ಭಜನಾ ಸಂಸ್ಕೃತಿಯಿಂದ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆ ಸಾಧ್ಯವಾಗುತ್ತದೆ : ಕಲ್ಯಾಣಪುರ ಮಠದ ಬಸವಣ್ಣಜ್ಜನವರು

11:11 PM, Monday, September 30th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಉಜಿರೆ: ಆಡು ಮುಟ್ಟದ ಸೊಪ್ಪಿಲ್ಲ, ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾಡದ ಸೇವೆ ಇಲ್ಲ. ಗ್ರಾಮಾಭಿವೃದ್ಧಿ, ಆರೋಗ್ಯ, ಶಿಕ್ಷಣ, ದೇವಸ್ಥಾನಗಳ ಜೀರ್ಣೋದ್ಧಾರ, ಶುದ್ಧನೀರಿನ ಘಟಕಗಳು, ಕೆರೆಗಳ ಪುನಶ್ಚೇತನ, ಮಹಿಳಾ ಸಬಲೀಕರಣ, ಜನಜಾಗೃತಿ ವೇದಿಕೆ ಮೂಲಕ ವ್ಯಸನಮುಕ್ತ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಇತ್ಯಾದಿ ಸೇವಾಕಾರ್ಯಗಳು ವಿಶ್ವಮಾನ್ಯವಾಗಿವೆ ಎಂದು ಕುಂದಗೋಳ ಕಲ್ಯಾಣಪುರ ಮಠದ ಪೂಜ್ಯ ಬಸವಣ್ಣಜ್ಜನವರು ಹೇಳಿದರು.

ಅವರು ಭಾನುವಾರ ಧರ್ಮಸ್ಥಳದಲ್ಲಿ 26ನೆ ವರ್ಷದ ಭಜನಾ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಭಜನಾ ಸಂಸ್ಕೃತಿಯಿಂದ ನಮ್ಮ ಸನಾತನ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆ ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ನಶಿಸಿ ಹೋಗುತ್ತಿರುವ ಭಜನಾಸಂಸ್ಕೃತಿಗೆ ನವಚೈತನ್ಯದೊಂದಿಗೆ ಜೀವಕಳೆ ನೀಡಿ ರಾಗ, ತಾಳ, ಲಯಬದ್ಧವಾಗಿ ಶಿಸ್ತಿನಿಂದ ಹೇಗೆ ಭಜನೆ ಮಾಡಬೇಕೆಂದು ಅವರು ಕಳೆದ 25 ವರ್ಷಗಳಿಂದ ತರಬೇತಿ ನೀಡಿ ವಿಶಿಷ್ಟ ಭಜನಾಪಟುಗಳನ್ನು ರೂಪಿಸಿದ್ದಾರೆ. ಇವರು ಧರ್ಮ ಮತ್ತು ಸಂಸ್ಕೃತಿಯ ಸಂರಕ್ಷಣೆಯ ರೂವಾರಿಗಳಾಗಿ ಆರೋಗ್ಯಪೂರ್ಣ ಸಮಾಜ ರೂಪಿಸಬೇಕೆಂದು ಸ್ವಾಮೀಜಿ ಸಲಹೆ ನೀಡಿದರು.

ಸಂಸದ ಬ್ರಿಜೇಶ್ ಚೌಟ ಶುಭಾಶಂಸನೆ ಮಾಡಿ, ಭಜನೆಯಿಂದ ನಮ್ಮ ಭವ್ಯ ಪರಂಪರೆ ಮತ್ತು ಸಂಸ್ಕೃತಿಯನ್ನು ರಕ್ಷಿಸಬಹುದು. ತರಬೇತಿ ಪಡೆದ ಭಜನಾಪಟುಗಳು ಅವರವರ ಊರಿನಲ್ಲಿ ಭಜನಾ ಸಂಸ್ಕೃತಿಯನ್ನು ಮುಂದುವರಿಸಬೇಕೆಂದು ಸಲಹೆ ನೀಡಿದರು.

ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹನಾಯಕ್ ಭಾಷಣದ ಬದಲು ಭಜನೆಯೊಂದನ್ನು ಸುಶ್ರಾವ್ಯವಾಗಿ ಹಾಡಿದರು.

ಶಾಸಕ ಹರೀಶ್ ಪೂಂಜ ಮಾತನಾಡಿ, ಮಕ್ಕಳಲ್ಲಿ ಮತ್ತು ಯುವಜನತೆಯಲ್ಲಿ ಭಜನಾ ಸಂಸ್ಕೃತಿಯನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು. ಮುಂದೆ ತಾನು ಭಾಗವಹಿಸುವ ಎಲ್ಲಾ ಸಭೆ-ಸಮಾರಂಭಗಳಲ್ಲಿ ಭಜನೆಯ ಮಹತ್ವದ ಬಗ್ಯೆಯೂ ಉಲ್ಲೇಖಿಸುವುದಾಗಿ ತಿಳಿಸಿದರು.

ರಾಸಾಯನಿಕಗಳನ್ನು ಬಳಸಿ ಬೆಳೆಸಿದ ವಿಷಪೂರಿತ ಆಹಾರಗಳ ಸೇವನೆಯಿಂದ ನಮ್ಮ ಆರೋಗ್ಯಕ್ಕೆ ಹಾನಿಯಾಗುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಕ್ಯಾನ್ಸರ್ ರೋಗಿಗಳು ಇರುವ ಬಗ್ಯೆ ಅವರು ಆತಂಕ ವ್ಯಕ್ತಪಡಿಸಿದರು. ಸಾಧ್ಯವಾದಷ್ಟು ನಾವು ಹೊಲ, ತೋಟಗಳಲ್ಲಿ ಭತ್ತ, ತರಕಾರಿಗಳನ್ನು ಬೆಳೆಸಿ ಬಳಸಬೇಕೆಂದು ಅವರು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಎಲ್ಲರೂ ಅಂತರಂಗ ಮತ್ತು ಬಹಿರಂಗ ಶುದ್ಧಿಯೊಂದಿಗೆ ಭಜನೆ ಮಾಡಿದಾಗ ಆತ್ಮಶುದ್ಧಿಯಾಗುತ್ತದೆ. ಮಾನಸಿಕ ಸುಖ-ಶಾಂತಿ, ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.

ಭಜನೆ ಮಾಡುವವರು ಎಂದೂ ದುಶ್ಚಟಗಳಿಗೆ ಬಲಿಯಾಗದೆ ಆದರ್ಶ ಹಾಗೂ ಸಾರ್ಥಕ ಜೀವನ ನಡೆಸಬೇಕೆಂದು ಹೇಳಿ ಶುಭ ಹಾರೈಸಿದರು.

ಶಿಬಿರಾರ್ಥಿಗಳ ಪರವಾಗಿ ಉಮೇಶ್ ಶೆಟ್ಟಿ ಅನಿಸಿಕೆ ವ್ಯಕ್ತಪಡಿಸಿದರು. ಭಜನಾಕಮ್ಮಟದ ಕಾರ್ಯದರ್ಶಿ ಎ.ವಿ.ಶೆಟ್ಟಿ ವರದಿ ಸಾದರಪಡಿಸಿದರು. ಮಾಣಿಲದ ಮೋಹನದಾಸ ಸ್ವಾಮೀಜಿ, ಹೇಮಾವತಿ ವೀ. ಹೆಗ್ಗಡೆಯವರು, ಡಿ. ಸುರೇಂದ್ರ ಕುಮಾರ್ ಮತ್ತು ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.

ಭಜನಾಕಮ್ಮಟದ ಸಂಚಾಲಕ ಸುಬ್ರಹ್ಮಣ್ಯಪ್ರಸಾದ್ ಸ್ವಾಗತಿಸಿದರು. ಧನ್ಯಕುಮಾರ್ ಧನ್ಯವಾದವಿತ್ತರು. ಶ್ರೀನಿವಾಸ ರಾವ್ ಧರ್ಮಸ್ಥಳ ಕಾರ್ಯಕ್ರಮ ನಿರ್ವಹಿಸಿದರು.

ದಿನಾಂಕ: 23-09-2024 ರಿಂದ 28-09-2024 ರ ವರೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 7 ದಿನಗಳ ಕಾಲ ನಡೆದ ಭಜನಾ ಕಮ್ಮಟದಲ್ಲಿ ಭಾಗವಹಿಸಿದ ಭಜನರಿಗೆ ಪ್ರಥಮ ಬಾರಿ ಭಜಕರ ಮೇಲೆ ಭಜನೆಯಿಂದಾಗುವ ವೈದ್ಯಕೀಯ ಪರಿಣಾಮವು ಸಂಶೋಧನೆ ಮೂಲಕ ಪ್ರಯತ್ನ ನಮ್ಮ ಎಸ್.ಡಿ.ಎಮ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿದ್ದು, ಮಾನಸಿಕ ಮತ್ತು ದೈಹಿಕ ಕಲ್ಯಾಣದ ಮೇಲೆ ಕೇಂದ್ರೀಕೃತವಾಗಿದೆ. ಈ ಅಧ್ಯಯನದಿಂದ ಭಜನೆ ಮೂಲಕ ಆಗುವ ಸಕಾರಾತ್ಮಕ ಬದಲಾವಣೆಗಳು ಈ ಸಂಶೋಧನೆಯಿಂದ ಆರೋಗ್ಯದಲ್ಲಿ ಸಕಾರಾತ್ಮಕ ಪರಿಣಾಮಗಳನ್ನು ತೋರಿಸಿದೆ, ಭಜನಾ ಕಮ್ಮಟದಲ್ಲಿ ಭಾವನಾತ್ಮಕ ಸ್ಥಿರತೆಯನ್ನು ಉತ್ತಮಗೊಳಿಸುವುದು, ಒತ್ತಡವನ್ನು ಕಡಿಮೆ ಮಾಡುವುದು ಮತ್ತು ಒಟ್ಟಾರೆ ಮನಸ್ಸಿನ ಮತ್ತು ದೇಹದ ಸ್ಥಿತರೆಯನ್ನು ಉತ್ತೇಜನಗೊಳಿಸುವುದು. ಹಾಗೂ ದೇಹದಲ್ಲಿ ಕೊಬ್ಬಿನ ಅಂಶ , ದೇಹಕ್ಕೆ ಬೇಡವಾದ ಕೊಬ್ಬಿನ ಅಂಶ ಕಡಿಮೆಯಾಗಿ ದೇಹಕ್ಕೆ ಬೇಕಾದ ಒಳ್ಳೆಯ ಕೊಬ್ಬಿನ ಅಂಶ ಅಧಿಕಗೊಳಿಸುತ್ತದೆ. ಈ ಮೂಲಕ ಹೃದಯ ಸಂಬಂಧಪಟ್ಟ ಖಾಯಿಲೆಗಳನ್ನು ತಡೆಗಟ್ಟಲು ಸಹಾಯವಾಗುತ್ತದೆ. ಹಾಗೆ ದೇಹಕ್ಕೆ ಅತ್ಯಗತ್ಯವಾಗಿರುವ ಪಿತ್ತಜನಕಾಂಗದ ಚಟುವಟಿಕೆ ಉತ್ತಮಗೊಳ್ಳುತ್ತದೆ. ನರಮಂಡಲವನ್ನು ಸಮತೋಲನಗೊಳಿಸಿ ಮಾನಸಿಕ ಒತ್ತಡ ಕಡಿಮೆಮಾಡಿ ಉದ್ವೇಗದಿಂದ ಬರುವ ಖಾಯಿಲೆಗಳನ್ನು ತಡೆಗಟ್ಟುವ ಶಕ್ತಿಯನ್ನು ಭಜಕರಲ್ಲಿ ಮೂಡಿಸುತ್ತದೆ.
ಈ ಸಂಶೋಧನೆಯಲ್ಲಿ ಪ್ರಾಚಾರ್ಯರಾದ ಡಾ. ಪ್ರಶಾಂತ್ ಶೆಟ್ಟಿ, ಶಾಂತಿವನದ ಮುಖ್ಯ ವೈಧ್ಯಾಧಿಕಾರಿಗಳಾದ ಡಾ. ಶಿವಪ್ರಸಾದ್ ಶೆಟ್ಟಿ ಹಾಗೂ ವೈದ್ಯರ ತಂಡದವರಿಂದ ಸಂಶೋಧನೆ ನಡೆಸಲಾಗಿದೆ.
ಈ ಭಜನಾ ಕಮ್ಮಟದಲ್ಲಿ ಪ್ರಥಮ ದಿನ ಹಾಗೂ ಕೊನೆಯ ದಿನ ಸಂಶೋದನಾ ತಂಡವು ಸುಮಾರು ೬೦೦ ಭಜಕರಲ್ಲಿ ೨೦ ಮಂದಿಯನ್ನು ಆಯ್ಕೆ ಮಾಡಿ ಅಧ್ಯಯನ ನಡೆಸಲಾಗಿತ್ತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English