ಕಾರ್ಕಳ : ರಾಜ್ಯದ ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರದ ಅವಧಿಯ 2022-23ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮಂಜೂರಾತಿ ನೀಡಿ ಬಿಡುಗಡೆ ಮಾಡಿದ್ದ ಸುಮಾರು ರೂ.75.00 ಕೋಟಿಗೂ ಅಧಿಕ ಮೊತ್ತದ ಅನುದಾನವನ್ನು ಈಗಿನ ಕಾಂಗ್ರೆಸ್ ಸರ್ಕಾರ ತಡೆ ಹಿಡಿದಿದ್ದು, ತಡೆ ಹಿಡಿದಿರುವ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಕಾರ್ಕಳ ಶಾಸಕರು ಹಾಗೂ ಮಾಜಿ ಸಚಿವರಾದ ವಿ ಸುನಿಲ್ ಕುಮಾರ್‌ರವರು ಮುಖ್ಯಮಂತ್ರಿಯವರನ್ನು ಆಗ್ರಹಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆ, ಲೋಕೋಪಯೋಗಿ ಇಲಾಖೆ, ಬೃಹತ್ ನೀರಾವರಿ ಇಲಾಖೆ (ವಾರಾಹಿ), ಪ್ರವಾಸೋದ್ಯಮ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಇಂಧನ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸೇರಿದಂತೆ ಇತರ ಇಲಾಖೆಗಳಿಂದ ಮಂಜೂರಾತಿಯಾದ ಕಾಮಗಾರಿಗಳ ಪೈಕಿ ಕೆಲವು ಕಾಮಗಾರಿಗಳು ಆಡಳಿತಾತ್ಮಕ ಅನುಮೋದನೆ ಆಗಿದ್ದು, ಕೆಲವು ಕಾಮಗಾರಿಗಳು ಟೆಂಡರ್ ಪ್ರಕ್ರಿಯೆ ಮುಗಿದಿರುತ್ತದೆ, ಕೆಲವು ಟೆಂಡರ್ ಆಗಿ ಎಗ್ರೀಮೆಂಟ್ ಹಂತದಲ್ಲಿದ್ದವು.
ಆದರೆ 2023ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಎಲ್ಲಾ ಕಾಮಗಾರಿಗಳ ಅನುದಾನವನ್ನು ತಡೆಹಿಡಿದಿದ್ದು, ಇದರಿಂದಾಗಿ ಕ್ಷೇತ್ರದ ಮೂಲಭೂತ ಸೌಕರ್ಯ ಸೇರಿದಂತೆ ಇತರ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿರುತ್ತದೆ. ಈ ಕುರಿತು ಹಲವು ಬಾರಿ ಸಂಬಂಧಪಟ್ಟ ಇಲಾಖೆಗಳ ಸಚಿವರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನ ಆಗಿರುವುದಿಲ್ಲ, ತಡೆ ಹಿಡಿದ ಅನುದಾನ ಈವರೆಗೆ ಬಿಡುಗಡೆಯಾಗಿರುವುದಿಲ್ಲ.
ಈ ನಿಟ್ಟಿನಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾತಿಗೊಂಡು ಬಿಡುಗಡೆಯಾಗಿದ್ದ ವಿವಿಧ ಇಲಾಖೆಗಳ ಸುಮಾರು ರೂ 75.00 ಕೋಟಿಗೂ ಅಧಿಕ ಮೊತ್ತದ ಬಾಕಿ ಅನುದಾನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹಿಸಿರುತ್ತಾರೆ.
Click this button or press Ctrl+G to toggle between Kannada and English