರಡು ಬಾರಿ ನೋಟಿಸ್ ನೀಡಲಾಗಿದೆ. ಇಂದು ನಾವು ಅಂತಿಮ ಗಡುವನ್ನು ನೀಡಿದ್ದೇವೆ. ಸುಮಾರು 150 ಚಿಕ್ಕ ಅಂಗಡಿ ಮಾಲೀಕರು ಮೂರನೇ ವ್ಯಕ್ತಿಗಳಿಗೆ ಅಂಗಡಿ ನೀಡಿದ್ದಾರೆ. ಇನ್ನು ಕೆಲವರು ಸಣ್ಣಪುಟ್ಟ ಅಂಗಡಿಗಳನ್ನು ಒಂದರಿಂದ ಮೂರು ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ. ವಿನ್ಯಾಸದ ಅಡಿಯಲ್ಲಿ ಬರುವ ಎಲ್ಲಾ ಕೆಲಸಗಳ ಗುತ್ತಿಗೆಯನ್ನು ನಮ್ಮ ಕಂಪನಿ ತೆಗೆದುಕೊಂಡಿದೆ. ಹೆದ್ದಾರಿ ಬದಿಯ ಬೀದಿ ದೀಪಗಳನ್ನು ಎಲ್‌ಇಡಿಗೆ ಪರಿವರ್ತಿಸಲಾಗುವುದು. ಮಳೆಗಾಲದ ನಂತರ ಸರ್ವೀಸ್ ರಸ್ತೆ ಹಾಗೂ ಚರಂಡಿ ಕಾಮಗಾರಿ ನಡೆಯಲಿದೆ. ಅಂಡರ್‌ಪಾಸ್ ಗುತ್ತಿಗೆ ಕಂಪನಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಎನ್‌ಹೆಚ್‌ಎಐಗೆ ಸಾರ್ವಜನಿಕರ ದೂರುಗಳನ್ನು ನಾವು ಗಣನೆಗೆ ತೆಗೆದುಕೊಳ್ಳುತ್ತೇವೆ ಎಂದು ಟೋಲ್ ಗೇಟ್ ಕಂಪೆನಿ ಹೇಳಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English