ಉಡುಪಿ : ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಕೊಲೆ ಆಗಿರುವ ವಾಸುದೇವ ಅಡಿಗರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಆರೋಪಿಗಳ ಬಂಧನವಾಗಿದ್ದು, ಇನ್ನಿಬ್ಬರನ್ನು ಬಂಧಿಸಬೇಕಾಗಿದೆ, ಪ್ರಮುಖ ಆರೋಪಿ ರಮೇಶ ಬಾಯರಿ ಮತ್ತು ಇನ್ನೊಬ್ಬ ತಲೆಮರೆಸಿಕೊಂಡಿದ್ದಾರೆ. ಕುಂದಾಪುರ ಡಿವೈಎಸ್‌ಪಿ ಯಶೋದಾ ಎಸ್.ಒಂಟ ಗೋಡಿ ಪ್ರಕರಣದ ತನಿಖೆಯನ್ನು ಮುಂದುವರಿಸಲಿದ್ದಾರೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಎಂ.ಬಿ.ಬೋರಲಿಂಗಯ್ಯ ತಿಳಿಸಿದರು. ಈ ಬಗ್ಗೆ ಅವರು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ಸೋಮವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬೈಂದೂರು ಸಿಪಿಐ ಅರುಣ್ ನಾಯಕ್ ನೇತೃತ್ವದ ತಂಡ ಜನವರಿ 17ರಂದು ಬೆಂಗಳೂರಿನಲ್ಲಿ ಆರೋಪಿಗಳಾದ ಉಮೇಶ, ನವೀನ ಹಾಗೂ ಕೆ.ಎಸ್. ರಾಘವೇಂದ್ರ ಅವರನ್ನು ಬಂಧಿಸಿದೆ. ಇನ್ನೋರ್ವ ಸೂತ್ರಧಾರ ಸುಬ್ರಹ್ಮಣ್ಯ ಉಡುಪನನ್ನು 18ರಂದು ಕಡೂರಿನಲ್ಲಿ ಸಿಪಿಐ ಮಾರುತಿ ಜಿ. ನಾಯಕ್ ತಂಡ ಬಂಧಿಸಿತ್ತು. ಗಂಗೊಳ್ಳಿ ಪಿಎಸ್‌ಐ ಸಂಪತ್ ಕುಮಾರ್ ನೇತೃತ್ವದ ತಂಡವು ಜನವರಿ 19ರಂದು ಇನ್ನಿಬ್ಬರು ಆರೋಪಿಗಳಾದ ಬೆಂಗಳೂರಿನ ಮೋಹನ್ ಕುಮಾರ್ ಹಾಗೂ ವಕೀಲ ರವಿಚಂದ್ರ ಅವರನ್ನು ಬಂಧಿಸಿದೆ.
ಪ್ರಮುಖ ಆರೋಪಿಯಾದ ರಮೇಶ ಬಾಯರಿ ಹಾಗೂ ವಾಸುದೇವ ಅಡಿಗ ಅವರ ನಡುವೆ ಇದ್ದ ಜಾಗದ ತಕರಾರಿನ ಸಂಬಂಧ ಅಡಿಗರು ಮೇಲುಗೈ ಸಾಧಿಸುತ್ತಾ ಹೋಗುತ್ತಿರುವುದನ್ನು ಕಂಡ ರಮೇಶ ಬಾಯರಿಯು ಅಡಿಗರ ಕೊಲೆ ನಡೆಸಲು ಉದ್ದೇಶಿಸಿದ್ದ. ಅದಕ್ಕಾಗಿ ತನ್ನಲ್ಲಿಗೆ ಜ್ಯೋತಿಷ್ಯ ಕೇಳಲು ಬರುತ್ತಿದ್ದ ಬೆಂಗಳೂರಿನ ಮಂದಿಯನ್ನು ಗೊತ್ತುಪಡಿಸಿದ್ದ. ಇದೊಂದು ವೈಯಕ್ತಿಕ ದ್ವೇಷದ ಕೊಲೆ ಎನ್ನುವುದು ಸಾಬೀತಾಗಿದೆ. ಆದರೂ ಅಡಿಗರು ಆರ್‌ಟಿಐ ಕಾರ್ಯಕರ್ತರಾಗಿರುವ ಕಾರಣ ಇತರೇ ಆಯಾಮಗಳಲ್ಲಿಯೂ ನಿಷ್ಪಕ್ಷ ತನಿಖೆ ನಡೆಯುತ್ತಿದೆ. ತನಿಖೆಯ ವೇಳೆ ಮತ್ತಷ್ಟು ಆರೋಪಿಗಳು ಸೇರ್ಪಡೆಗೊಳ್ಳಬಹುದು ಎಂದು ಎಸ್‌ಪಿ ಹೇಳಿದರು.
ಪ್ರಕರಣದ ತನಿಖೆಗೆ ಸಂಬಂಧಪಟ್ಟಂತೆ ಸ್ಥಳೀಯವಾಗಿ ತಿರುಗಾಡುತ್ತಿದ್ದ ಬೆಂಗಳೂರು ನೋಂದಣಿಯ ವಾಹನ ಮತ್ತು ಇತರೇ ಹೆಚ್ಚಿನ ಪ್ರಾಥಮಿಕ ಮಾಹಿತಿಗಳು ಸಾರ್ವಜನಿಕರ ಸಹಕಾರದಿಂದ ತಿಳಿದುಬಂದಿದ್ದು. ಅಧಿಕಾರಿಗಳ ಕಠಿನ ಶ್ರಮ, ತಾಂತ್ರಿಕತೆಯೊಂದಿಗೆ ಸಾರ್ವಜನಿಕರು ಸಹಕರಿಸಿದಲ್ಲಿ ಯಾವುದೇ ಪ್ರಕರಣ ಭೇದಿಸಲು ಇಲಾಖೆಗೆ ಕಷ್ಟವಾಗದು,ಶವ ಪತ್ತೆಯಾಗುವವರೆಗೂ ಊರಿನಲ್ಲಿಯೇ ಇದ್ದ ರಮೇಶ್ ಬಾಯರಿ ಮರುದಿನ ಬೆಳಗ್ಗೆಯಿಂದಲೇ ನಾಪತ್ತೆಯಾಗಿದ್ದಾನೆ ಇದುವರೆಗೂ ಪತ್ತೆಯಾಗಿಲ್ಲ ಎಂದು ಅವರು ಹೇಳಿದರು.
ತನಿಖೆಯ ಮುಂದಾಳತ್ವ ವಹಿಸಿದ್ದ ಡಿವೈಎಸ್‌ಪಿ ಯಶೋದಾ ಎಸ್. ವಂಟಗೋಡಿ, ಇನ್ಸ್‌ಪೆಕ್ಟರ್‌ಗಳಾದ ಉಡುಪಿಯ ಮಾರುತಿ ಜಿ. ನಾಯಕ್, ಬೈಂದೂರಿನ ಅರುಣ್ ನಾಯಕ್, ಕುಂದಾಪುರದ ಮಂಜುನಾಥ ಕೌರಿ, ಡಿಸಿಐಬಿಯ ಪ್ರವೀಣ್ ಎಚ್. ನಾಯಕ್, ವಿಶೇಷ ತಂಡದ ಎಸ್‌ಐ ಮಹೇಶ್ ಪ್ರಸಾದ್, ಗಂಗೊಳ್ಳಿ ಎಸ್‌ಐ ಸಂಪತ್ ಕುಮಾರ್, ಶಂಕರನಾರಾಯಣ ಎಸ್‌ಐ ದೇಜಪ್ಪ ಪತ್ರಿಕಾಗೋಷ್ಠಿಯಲ್ಲಿದ್ದರು.
Click this button or press Ctrl+G to toggle between Kannada and English