ಉಳ್ಳಾಲ: ಪಿಲಾರು ಬಳಿಯ ಮನೆಯೊಂದರಲ್ಲಿ ಮಹಿಳೆಯ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ ಆಗಿದ್ದು, ಆಕೆಯ ಪತಿಯ ಮೃತದೇಹ ಸಮೀಪದ ತೋಟದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪತ್ನಿಯನ್ನ ಕತ್ತು ಹಿಸುಕಿ ಕೊಲೆ ಮಾಡಿ, ಪತಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡರಬೇಕು ಎಂದು ಪೊಲೀಸರು ಅಂದಾಜಿಸಿದ್ದಾರೆ.
ಪಿಲಾರು ನಿವಾಸಿಗಳಾದ ಶೋಭಾ ಪೂಜಾರಿ (45) ಕೊಲೆಯಾದ ಮಹಿಳೆ ಮತ್ತು ಆಕೆಯ ಪತಿ ಶಿವಾನಂದ ಪೂಜಾರಿ (55) ಆತ್ಮಹತ್ಯೆ ಮಾಡಿಕೊಂಡವರು ಎಂದು ಗುರುತಿಸಲಾಗಿದೆ.
ಗುರುವಾರ ಬೆಳಗ್ಗೆ ಹತ್ತು ಗಂಟೆಯ ಸುಮಾರಿಗೆ ಶೋಭಾ ಅವರು ಮನೆಯ ಹತ್ತಿರದ ಮನೆಯಿಂದ ಗೊಬ್ಬರ ತಂದಿದ್ದರು. ಮಧ್ಯಾಹ್ನ 12 ಗಂಟೆಯ ವೇಳೆಗೆ ಶೋಭಾ ಅವರ ಹಿರಿಯ ಮಗ ಕಾರ್ತಿಕ್ ತಾಯಿಗೆ ಕರೆ ಮಾಡಿದ್ದು ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಪಕ್ಕದ ಮನೆಯವರಿಗೆ ವಿಚಾರಿಸಲು ತಿಳಿಸಿದ್ದು, ಪಕ್ಕದ ಮನೆಯವರು ಶೋಭಾರ ಮನೆಗೆ ಬಂದ ವೇಳೆ ಬೆಡ್ ರೂಮಿನ ಮಂಚದಲ್ಲಿ ಹೆಣವಾಗಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದಾಗ ಪಕ್ಕದ ತೋಟದಲ್ಲಿ ಶಿವಾನಂದ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪೈಂಟರ್ ಕೆಲಸ ಮಾಡುತ್ತಿದ್ದ ಶಿವಾನಂದ ಪೂಜಾರಿ, ಪತ್ನಿಯೊಂದಿಗೆ ವಿನಾ ಕಾರಣ ಗಲಾಟೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕೆ ಆತ ತನ್ನ ಪತ್ನಿಯನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಬಗ್ಗೆ ಅವರ ಪುತ್ರ ಕಾರ್ತಿಕ್ ನೀಡಿದ ದೂರಿನ ಮೇರೆಗೆ ಉಳ್ಳಾಲ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಉಳ್ಳಾಲ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ, ಪರಿಶೀಲನೆ ನಡೆಸಿದ್ದಾರೆ.
Click this button or press Ctrl+G to toggle between Kannada and English