ಗೋಡೆ ಮೇಲಿನ ಚಿತ್ತಾರ ಕೃತಿ ಬಿಡುಗಡೆ

5:41 PM, Tuesday, July 9th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು: ಸಾಹಿತ್ಯ ಕ್ಷೇತ್ರ ಗೊಂದಲಮಯವಾಗಿದೆ. ಎಡ ಬಲ ಪಂಥದಿಂದಾಗಿ ಸಾಹಿತ್ಯ ಕ್ಷೇತ್ರ ಸೊರಗುತ್ತಿದೆ. ಪ್ರಾಮಾಣಿಕತೆಗಿಂತ ಪ್ರತಿಷ್ಠೆಯೇ ಮುಖ್ಯವಾಗುತ್ತಿದೆ. ಅರ್ಹತೆಗೆ ಪುರಸ್ಕಾರ ಸಿಗುವ ಬದಲು ಪಂಥದ ಮೇಲೆ ನಿರ್ಧರಿತವಾಗುತ್ತದೆ. ಇದರಿಂದಾಗಿ ಹೊಸ ಸಾಹಿತಿಗಳಲ್ಲಿ ಗೊಂದಲ ಮೂಡುತ್ತಿದೆ ಎಂದು ಬರಹಗಾರ್ತಿ ಡಾ| ಪಾರ್ವತಿ ಜಿ. ಹೇಳಿದರು.

ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮಂಗಳೂರು ವತಿಯಿಂದ ಕೆನರಾ ಕಾಲೇಜಿನ ಸಭಾಂಗಣದಲ್ಲಿ ನಡೆದ ವೀಣಾ ಟಿ. ಶೆಟ್ಟಿಯವರ ‘ಗೋಡೆಯ ಮೇಲಿನ ಚಿತ್ತಾರ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಭಾವನೆ ಹಾಗೂ ಸಂವೇದನಶೀಲತೆಗೆ ‘ಗೋಡೆಯ ಮೇಲಿನ ಚಿತ್ತಾರ’ ವೇದಿಕೆಯಾಗಿದೆ. ನಿಜ ಜೀವನ ಹಾಗೂ ಪ್ರಕೃತಿಯೊಂದಿಗಿನ ಸಂಬಂಧ ತೆರೆದುಕೊಂಡಿದೆ. ಕೃತಿಯಲ್ಲಿ ಲೇಖಕಿಯ ವ್ಯಕ್ತಿತ್ವಕ್ಕೆ ಅಭಿವ್ಯಕ್ತಿ ಸಿಕ್ಕಿದೆ. ಬಾಲ್ಯದ ನೆನಪುಗಳನ್ನು ಮೆಲುಕು ಹಾಕಲು ಕಾರಣವಾಗಿದೆ. ಸರಳವಾದ ಲಲಿತವಾದ, ಶಕ್ತಿಯುತವಾದ ಲೇಖನಗಳಿದ್ದು, ಓದುಗರನ್ನು ಹಿಡಿದಿಟ್ಟುಕೊಳ್ಳುತ್ತದೆ. ಇಂತಹ ಮತ್ತಷ್ಟು ಸಾಹಿತ್ಯ ಕೃಷಿಯ ಅಗತ್ಯವಿದೆ ಎಂದರು.

ಚಿಂತಕ ಡಾ| ಅರುಣ್ ಉಳ್ಳಾಲ್ ಅವರು ಕೃತಿ ಪರಿಚಯ ಮಾಡಿ ಮಾತನಾಡಿ, ಮುಖಪುಟದಲ್ಲೇ ಗೋಡೆಯ ಚಿತ್ತಾರ ಹೊಂದಿದ್ದು, ವಿವಿಧ ಆಯಾಮಗಳು, ಬದುಕಿನ ವಿವಿಧ ಚಿಂತನೆಗಳನ್ನು ಅನಾವರಣವಾಗಿದೆ. ಮುಖಪುಟವೇ ಪುಸ್ತಕಕ್ಕೆ ಜೀವ ತುಂಬಿದೆ. ಮುನ್ನುಡಿಯು ವ್ಯಕ್ತಿತ್ವವನ್ನು ವಿವರಿಸಿದೆ. ವೈಯುಕ್ತಿಕ ಅನುಭವ ಸಾರ್ವತ್ರಿಕವಾಗಿದೆ. ಸಮೃದ್ಧ ಬದುಕು ಕೃತಿಗೆ ಕಾರಣವಾಗಿದೆ. ವಿಷಯ ವೈವಿದ್ಯತೆ ಓದುಗನ ಏಕಾಗ್ರತೆ ಹೆಚ್ಚಿಸುತ್ತದೆ. ಒಂದೇ ಓದಿನಲ್ಲಿ ಅರ್ಥೈಸಿಕೊಳ್ಳಬಹುದಾದ ವಿಚಾರಗಳನ್ನು ಒಳಗೊಂಡಿದೆ ಎಂದರು.

ರಂಗಸಂಗಾತಿಯ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಲೇಖಕಿ ವೀಣಾ ಟಿ. ಶೆಟ್ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ತಾರಾನಾಥ ಶೆಟ್ಟಿ ಚೇಳಾರ್, ದಿವಾಕರ ಸಾಮಾನಿ ಚೇಳಾರ್‌ಗುತ್ತು ಉಪಸ್ಥಿತರಿದ್ದರು. ರಂಗಕರ್ಮಿ ಶಶಿರಾಜ್ ಕಾವೂರು ಕಾರ್ಯಕ್ರಮ ನಿರೂಪಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English