ಸರ್ಕ್ಯೂಟ್‌ ಹೌಸ್‌ ಬಳಿಯಿಂದ ಬಿಜೈ ಸರ್ಕಲ್‌ ವರೆಗಿನ ರಸ್ತೆಗೆ “ಜಾರ್ಜ್‌ ಫೆರ್ನಾಂಡಿಸ್‌ ರಸ್ತೆ” ನಾಮಕರಣ

9:03 PM, Saturday, July 6th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ನಗರದ ಸರ್ಕ್ಯೂಟ್‌ ಹೌಸ್‌ ಬಳಿಯಿಂದ ಬಿಜೈ ಸರ್ಕಲ್‌ ವರೆಗಿನ ರಸ್ತೆಗೆ “ಜಾರ್ಜ್‌ ಫೆರ್ನಾಂಡಿಸ್‌ ರಸ್ತೆ” ಎಂದು ಅಧಿಕೃತವಾಗಿ ನಾಮಕರಣಗೊಳಿಸಲಾಯಿತು.

ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, ದಕ್ಷಿಣ ಭಾರತದಲ್ಲಿ ಜನಿಸಿ ಉತ್ತರ ಭಾರತದಲ್ಲಿ ರಾಜಕೀಯವಾಗಿ ಬಹು ಎತ್ತರಕ್ಕೆ ಬೆಳೆದವರು ಜಾರ್ಜ್ ಫರ್ನಾಂಡಿಸ್. ಚಿಕ್ಕಂದಿನಲ್ಲೇ ಅನ್ಯಾಯದ ವಿರುದ್ಧ ಸಿಡಿದೇಳುವ ಸ್ವಭಾವದ ಅವರು ಕ್ರಿಶ್ಚಿಯನ್ ಪಾದ್ರಿಯಾಗಬೇಕೆಂದು ಬಯಸಿದ್ದರು. ಆದರೆ ಅವರು ದೇಶದ ಅಮೂಲ್ಯ ಆಸ್ತಿಯಾದರು. ಉದ್ಯೋಗವನ್ನು ಅರಸಿ ಮುಂಬೈಗೆ ಹೋದ ಅವರು ಅಲ್ಲಿ ಕಾರ್ಮಿಕ ನಾಯಕನಾಗಿ ಕೊನೆಗೆ ದೇಶವೇ ಮೆಚ್ಚುವಂತಹ ರಾಜಕಾರಣಿಯಾದರು. ಅವರ ಬದುಕು ರಾಜಕೀಯ ಇತಿಹಾಸದಲ್ಲೇ ಅತ್ಯಂತ ರೋಚಕ.

ಇಂದಿರಾ ಗಾಂಧಿಯವರ ಕಾಲದಲ್ಲಿ ಇವರು ಅಖಿಲ ಭಾರತ ರೈಲ್ವೆ ನೌಕರರ ಸಂಘದ ಅಧ್ಯಕ್ಷರಾಗಿ ನಡೆಸಿದ ರೈಲ್ವೆ ನೌಕರರ ಮುಷ್ಕರ ಇಡೀ ದೇಶದ ರೈಲ್ವೆ ಸಂಪರ್ಕ ಸ್ಥಬ್ಧವಾಯಿತು.. ಅಂದೇ ಈ ಮನುಷ್ಯ ಸಾಮಾನ್ಯನಲ್ಲ ಎಂಬುದು ಇಂದಿರಾಗಾಂಧಿಯವರ ಅರಿವಿಗೆ ಬಂದಿತ್ತು. ದೇಶದ ತುರ್ತು ಪರಿಸ್ಥಿಯ ವೇಳೆ ಭೂಗತರಾಗಿ ಹೋರಾಟ ಸಂಘಟಿಸಿದರು. ಕೊನೆಗೆ ಜೈಲು ಸೇರಿದರೂ ಜೈಲಿನಲ್ಲೇ ಇದ್ದು ದಾಖಲೆಯ ಮಟ್ಟದಲ್ಲಿ ಗೆದ್ದು ಕೇಂದ್ರ ಮಂತ್ರಿಯೂ ಆದರು. ವಾಜಪೇಯಿಯವರ ಜೊತೆ ಎನ್‌ಡಿಎ ಸೇರಿ ರೈಲ್ವೆ ಸಚಿವರಾಗಿ ಅಭೂತ ಪೂರ್ವ ಅಭಿವೃದ್ಧಿ ಕೆಲಸಗಳನ್ನು ಮಾಡಿದರು. ಮೂಲೆಗುಂಪಾಗಿದ್ದ ಕೊಂಕಣ ರೈಲ್ವೆ ಯೋಜನೆಯನ್ನು ಮತ್ತೆ ಕೈಗೆತ್ತಿಕೊಂಡು ಅದಕ್ಕೆ ಜೀವಕೊಟ್ಟು ಯೋಜನೆಯನ್ನು ಸಾಕಾರಗೊಳಿಸಿದ ಕೀರ್ತಿ ಜಾರ್ಜ್‌ರದ್ದು. ದೇಶದ ರಕ್ಷಣಾ ಸಚಿವರಾಗಿ ಕೈಗೊಂಡ ಕ್ಷಿಪ್ರ ನಿರ್ಧಾರಗಳು, ಮಾಡಿದ ಕೆಲಸಗಳ ಬಗ್ಗೆ ಇಡೀ ದೇಶಕ್ಕೆ ಹೆಮ್ಮೆಯಿದೆ. ಸಿಯಾಚಿನ್ ನಂತಹ ಪ್ರದೇಶಕ್ಕೆ ಹದಿನೆಂಟು ಸಲ ಭೇಟಿ ನೀಡಿದ ಏಕಮಾತ್ರ ರಕ್ಷಣಾ ಸಚಿವ ಅವರಾಗಿದ್ದು ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಮಣ್ಣು ಮುಕ್ಕಿಸಿದರು. ಜಾರ್ಜ್, ವಾಜಪೇಯಿ, ಅಡ್ವಾಣಿಯವರ ಮಧ್ಯೆ ಅದಮ್ಯ ದೇಶ ಪ್ರೇಮದ ಒಲವಿದ್ದದ್ದು ವಿಶೇಷ.

ಇವರ ಜೀವನಗಾಥೆ ಮುಂದಿನ ಹಲವು ತಲೆಮಾರುಗಳಿಗೆ ಆದರ್ಶ ಮತ್ತು ಸ್ಪೂರ್ತಿಯಾಗಿದ್ದು ಇಂತಹ ಶ್ರೇಷ್ಠ ವ್ಯಕ್ತಿತ್ವದ ಹೆಸರನ್ನು ಮಂಗಳೂರಿನ ಈ ರಸ್ತೆಗೆ ಇಡುತ್ತಿರುವುದು ಇಡೀ ಜಿಲ್ಲೆಗೆ ಹೆಮ್ಮೆಯ ಸಂಗತಿ ಎಂದರು.

ಈ ಸಂದರ್ಭದಲ್ಲಿ ಕ್ಯಾ. ಬ್ರಿಜೇಶ್ ಚೌಟ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಬಿಜೈ ಚರ್ಚ್ ನ ಧರ್ಮಗುರು ಜೆ ಬಿ ಸಾಲ್ದಾನ, ವಿಶೇಷ ಅತಿಥಿಗಳಾಗಿ ಜಾರ್ಜ್‌ ಫೆರ್ನಾಂಡಿಸ್‌ ರ ಸಹೋದರ ಮೈಕಲ್ ಫೆರ್ನಾಂಡಿಸ್‌, ಪಾಲಿಕೆ ಸದಸ್ಯರು, ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English