“ಸಿದ್ದರಾಮಯ್ಯ ರಾಜೀನಾಮೆ ಕೊಡುವ ತನಕ ಹೋರಾಟ ನಿರಂತರ” -ವೇದವ್ಯಾಸ ಕಾಮತ್

9:17 PM, Tuesday, August 20th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು: “ಮೈಸೂರು ಮುಡಾ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ವಿಚಾರಣೆಗೆ ರಾಜ್ಯಪಾಲರು ಅನುಮತಿ ನೀಡಿದ್ದು ನಿಷ್ಪಕ್ಷಪಾತ ತನಿಖೆಗೆ ಅನುಕೂಲವಾಗುವಂತೆ ಕೂಡಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು“ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಪತ್ರಿಕಾಗೋಷ್ಟಿಯಲ್ಲಿ ಒತ್ತಾಯಿಸಿದ್ದಾರೆ.

”ಸಂವಿಧಾನದ ರಕ್ಷಣೆ ತಮ್ಮಿಂದ ಮಾತ್ರ ಎಂದು ಹೇಳಿಕೊಂಡು ಓಡಾಡುತ್ತಿರುವ ಕಾಂಗ್ರೆಸಿಗರು ಪ್ರತಿಭಟನೆ ನೆಪದಲ್ಲಿ ರಾಜ್ಯದೆಲ್ಲೆಡೆ ಗಲಭೆ ನಡೆಸುತ್ತಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಯಾರೇ ಮಾತಾಡಿದರೂ ಅವರು ಸರಿಯಿಲ್ಲ ಅವರು ಬಿಜೆಪಿ ಏಜೆಂಟ್ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ರಾಜ್ಯದ ಅತಿದೊಡ್ಡ ಭ್ರಷ್ಟಾಚಾರ ಆಗಿರುವ ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತರಾದ ಟಿ.ಜೆ. ಅಬ್ರಹಾಂ, ಸ್ನೇಹಮಯಿ ಕೃಷ್ಣ, ಪ್ರದೀಪ್ ಕುಮಾರ್ ಸಾಕ್ಷ್ಯಾಧಾರ ಸಮೇತ ದೂರು ನೀಡಿದ್ದು ಎಲ್ಲ ಅಂಶಗಳ ಬಗ್ಗೆ ತಜ್ಞರ ಜೊತೆಗೆ ಪರಿಶೀಲನೆ ನಡೆಸಿಯೇ ರಾಜ್ಯಪಾಲರು ಪ್ರಕರಣದ ವಿಚಾರಣೆಗೆ ಅನುಮತಿ ನೀಡಿದ್ದಾರೆ. ಈ ಹಿಂದೆ ಇದೇ ಸಿದ್ದರಾಮಯ್ಯ ಅವರು ಯಡಿಯೂರಪ್ಪರನ್ನು ಕುರ್ಚಿ ಬಿಟ್ಟು ಕೆಳಕ್ಕಿಳಿಯಿರಿ ಎಂದು ಅಬ್ಬರಿಸಿ ಬೊಬ್ಬೆ ಹಾಕಿದ್ದನ್ನು ಮರೆತಿದ್ದಾರೆಯೇ?“ ಎಂದು ವೇದವ್ಯಾಸ ಕಾಮತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

”ಮಂಗಳೂರಿನ ನಗರಪಾಲಿಕೆ ಮುಂಭಾಗ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಕಾಂಗ್ರೆಸಿಗರು ಬಸ್ಸಿಗೆ ಕಲ್ಲು ತೂರಾಟ ಮಾಡಿ ಟೈರ್ ಗೆ ಬೆಂಕಿ ಕೊಡುವ ಮೂಲಕ ಸಮಾಜದಲ್ಲಿ ಭೀತಿ ಹುಟ್ಟಿಸುವ ಕೆಲಸ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸುವ ಬದಲು ಕಾರಣ ಕೇಳಿ ನೋಟೀಸ್ ಜಾರಿಗೊಳಿಸಿದ್ದಾರೆ. ಇದು ಎಲ್ಲಿಯ ನ್ಯಾಯ? ಇದು ರಾಜಕೀಯ ಪಕ್ಷಗಳು, ಸಾಮಾಜಿಕ ಸಂಘಟನೆಗಳಿಗೆ ಗಲಭೆ ನಡೆಸಲು ಕುಮ್ಮಕ್ಕು ನೀಡಿದಂತಾಗುವುದಿಲ್ಲವೇ? ರಾಜ್ಯದಲ್ಲಿ ತಾಲಿಬಾನ್, ಹಿಟ್ಲರ್ ಮಾದರಿ ಆಡಳಿತವಿದೆಯೇ? ನಮ್ಮ ಹೋರಾಟ ನಿರಂತರವಾಗಿದ್ದು ನಿಯಮ ಬದ್ಧವಾಗಿ ನಿವೇಶನಕ್ಕಾಗಿ ಅರ್ಜಿ ಕೊಟ್ಟು ಕಾಯುತ್ತಿರುವವರಿಗೆ ನ್ಯಾಯ ಸಿಗಬೇಕು. ಅಕ್ರಮವಾಗಿ ಪಡೆದುಕೊಂಡ ಎಲ್ಲ ನಿವೇಶನಗಳನ್ನು ವಾಪಾಸ್ ಕೊಡಬೇಕು. ಮುಖ್ಯಮಂತ್ರಿಗಳು ಕೂಡಲೇ ರಾಜೀನಾಮೆ ಕೊಡಬೇಕು,ಅಲ್ಲಿಯವರೆಗೆ ಬಿಜೆಪಿ ಪ್ರತಿಭಟನೆ ನಿರಂತರವಾಗಿ ನಡೆಯಲಿದೆ“ ಎಂದು ಹೇಳಿದರು.

”ಒಬ್ಬ ಲೋಕಲ್ ಕಾರ್ಪೋರೇಟರ್ ಆಗಿ ಚುನಾವಣೆ ನಿಂತು ಗೆಲ್ಲಲು ಯೋಗ್ಯತೆ ಇಲ್ಲದ ಐವನ್ ಡಿಸೋಜ ವಿಧಾನ ಪರಿಷತ್ ಶಾಸಕರಾಗಿ ಆಯ್ಕೆಯಾಗಿರುವುದಕ್ಕೆ ಮುಖ್ಯಮಂತ್ರಿ ಅವರ ಋಣ ಸಂದಾಯ ಮಾಡಲು ಅಹಿತಕರ ಘಟನೆಯಲ್ಲಿ ಪಾಲ್ಗೊಂಡಿದ್ದಾರೆ“ ಎಂದು ವೇದವ್ಯಾಸ ಕಾಮತ್ ಕಿಡಿಕಾರಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ರಮೇಶ್ ಕಂಡೆಟ್ಟು, ಪ್ರೇಮಾನಂದ ಶೆಟ್ಟಿ, ನಿತಿನ್ ಕುಮಾರ್, ಸಂಜಯ್ ಪ್ರಭು, ಪೂರ್ಣಿಮಾ, ದಿವಾಕರ್ ಪಾಂಡೇಶ್ವರ್, ರಮೇಶ್ ಹೆಗ್ಡೆ, ಅಶ್ವಿತ್ ಕೊಟ್ಟಾರಿ ಮತ್ತಿತರರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English