“ ಬೀಚ್ ಫೆಸ್ಟಿವಲ್ ನಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ -ಮೇಯರ್ ಸುಧೀರ್ ಶೆಟ್ಟಿ

9:17 PM, Sunday, July 14th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : “ತಪಸ್ಯ ಫೌಂಡೇಶನ್” ವತಿಯಿಂದ ನಡೆಯಲಿರುವ ಮಂಗಳೂರು ಟ್ರಿಯಾಥ್ಲನ್‌, ಬೀಚ್‌ ಫೆಸ್ಟಿವಲ್‌ ಉದ್ಘಾಟನೆ ಕಾರ್ಯಕ್ರಮ ಆದಿತ್ಯವಾರ ಸಂಜೆ ನಗರದ ಟಿಎಂಎ ಪೈ ಸ್ಟಾರ್‌ ಕಾನ್ಫರೆನ್ಸ್ ಹಾಲ್‌ನಲ್ಲಿ ಜರುಗಿತು. ಅತಿಥಿಗಳು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಬಳಿಕ ಮಾತಾಡಿದ ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರು, “ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದೃಷ್ಟಿಯಿಂದ ಮಂಗಳೂರು ಟ್ರಿಯಾಥ್ಲನ್ ಹಾಗೂ ಮಂಗಳೂರು ಬೀಚ್ ಫೆಸ್ಟಿವಲ್ ಕಾರ್ಯಕ್ರಮ ಆಯೋಜನೆಯಾಗಿದೆ. ಮಕ್ಕಳಲ್ಲಿ ಕ್ಯಾನ್ಸರ್ ರೋಗದ ಕುರಿತು ಜಾಗೃತಿ ಮೂಡಿಸುತ್ತಿರುವ ತಪಸ್ಯ ಫೌಂಡೇಶನ್ ಸಾರ್ಥಕ ಕೆಲಸವನ್ನು ಮಾಡುತ್ತಿದೆ. ಸಂಘಟನೆ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಮಂಗಳೂರನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ. ಕ್ಯಾನ್ಸರ್ ಪೀಡಿತ ಮಕ್ಕಳ ಆರೈಕೆಗೆ 100 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸುತ್ತಿರುವ ಸಂಘಟನೆಯ ಜೊತೆಗೆ ಮಹಾನಗರ ಪಾಲಿಕೆ ನಿರಂತರ ಸಹಕಾರ ನೀಡಲಿದೆ” ಎಂದರು.

ಮಂಗಳೂರು ಸಂಸದ ಕ್ಯಾ. ಬೃಜೇಶ್ ಚೌಟ ಮಾತಾಡಿ, “ತಪಸ್ಯ ಫೌಂಡೇಶನ್ ಮಾಡುತ್ತಿರುವ ಕಾರ್ಯ ನಿಜವಾದ ತಪಸ್ಸು. ನೀವು ಮಾಡುತ್ತಿರುವ ಕೆಲಸ ದೇವರ ಕೆಲಸವಾಗಿದೆ. ಸಂಘಟನೆ ಮಾಡುವ ಈ ಕಾರ್ಯದಲ್ಲಿ ಇಡೀ ಮಂಗಳೂರಿನ ಜನರು ಪಾಲ್ಗೊಳ್ಳಬೇಕು. ತುಳುನಾಡಿನಲ್ಲಿ ಒಳ್ಳೆಯ ಕೆಲಸ ಮಾಡಿದರೆ ದೈವ ದೇವರ ಸಹಕಾರ ಖಂಡಿತ ಇದ್ದೇ ಇರುತ್ತದೆ. ನಾನು ನಿಮ್ಮ ಎಲ್ಲ ಪ್ರಯತ್ನಗಳಿಗೆ ಜೊತೆಗೂಡಿ ಸಹಕಾರ ನೀಡುತ್ತೇನೆ“ ಎಂದರು.

ಡಾ.ವಿಜಯ್ ಕುಮಾರ್ ಮಾತನಾಡಿ, “ತಪಸ್ಯ ಫೌಂಡೇಶನ್ ಸಮಾಜದಲ್ಲಿ ಶ್ಲಾಘನೀಯ ಕೆಲಸ ಮಾಡುತ್ತಿದೆ. ಕ್ಯಾನ್ಸರ್ ರೋಗಿಗಳ ಆರೈಕೆಯಲ್ಲಿ ತೊಡಗಿಕೊಂಡಿರುವ ಫೌಂಡೇಶನ್ ಗೆ ಯೇನಪೋಯ ಆಸ್ಪತ್ರೆ ಸಹಕಾರ ನೀಡುತ್ತಾ ಬಂದಿದೆ. ಮುಂದೆಯೂ ಇದೇ ರೀತಿ ಸಂಘಟನೆಯ ಜೊತೆ ಕೆಲಸ ಮಾಡಲಿದೆ. ಕ್ಯಾನ್ಸರ್ ರೋಗಿಗಳ ಆರೈಕೆಗಾಗಿ ಪ್ಯಾಲೇಟಿವ್ ಕೇರ್ ಇಂದಿನ ಕಾಲದಲ್ಲಿ ಅಗತ್ಯವಿದೆ. ಇದರಲ್ಲಿ ನಿರತ ಸಂಘಟನೆಯ ಎಲ್ಲರಿಗೂ ಅಭಿನಂದನೆಗಳು“ ಎಂದರು.

ಇದೇ ಸಂದರ್ಭದಲ್ಲಿ 52ನೇ ವಯಸ್ಸಿನಲ್ಲಿ ಮೌಂಟ್ ಏವರೆಸ್ಟ್ ಶಿಖರ ಏರಿರುವ ಕರ್ನಾಟಕದ ಮೊದಲ ಮಹಿಳೆ ಡಾ. ಉಷಾ ಹೆಗ್ಡೆ ಅವರನ್ನು ಅತಿಥಿಗಳು ಸನ್ಮಾನಿಸಿದರು.

ಕಾರ್ಯಕ್ರಮದ ಟಿ ಶರ್ಟ್, ಮೆಡಲ್, ಬ್ಯಾಡ್ಜ್ ಅನಾವರಣಗೊಳಿಸಿದರು.

ವೇದಿಕೆಯಲ್ಲಿ ಮಂಗಳೂರು ಸಂಸದ ಬೃಜೇಶ್ ಚೌಟ, ಐಡಿಎಫ್‌ಸಿ ಬ್ಯಾಂಕಿನ ರೀಜನಲ್ ಹೆಡ್ ಶರಣ್ ರಜನಿ, ಎನ್ ಐಟಿಕೆ ಡೀನ್ ಎ.ಸಿ. ಹೆಗ್ಡೆ, ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಯೇನಪೋಯ ವಿವಿಯ ವೈಸ್‌ ಚಾನ್ಸೆಲರ್‌ ಡಾ। ವಿಜಯ ಕುಮಾರ್, ಇಂಡಿಯನ್ ಟ್ರಿಯಾಥ್ಲನ್ ಫೆಡರೇಷನ್ ಅಭಿವೃದ್ಧಿ ಅಧಿಕಾರಿ ಹರೀಶ್ ಪ್ರಸಾದ್, ರಾಜ್ಯ ರಸ್ಲಿಂಗ್ ಫೆಡರೇಷನ್ ಅಧ್ಯಕ್ಷ ಗುಣರಂಜನ್ ಶೆಟ್ಟಿ, ಶರಣ್ ರಜನಿ, ಸಂದೇಶ್ ಹೆಗ್ಡೆ, ನರಸಿಂಹ ಹೆಗ್ಡೆ, ಕೆಎಂಸಿ ಆಸ್ಪತ್ರೆಯ ಹರ್ಷ ಪ್ರಸಾದ್‌ ಮತ್ತಿತರರು ಉಪಸ್ಥಿತರಿದ್ದರು.

ತಪಸ್ಯ ಫೌಂಡೇಶನ್ ಮೆನೇಜಿಂಗ್ ಟ್ರಸ್ಟಿ ಸಬಿತಾ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English