ಮಂಗಳೂರು : ಹಿಮಾನಿ ಫಿಲಂಸ್ ಬ್ಯಾನರ್ ನಡಿಯಲ್ಲಿ ಸುಮನ್ ಸುವರ್ಣ ನಿರ್ದೇಶನದಲ್ಲಿ ಶರತ್ ಕುಮಾರ್ ಎ.ಕೆ. ನಿರ್ಮಾಣದಲ್ಲಿ ತಯಾರಾದ “ಕಲ್ಜಿಗ” ಸಿನಿಮಾ ಶುಕ್ರವಾರ ಭಾರತ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ತೆರೆಕಂಡಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಹಿರಿಯ ರಂಗಭೂಮಿ ಕಲಾವಿದ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಅವರು, “ಕಲ್ಜಿಗ ಸಿನಿಮಾ ಕುರಿತು ಟೀಕೆ ಟಿಪ್ಪಣಿ ಬರುತ್ತಿದೆ. ಇದನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸೋಣ. ಸಿನಿಮಾ ನೋಡಿದವರು ನಮ್ಮ ತುಳುನಾಡಿನ ದೈವಗಳ ಕಾರಣಿಕವನ್ನು ಚೆನ್ನಾಗಿ ತೋರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನನ್ನ ಪ್ರಕಾರ ಸಿನಿಮಾದಲ್ಲಿ ದೈವಾರಾಧನೆಗೆ ಎಲ್ಲೂ ಅಪಚಾರ ಆಗಿರಲಿಕ್ಕಿಲ್ಲ. ನಾವು ತಪ್ಪು ಮಾಡದೆಯೂ ನಮಗೆ ಅನ್ಯಾಯವಾಗುವುದಾದರೆ ನಾನು ಚಿತ್ರತಂಡದ ಜೊತೆಗೆ ಇದ್ದೇನೆ“ ಎಂದರು.
ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತಾಡಿ, “ಅರ್ಜುನ್ ಕಾಪಿಕಾಡ್ ಅವರು ಅಭಿನಯಿಸಿದ ಸಿನಿಮಾದಲ್ಲಿ ತುಳುನಾಡಿನ ಸಂಸ್ಕೃತಿ, ಸಂಸ್ಕಾರವನ್ನು ಬಿಂಬಿಸುವ ಕೆಲಸ ನಡೆದಿದೆ. ತುಳುನಾಡಿನ ದೈವಗಳ ಪವಾಡವನ್ನು ತೋರಿಸಲಾಗಿದೆ. ನಾವೆಲ್ಲರೂ ಸಿನಿಮಾ ನೋಡಿ ಬೆಂಬಲಿಸಬೇಕು” ಎಂದರು.
ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ನಂದನ್ ಮಲ್ಯ, ಪ್ರಕಾಶ್ ಧರ್ಮನಗರ, ತಮ್ಮ ಲಕ್ಷ್ಮಣ, ಉದ್ಯಮಿ ಗಿರೀಶ್ ಶೆಟ್ಟಿ ಕಟೀಲು, ನಟ ಅರ್ಜುನ್ ಕಾಪಿಕಾಡ್, ನಿರ್ಮಾಪಕ ಶರತ್ ಕುಮಾರ್ ಎ.ಕೆ., ನಿರ್ದೇಶಕ ಸುಮನ್ ಸುವರ್ಣಮತ್ತಿತರರು ಉಪಸ್ಥಿತರಿದ್ದರು.
ಸಿನಿಮಾ ಕುರಿತು:
ಕರಾವಳಿ ಸೀಮೆಯಿಂದ ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಅನೇಕರು ಆಗಮಿಸಿದ್ದಾರೆ. ಗೆಲುವನ್ನೂ ದಾಖಲಿಸಿದ್ದಾರೆ. ಇದೀಗ `ಕಲ್ಜಿಗ’ ಎಂಬ ಚಿತ್ರದ ಮೂಲಕ ಮತ್ತೊಂದು ತಂಡ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದೆ. ಶೀರ್ಷಿಕೆಯಲ್ಲಿಯೇ ಕೌತುಕವನ್ನು ಬೆಸೆದುಕೊಂಡಿದೆ. ಕಲ್ಜಿಗದ ಕಥೆ ಚಿತ್ರಕಥೆ ಸಂಭಾಷಣೆಯನ್ನು ಕೂಡ ನಿರ್ದೇಶಕರೇ ಬರೆದಿದ್ದಾರೆ.
ವಿಶೇಷವೆಂದರೆ, ಬಹು ಕಾಲದ ನಂತರ ನಾದಬ್ರಹ್ಮ ಹಂಸಲೇಖ ಈ ಸಿನಿಮಾ ಮೂಲಕ ಸಂಗೀತ ನಿರ್ದೇಶನಕ್ಕೆ ಮರಳಿದ್ದಾರೆ. ಸಿನಿಮಾಕ್ಕೆ ಪ್ರಸಾದ್ ಕೆ ಶೆಟ್ಟಿ ಹಿನ್ನಲೆ ಸಂಗೀತ ನೀಡಿದ್ದಾರೆ.
ಇನ್ನುಳಿದಂತೆ ಗಿರ್ಗಿಟ್, ಸರ್ಕಸ್, ಗಮ್ಜಾಲ್ ಮುಂತಾದ ಚಿತ್ರಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ ಸುಮನ್ ಸುವರ್ಣ `ಕಲ್ಜಿಗ’ದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ತುಳು ಚಿತ್ರರಂಗದಲ್ಲಿ ಕಿಂಗ್ ಆಫ್ ಆಕ್ಷನ್ ಎಂಬ ಬಿರುದು ಪಡೆದಿರುವ ನಟ ಅರ್ಜುನ್ ಕಾಪಿಕಾಡ್ ಈ ಚಿತ್ರದ ನಾಯಕನಾಗಿ ನಟಿಸಿದ್ದಾರೆ. ಅಪ್ಪಟ ಕನ್ನಡತಿ ಸುಶ್ಮಿತಾ ಭಟ್ ನಾಯಕಿಯಾಗಿ ಜೊತೆಯಾಗಿದ್ದಾರೆ. ಎಸ್. ಕೆ ಗ್ರೂಪ್ ಎಂಬ ಮಾರ್ಕೆಟಿಂಗ್ ಸಂಸ್ಥೆಯ ಮಾಲೀಕರಾಗಿರುವ ಶರತ್ ಕುಮಾರ್ ಎ.ಕೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ನಟರಾದ ಗೋಪಿನಾಥ್ ಭಟ್ , ಜ್ಯೋತಿಷ್ ಶೆಟ್ಟಿ , ಮಾನಸಿ ಸುಧೀರ್ , ವಿಜಯ್ ಶೋಭರಾಜ್ ಪಾವೂರ್ , ಶ್ಲಾಘಾ ಸಾಲಿಗ್ರಾಮ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
Click this button or press Ctrl+G to toggle between Kannada and English