ಮಂಗಳೂರು: ಮಂಗಳೂರು ನಗರದ ಜನಸಂಖ್ಯೆ 8 ಲಕ್ಷಕ್ಕೆ ಏರಿದೆ. ನಗರದ ಅಭಿವೃದ್ಧಿಗೆ ರಸ್ತೆಗಳ ಅಗಲೀಕರಣ ಅನಿವಾರ್ಯ. ಜನರೂ ತಮ್ಮ ಜವಾಬ್ದಾರಿ ಅರಿತು ಸಹಕರಿಸಬೇಕೆಂದು, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಮನವಿ ಮಾಡಿದ್ದಾರೆ.
ಮಂಗಳವಾರ ನಾಗುರಿ- ಮರೋಳಿ ಸೂರ್ಯನಾರಾಯಣ ದೇವಸ್ಥಾನ ರಸ್ತೆಯ ಅಗಲೀಕರಣ- ತೆರವು ಕಾರ್ಯಾಚರಣೆ ಕುರಿತು, ಇಲ್ಲಿನ ಚರ್ಚ್ ಹಾಲ್ನಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಡೀಲ್- ಪಂಪ್ವೆಲ್ ರಸ್ತೆಗೆ 26 ಕೋಟಿ ರೂ. ಒದಗಿಸಲಾಗಿದ್ದರೂ ಒತ್ತುವರಿಯಲ್ಲಿ ಆಗುತ್ತಿರುವ ಸಮಸ್ಯೆಯಿಂದ ಯೋಜನೆ ಜಾರಿ ನಿಧಾನವಾಗುತ್ತಿದೆ. ಜನರು ತೆರವಾಗಲಿರುವ ತಮ್ಮ ಜಾಗದ ದಾಖಲೆ ಸಲ್ಲಿಸಿ ಎಂಸಿಸಿ ಯಿಂದ ಟಿಡಿಆರ್ (ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು) ಪಡೆದುಕೊಳ್ಳಬೇಕು. ಉತ್ತಮ ಮೊತ್ತಕ್ಕೆ ಟಿಡಿಆರ್ ಅನ್ನು ಮಾರುವ ವ್ಯವಸ್ಥೆಯಿದೆ, ಎಂದರು.
ಸೂರ್ಯನಾರಾಯಣ ದೇವಸ್ಥಾನ ರಸ್ತೆ ಯೋಜನೆಯ ಬಗ್ಗೆ ಅಧಿಕಾರಿಗಳಿಗೂ ಸೂಚನೆ ನೀಡಿದ ಅವರು, ಮಾರ್ಕಿಂಗ್ ಮಾಡುವಾಗ ಜನರಿಗೆ ಮಾಹಿತಿ ನೀಡಿ. ಜನರಿಗೆ ತೊಂದರೆಯಾದರೆ ನಾವು ಜನರೊಂದಿಗೆ ನಿಲ್ಲುತ್ತೇವೆ. ಜನರಿಗೆ ಟಿಡಿಆರ್ ಬಗ್ಗೆ ಮಾಹಿತಿ ನೀಡಿ. ಕಾಂಪೌಂಡ್ ಕಟ್ಟಬೇಕಾಗಿ ಬಂದಾಗ ಪೂರ್ವಭಾವಿ ಮಂಜೂರಾತಿ ಮಾಡಿಕೊಡಿ, ಎಂದರು.
ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಸೂರ್ಯನಾರಾಯಣ ದೇವಸ್ಥಾನ ರಸ್ತೆ ನವೀಕರಣ ಪ್ರತಿ ವರ್ಷ ಪಾಲಿಕೆ ಮುಂದೆ ಬಂದಾಗಲೂ ಸ್ಥಳೀಯ ಸಮಸ್ಯೆಯಿಂದ ಯೋಜನೆ ಜಾರಿ ಸಾಧ್ಯವಾಗುತ್ತಿಲ್ಲ. ಈಗ ಒಂದು ಸೆನ್ಸ್ ಜಾಗಕ್ಕೆ ಎರಡು ಸೆನ್ಸ್ನ ಟಿಡಿಆರ್ ನೀಡಲಾಗುತ್ತಿದೆ. ಜಾಗದ ಬೆಲೆಯೂ ಏರುತ್ತಿರುವುದರಿಂದ ಜನರು ಗಾಬರಿಯಾಗದೆ, ಸಹಕರಿಸಬೇಕಾಗಿದೆ, ಎಂದರು.
ಈ ಸಂದರ್ಭದಲ್ಲಿ ಸ್ಥಳೀಯರು ತಮ್ಮ ಅಹವಾಲು ಹಂಚಿಕೊಂಡರು. ಎಂಸಿಸಿ ವಿರೋಧ ಪಕ್ಷದ ನಾಯಕ ಪ್ರವೀಣ್ ಚಂದ್ರ ಆಳ್ವ ಟಿ, ಮರೋಳಿ ಕಾರ್ಪೊರೇಟರ್ ಕೇಶವ್ ಬಂಗೇರ, ಕಂಕನಾಡಿ-ವೆಲೆನ್ಸಿಯಾ ಕಾರ್ಪೊರೇಟರ್ ಸಂದೀಪ್, ಅಧಿಕಾರಿಗಳು, ದೇವಸ್ಥಾನ ಸಮಿತಿ, ಚರ್ಚ್ ಸಮಿತಿ ಸದಸ್ಯರು, ನಾಗರಿಕರು ಹಾಜರಿದ್ದರು.
Click this button or press Ctrl+G to toggle between Kannada and English