ಕಾರ್ಕಳದಲ್ಲಿ ರಾಜಕೀಯ ಅಸ್ತಿತ್ವವೇ ಇಲ್ಲದೆ ಕಂಗಾಲಾಗಿರುವ ಕಾಂಗ್ರೆಸ್ ನಿಂದ ದಾಂಧಲೆ – ನವೀನ್ ನಾಯಕ್

8:48 PM, Sunday, July 14th, 2024
Share
1 Star2 Stars3 Stars4 Stars5 Stars
(5 rating, 1 votes)
Loading...

ಕಾರ್ಕಳ : ಯಾವ ವೇದಿಕೆಯಲ್ಲಿ ಯಾವ ವಿಚಾರ ಪ್ರಸ್ತಾಪ ಮಾಡಬೇಕೆಂಬ ಪರಿಜ್ಞಾನವಿಲ್ಲದ ಕಾರ್ಕಳ ಕಾಂಗ್ರೆಸ್, ಕಾರ್ಕಳದಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ದಾಂಧಲೆ ನಡೆಸಿ ತಾಲೂಕಿನ ಜನರಿಗೆ ಘೋರ ಅನ್ಯಾಯ ಎಸಗಿದೆ. ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ನೀಡದಂತೆ ತಡೆದಿರುವುದು ಅಕ್ಷಮ್ಯ. ಕಾರ್ಕಳದ ಜನತೆ ಈ ಕಾಂಗ್ರೆಸ್ಸನ್ನು ಯಾವತ್ತಿಗೂ ಕ್ಷಮಿಸಲಾರರು ಎಂದು ಬಿಜೆಪಿಯ ಕಾರ್ಕಳ ಮಂಡಲ ಅಧ್ಯಕ್ಷ ನವೀನ್ ನಾಯಕ್ ಆರೋಪಿಸಿದ್ದಾರೆ.

ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ನೀಡುವ ಸದುದ್ದೇಶವನ್ನಿಟ್ಟುಕೊಂಡು, ಮಾನ್ಯ ಜಿಲ್ಲಾಧಿಕಾರಿ ಹಾಗೂ ಮಾನ್ಯ ಶಾಸಕರ ಉಪಸ್ಥಿತಿಯಲ್ಲಿ ಜನರ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಜನಸ್ಪಂಧನಾ ಸಭೆಯಲ್ಲಿ ಕಾಂಗ್ರೆಸ್ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಂದಿರುವುದು ಕಾಂಗ್ರೆಸ್ಸಿನ ನೀಚ ಮನಸ್ಥಿತಿಯನ್ನು ಪ್ರದರ್ಶಿಸುತ್ತದೆ. ಕಾಂಗ್ರೆಸ್ಸಿಗೆ ಜನರ ಸಾಮಾನ್ಯರ ಸಮಸ್ಯೆಗಳ ಬಗ್ಗೆ ಕಾಳಜಿಯೆ ಇಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತಿದೆ ಎಂದಿದ್ದಾರೆ

ಅದೆಷ್ಟೋ ವರ್ಷಗಳಿಂದ ಕಾರ್ಕಳದಲ್ಲಿ ರಾಜಕೀಯ ಅಸ್ತಿತ್ವವೇ ಇಲ್ಲದೆ ಕಂಗಾಲಾಗಿರುವ ಕಾಂಗ್ರೆಸ್, ಯಾವುದೇ ಒಳ್ಳೆಯ ಯೋಚನೆ, ಯೋಜನೆಗಳಿಲ್ಲದೆ ತಾನೇ ಸೃಷ್ಟಿಸಿದ ಸುಳ್ಳು ಆರೋಪಕ್ಕೆ ಪದೇ ಪದೇ ಜೋತು ಬೀಳುತ್ತಿರುವುದು ವಿಪರ್ಯಾಸ.

ರಾಜಕೀಯ ದುರುದ್ದೇಶದಿಂದ ಪರಶುರಾಮ ಥೀಮ್ ಪಾರ್ಕ್ ವಿಚಾರವಾಗಿ ಕಾಂಗ್ರೆಸ್ ತಾನೇ ಮಾಡಿರುವ ಸುಳ್ಳು ಆರೋಪನವನ್ನು, ರಾಜ್ಯದಲ್ಲಿ ತಮ್ಮದೇ ಕಾಂಗ್ರೆಸ್ ಸರಕಾರವಿದ್ದರೂ, ಉಡುಪಿ ಜಿಲ್ಲೆಯ ಉಸ್ತುವಾರಿಯಾಗಿ ತಮ್ಮದೇ ಸಚಿವೆ ಇದ್ದರೂ, ಸುಳ್ಳು ಆರೋಪವನ್ನು ಸಾಬೀತು ಮಾಡಲಾಗದ ಕಾರ್ಕಳ ಕಾಂಗ್ರೆಸ್ ತನ್ನ ಮಾನ ಉಳಿಸಿಕೊಳ್ಳಲು ಪ್ರತಿಭಟನೆ ಹೋರಾಟಗಳ ಬೀದಿನಾಟಕ ಮಾಡುತ್ತಿರುವುದು ಕಾರ್ಕಳದ ಜನತೆಗೆ ಈಗಾಗಲೇ ಅರ್ಥವಾಗಿದೆ.

ಕಾಮಾಲೆ ಕಣ್ಣಿಗೆ ಇಡೀ ಪ್ರಪಂಚವೇ ಹಳದಿಯಾಗಿ ಕಾಣಿಸುವಂತೆ ಶುಭೋದ್ ರಾವ್ ಗೆ ಎಲ್ಲರೂ ತನ್ನಂತೆಯೇ ಎಂಬ ಭಾವನೆ ಇದೆ. ತಹಶೀಲ್ದಾರರಿಂದ ಶಾಸಕರು ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪ ಮಾಡುತ್ತಿರುವ ಕಾಮಾಲೆ ಕಣ್ಣಿನ ಶುಭೋದ್ ರಾವ್, ತಾಕತ್ತಿದ್ದರೆ ಆ ತಹಶೀಲ್ದಾರ್ ಯಾರು ಎಂದು ಹೆಸರನ್ನು ಬಹಿರಂಗಪಡಿಸಲಿ ಹಾಗೂ ಅದನ್ನು ಸಾಬೀತುಪಡಿಸಲಿ.

ಕಾಂಗ್ರೆಸ್ ತನ್ನ ಇಂತಹ ಜನ ವಿರೋಧಿ ಕೃತ್ಯಗಳಿಂದ, ಸುಳ್ಳು ಹೇಳಿಕೆಗಳಿಂದ ಜನರ ಮನಸ್ಸಿನಲ್ಲಿ ಇನ್ನಷ್ಟು ಕೀಳು ಮಟ್ಟಕ್ಕೆ ಇಳಿಯಲಿದೆ ಎಂದಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ನೀರಿನಿಂದ ಹೊರ ತೆಗೆದ ಮೀನಿನಂತಾಗಿರುವಾಗ ಕಾರ್ಕಳ ಕಾಂಗ್ರೆಸ್,
ಕಾರ್ಕಳದಲ್ಲಿ ಕಾಂಗ್ರೆಸ್ ಅಧಿಕಾರವಿಲ್ಲದಿದ್ದರೂ ರಾಜ್ಯ ಸರಕಾರದ ಹೆಸರು ಹೇಳಿಕೊಂಡು ಕಾರ್ಕಳದಲ್ಲಿ ಹಿಡಿತ ಸಾಧಿಸುವ ಪ್ರಯತ್ನ ಮಾಡುತ್ತಿದೆ. ಕಾರ್ಕಳ ಕಾಂಗ್ರೆಸ್ ತನ್ನ ಗೂಂಡಾ ವರ್ತನೆಯನ್ನು ತೋರುತ್ತಿರುವುದು ಜನ ಸಾಮಾನ್ಯರ ಮೇಲೆ ಮಾತ್ರವಲ್ಲ, ಒಂದೆಡೆ ವರ್ಗಾವಣೆ ಮಾಡುವುದಾಗಿ ಅಧಿಕಾರಿಗಳಿಗೆ ಕಿರುಕುಳ ನೀಡಿ ಬೆದರಿಸಿ, ಅಧಿಕಾರಿಗಳನ್ನು ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದೆ, ಮತ್ತೊಂದೆಡೆ ಬಿಜೆಪಿ ಕಾರ್ಯಕರ್ತರನ್ನು ವೈಯಕ್ತಿಕವಾಗಿ ಗುರಿಯಾಗಿಸಿ ಕಾರ್ಯಕರ್ತರ ವ್ಯಾಪಾರ ಉದ್ಯಮಗಳಿಗೆ ನಿರಂತರ ತೊಂದರೆಗಳನ್ನು ನೀಡುತ್ತಾ ಕಾರ್ಕಳದಲ್ಲಿ ಕಾಂಗ್ರೆಸ್ ತನ್ನ ಗೂಂಡಾ ರಾಜ್ಯ ಸ್ಥಾಪಿಸಲು ಹೊರಟಿರುವುದು ಆಘಾತಕಾರಿ ಹಾಗೂ ಬಹಳ ಆತಂಕಕಾರಿ ವಿಚಾರ.

ಕಾರ್ಕಳ ಕಾಂಗ್ರೆಸ್ಸಿನ ಜನವಿರೋಧಿ ನಡೆಯನ್ನು ಹಾಗೂ ಗೂಂಡಾ ವರ್ತನೆಯನ್ನು ಕಾರ್ಕಳ ಬಿಜೆಪಿ ಬಲವಾಗಿ ಖಂಡಿಸುತ್ತದೆ ಎಂದು ಹೇಳಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English