ಮಂಗಳೂರು : ನಾಗರ ಪಂಚಮಿ ಹಬ್ಬವನ್ನು ನಾಡಿನೆಲ್ಲೆಡೆ ಭಕ್ತಿ ಶ್ರದ್ಧೆಯಿಂದ ಆಚರಿಸಲಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಸೇರಿದಂತೆ ಎಲ್ಲೆಡೆ ನಾಗರಾಧನೆ ಶೃದ್ಧಾ ಭಕ್ತಿಯಿಂದ ನಡೆಯುತ್ತಿದ್ದು, ಕುಡುಪು ಆನಂತ ಪದ್ಮನಾಭ ದೇವಸ್ಥಾನ, ಕುಕ್ಕೆ ಸುಬ್ರಹ್ಮಣ್ಯ, ಶರವು ಮಹಾಗಣಪತಿ ದೇವಸ್ಥಾನ, ಮಂಗಳಾದೇವಿ ದೇವಸ್ಥಾನ, ಮೊದಲಾದೆಡೆ ಭಕ್ತರು ಬೆಳಗ್ಗಿನಿಂದಲೇ ಹಾಲಿನ ಅಭಿಷೇಕ, ಸೀಯಾಳ ಅಭಿಷೇಕ ಕೈಗೊಂಡರು.
ಇಂದು ನಾಗಾರಾಧನೆ ಕುಟುಂಬದ ಮೂಲ ನಾಗಬನಗಳಲ್ಲಿಯೂ ನಡೆಯುತ್ತಿದ್ದು ಮುಂಜಾನೆಯಿಂದಲೇ ಜನರು ತೆರಳಿ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆಯುತ್ತಿದ್ದಾರೆ.
ನಾಗರಾಧನೆ ಕ್ಷೇತ್ರಗಳಲ್ಲಿ ಸಾವಿರಾರು ಭಕ್ತರು ನಾಗ ದೇವರಿಗೆ ಹಾಲಿನ ಅಭಿಷೇಕ, ಸೀಯಾಳ ಅಭಿಷೇಕ ಕೈಗೊಂಡರು.
ಕರಾವಳಿಯಲ್ಲಿ ನಾಗರ ಪಂಚಮಿಯಂದು ಎಲ್ಲರೂ ತಮ್ಮ ಪೂರ್ವಜರಿಂದ ಬಂದ ಕುಟುಂಬದ ಮೂಲ ನಾಗಬನಗಳಿಗೆ ತೆರಳಿ ತನು ಅರ್ಪಿಸುವ ಪದ್ಧತಿ ಈ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಪವಿತ್ರ ದಿನದಂದು ಹಾಲು, ಸೀಯಾಳಗಳನ್ನು ನಾಗದೇವರಿಗೆ ಸಮರ್ಪಿಸುತ್ತಾರೆ. ಪ್ರತಿ ನಾಗಬನದಲ್ಲಿಯೂ ದೇವರಿಗೆ ತನು ಅರ್ಪಿಸಲು ಬರುವ ಭಕ್ತರು ತಂಬಿಲ ಸೇವೆಗಳನ್ನು ನಡೆಸುತ್ತಾರೆ.
ನಾಗರಪಂಚಮಿ ದಿನದಂದು ನಾಗರಮೂರ್ತಿಗಳನ್ನು ಶುದ್ಧ ನೀರಿನಿಂದ ತೊಳೆದು, ಹಾಲು ಸೀಯಾಳದ ಅಭಿಷೇಕ ಮಾಡಲಾಗುತ್ತದೆ. ಅರಶಿಣ ಹಚ್ಚಿ, ನಾಗನಿಗೆ ಪ್ರಿಯವಾದ ಕೇದಗೆ, ಸಂಪಿಗೆ, ಅಡಕೆ ಸಿಂಗಾರದಿಂದ ಅಲಂಕರಿಸಲಾಗುತ್ತದೆ. ಬಳಿಕ ಅರಳು, ಬೆಲ್ಲ, ಬಾಳೆಹಣ್ಣಿನ ನಾಗತಂಬಿಲ ಅರ್ಪಿಸಲಾಗುತ್ತದೆ. ತನು ಅರ್ಪಿಸುವುದೆಂದರೆ ತಂಪು ಮಾಡುವುದೆಂದು ಅರ್ಥ. ಇಲ್ಲಿ ನಾಗರಕಲ್ಲಿಗೆ ಅರ್ಪಿಸಿದ ಹಾಲು, ಸೀಯಾಳ ಭೂಮಿಯ ಒಡಲು ಸೇರಿ ತಂಪು ಮಾಡುತ್ತದೆ. ಜೊತೆಗೆ ಮಳೆ ನೀರಿನೊಂದಿಗೆ ಹಾಲು – ಸೀಯಾಳ ಕಡಲು ಸೇರುತ್ತದೆ ಎಂಬ ನಂಬಿಕೆ ಇದೆ.
Click this button or press Ctrl+G to toggle between Kannada and English